ರಾಜಕೀಯ ಬದಲಾವಣೆಯಲ್ಲಿ ಚಳವಳಿ ಪ್ರಮುಖ ಪಾತ್ರವಹಿಸಿದೆ: ದಿನೇಶ್ ಅಮೀನ್ ಮಟ್ಟು

Update: 2023-02-05 16:44 GMT

ಬೆಂಗಳೂರು, ಫೆ. 5: ನಮ್ಮ ದೇಶದ ರಾಜಕೀಯ ಪರಿಸ್ಥಿತಿ ಬದಲಾವಣೆ ಮಾಡುವಲ್ಲಿ ಚಳವಳಿಗಳ ಪಾತ್ರ ಬಹುಮುಖ್ಯವಾದದ್ದು ಎಂದು ಹಿರಿಯ ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.

ರವಿವಾರ ನಗರದ ಗಾಂಧಿಭವನ ಸಭಾಂಗಣದಲ್ಲಿ ನಮ್ಮ ಧ್ವನಿ ಬಳಗವೂ ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್ ಅವರ ನೆನಪಿನಲ್ಲಿ ಆಯೋಜಿಸಿದ್ದ ಪ್ರಬುದ್ಧ ಭಾರತ ಕಾರ್ಯಕ್ರಮದಲ್ಲಿ ‘ಚಳವಳಿ ಗುರಿ ಹಾಗೂ ದಾರಿ’ ವಿಷಯ ಕುರಿತ  ಅವರು ಮಾತನಾಡಿದರು.

ನಮ್ಮ ಸಂವಿಧಾನದಲ್ಲಿ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ ಪ್ರಧಾನ ಸ್ಥಾನವನ್ನು ಹೊಂದಿವೆ. ಒಂದು ವೇಳೆ, ಈ ಮೂರು ವಿಭಾಗಗಳು ವಿಫಲವಾಗಿ, ವ್ಯವಸ್ಥೆ ಆಸ್ತಿರವಾದರೆ, ಚಳವಳಿ ಒಂದೇ ಪರಿಹಾರ ಆಗಿದೆ.ಹೀಗಾಗಿ, ನಮ್ಮಲ್ಲಿರುವ ಸಣ್ಣ ಮಟ್ಟದ ಗೊಂದಲಗಳನ್ನು ದೂರ ಇರಿಸಿ ಚಳವಳಿಗಳಲ್ಲಿ ಸಕ್ರಿಯವಾಗಬೇಕಾಗಿದೆ ಎಂದು ಕರೆ ನೀಡಿದರು.

1975ರಿಂದ ಹತ್ತು ವರ್ಷಗಳ ಕಾಲ ಕರ್ನಾಟದಲ್ಲಿ ಭಾಷಾವಾರು ಸೇರಿದಂತೆ ಅನೇಕ ಚಳವಳಿಗಳು ನಡೆದವು.ಈ ಅವಧಿಯನ್ನು ಚಳವಳಿ ದಶಕ ಎಂದೇ ನೆನಪು ಮಾಡಿಕೊಳ್ಳಬಹುದು. ಇಂತಹ ಬೆಳವಣಿಗೆಯಿಂದ ಆಗಿನ, ಯುವಕರು ಹಲವು ವಿಚಾರಗಳನ್ನು ತಿಳಿದುಕೊಂಡು, ಸಮಾಜ ಸಮಸ್ಯೆಗಳಿಗೆ ಧ್ವನಿಯಾದರು. ಆನಂತರ, ಅಂದರೆ, ಇಪ್ಪತ್ತು ವರ್ಷಗಳ ಹಿಂದೆ ಜನಿಸಿದ ಯುವಕರು ಇದೀಗ ಬಹುತೇಕರು ಭಕ್ತರ ಸಾಲಿಗೆ ಬರುತ್ತಾರೆ ಎಂದು ವಿಶ್ಲೇಷಿಸಿದರು.

ದಲಿತ ಹೋರಾಟಗಾರ ಮಾವಳ್ಳಿ ಶಂಕರ್ ಮಾತನಾಡಿ, ಬ್ರಾಹ್ಮಣ್ಯವು ಮೂಲದಲ್ಲಿ ಧಾರ್ಮಿಕ ಶೋಷಣೆಯಾಗಿತ್ತು. ಆದರೆ ಈಗ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳನ್ನೂ ಆವರಿಸಿದೆ. ಎಲ್ಲೆಡೆಯೂ ತನ್ನ ಪ್ರಭಾವ ಬೀರುವ ಮೂಲಕ ಪ್ರಗತಿಗೂ ಅಡ್ಡಿಯಾಗಿದೆ.ಇಂತಹ ಸಂದರ್ಭದಲ್ಲಿ ದಲಿತ ಚಳವಳಿಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ನಮ್ಮ ಹುಡುಗರು ಎಲ್ಲರ ಎದುರೇ ಶೌರ್ಯದಿಂದ ನುಗ್ಗಿ ಫಾಝಿಲ್ ಕೊಲೆ ಮಾಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್‍ನ ಶರಣ್ ಪಂಪ್‍ವೆಲ್ ಹೇಳಿದ್ದಾನೆ. ಆದರೆ, ಆತ ಏಕೆ ಕರಾವಳಿ ಭಾಗದ ಜನರ ಸಮಸ್ಯೆ ಕುರಿತು ಮಾತನಾಡುವುದಿಲ್ಲ ಎಂದು ಪ್ರಶ್ನೆ ಮಾಡಿದರು.

ಶರಣ್ ಪಂಪ್‍ವೆಲ್ ವಿರುದ್ಧ ಬಹುತೇಕರು ಮಾತನಾಡಲು ಹಿಂದೇಟು ಹಾಕುತ್ತಾರೆ. ಆದರೆ, ಸುರತ್ಕಲ್ ಟೋಲ್‍ಗೇಟ್ ವಿಚಾರವಾಗಿ ನಡೆದ ಹೋರಾಟಗಳಲ್ಲಿ ಏಕೆ ಆತ ಸುಮ್ಮನಿದ್ದ.ಜನರಿಗೆ ತೊಂದರೆ ಆದಾಗ ಮಾತನಾಡುವುದಿಲ್ಲವೇಕೆ ಎಂದ ಅವರು, ಚಳವಳಿಗಳಿಂದಲೇ ಒಂದಿಟ್ಟು ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿದೆ ವಿನಃ, ವಿಧಾನಸಭಾದಲ್ಲಿ ಕುಳಿತು ಮಾತನಾಡುವದರಿಂದ ಅಲ್ಲ ಎಂದರು.

ಈ ಸಂದರ್ಭದಲ್ಲಿ ಚಿಂತಕಿ ಅಖಿಲಾ ವಿದ್ಯಾಸಂದ್ರ, ಹೋರಾಟಗಾರದ ವಾಸುದೇವ ರೆಡ್ಡಿ ಸೇರಿದಂತೆ ಪ್ರಮುಖರಿದ್ದರು.

Similar News