ವಕ್ಫ್ ಆಸ್ತಿಗಳ ದುರುಪಯೋಗ ತಡೆಗೆ ಕ್ರಮ: ಶಾಫಿ ಸಅದಿ

Update: 2023-02-05 17:12 GMT

ಕೊಪ್ಪಳ, ಫೆ.4: ಜಿಲ್ಲೆಯಲ್ಲಿ ಹಲವು ವಕ್ಫ್ ಆಸ್ತಿಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ಅತಿಕ್ರಮಿಸಿಕೊಂಡು ಬೇರೆಯವರಿಗೆ ಭೋಗ್ಯ ನೀಡುವುದು, ಖರೀದಿ ನೀಡುವುದು, ಮಾರಾಟ ಮಾಡುವುದು ನಡೆಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ತಿಳಿಸಿದರು.

ರವಿವಾರ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದ ಮಸೀದಿ ಮತ್ತು ದರ್ಗಾಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಿದ್ದಾಪುರ ಮಸೀದಿ ಸಮಿತಿಯ ಕಚೇರಿಯನ್ನು ಉದ್ಘಾಟಿಸಿದರು ಹಾಗೂ ಗಂಗಾವತಿ ಪಟ್ಟಣದ ವಕ್ಫ್ ಸಂಸ್ಥೆಗಳ ಅಧ್ಯಕ್ಷರ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.

ವಕ್ಫ್ ಮಂಡಳಿಯಲ್ಲಿ ನೋಂದಣಿಯಾಗದ ಸಂಸ್ಥೆಗಳಿಗೆ ತಿಳಿ ಹೇಳಿ ವಕ್ಫ್ ಮಂಡಳಿಯಲ್ಲಿ ನೋಂದಣಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವಕ್ಫ್ ಕಾರ್ಯಾಗಾರ ನಡೆಸಲು ಮತ್ತು ವಕ್ಫ್ ಮಂಡಳಿಯ ಮಾದರಿ ನಿಯಮಾವಳಿಯಂತೆ ಪ್ರತಿ ವಕ್ಫ್ ಸಂಸ್ಥೆಗಳಿಗೆ ಸಮಿತಿ ರಚಿಸಿಕೊಂಡು 3 ವರ್ಷದ ಅವಧಿಗೆ ಅಂಗಿಕಾರ ಪಡೆದುಕೊಂಡು ಅನುಸರಣೆ ಮಾಡಬೇಕು ಎಂದು ಶಾಫಿ ಸಅದಿ ತಿಳಿಸಿದರು.

ಜಿಲ್ಲೆಯಲ್ಲಿರುವ ಎಲ್ಲ ತಾಲೂಕುಗಳಲ್ಲಿ ಒಟ್ಟು 1,373 ಸಂಸ್ಥೆಗಳಿದ್ದು ಇದರಲ್ಲಿ ಮಸೀದಿಗಳು, ಈದ್ಗಾ, ಖಬರಸ್ಥಾನಗಳು,  ಅಶೂರಖಾನಾಗಳು, ಶಾದಿಮಹಲ್‍ಗಳು, ದರ್ಗಾಗಳು ಹಾಗೂ  ಮದ್ರಸಾಗಳಿವೆ. ಇವೆಲ್ಲವು ವಕ್ಫ್ ಆಸ್ತಿಗಳಾಗಿದ್ದು ಇದರ ರಕ್ಷಣೆ ಪೋಷಣೆ ಸ್ಥಳಿಯ ಆಡಳಿತ ಮಂಡಳಿಗಳದ್ದು. ಕಡ್ಡಾಯವಾಗು ಪ್ರತಿ 3 ವರ್ಷಕೊಮ್ಮೆ ಸಮಿತಿಗಳನ್ನು ಅನುಮೋದಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಇದಲ್ಲದೆ ವಕ್ಫ್ ಮಂಡಳಿಯಲ್ಲಿ ನೋಂದಾಯಿಸಲ್ಪಟ್ಟ ಆಸ್ತಿಗಳು ವಾರ್ಷಿಕ ಶೇ.7 ರಷ್ಟು ವಂತಿಗೆಯನ್ನು ವಕ್ಫ್ ಮಂಡಳಿಗೆ ನೀಡುವಂತೆ ನಿಯಮ ಜಾರಿಯಲ್ಲಿದ್ದರೂ ಬಹುತೇಕ ಸಮಿತಿಗಳು ಆದಾಯ ಕಡಿಮೆ ತೋರಿಸಿ ವಂತಿಗೆಯನ್ನು ಪಾವತಿಸದೆ ವಂಚಿಸುತ್ತಿವೆ ಇದು ಸರಿಯಾದ ಕ್ರಮವಲ್ಲ ಎಂದು ಶಾಫಿ ಸಅದಿ ತಿಳಿಸಿದರು.

Similar News