‘ಅದಾನಿ ಗ್ರೂಪ್’ ಹಗರಣ: ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಧರಣಿ

Update: 2023-02-06 13:45 GMT

ಬೆಂಗಳೂರು, ಫೆ. 6: ಅದಾನಿ ಸಮೂಹವು ಅಕ್ರಮವಾಗಿ ಶೇರುಗಳ ಮೌಲ್ಯ ಏರಿಕೆ-ಇಳಿಕೆ ಮಾಡಿರುವ ಪ್ರಕರಣ ಮುಚ್ಚಿ ಹಾಕಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕರು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಸೋಮವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಕೆಪಿಸಿಸಿ ಬೆಂಗಳೂರು ಕೇಂದ್ರ, ದಕ್ಷಿಣ ಹಾಗೂ ಉತ್ತರ ಘಟಕದ ವತಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿಎಲ್‍ಐಸಿ, ಎಸ್‍ಬಿಐ ಉಳಿಸಿ ಎಂದು ಘೋಷಣೆ ಕೂಗಿದರು.

ಅದಾನಿ ಸಮೂಹದ ಆಸ್ತಿ 8ಸಾವಿರ ಕೋಟಿ ರೂ.ಗಳಿಂದ 9.90 ಲಕ್ಷ ಕೋಟಿ ರೂ.ಆಗಲು ಕಾರಣ ಏನು ಎಂಬುದು ಬಹಿರಂಗವಾಗಬೇಕಿದೆ. ಅದಾನಿಯಂತಹ ಉದ್ಯಮ ಸಮೂಹ ರಕ್ಷಿಸಲು ಪ್ರಧಾನಿ ಅವರು ಮುಂದಾಗಿರುವುದು ದೇಶದ ಇತಿಹಾಸದಲ್ಲೇ ಮೊದಲು ಎಂದು ಪ್ರತಿಭಟನಾಕಾರರು ವಾಗ್ದಾಳಿ ನಡೆಸಿದರು.

ಅದು ಅಲ್ಲದೆ, ಆಪ್ತ ಮಿತ್ರ ಗೌತಮ್ ಅದಾನಿ ಅವರನ್ನು ರಕ್ಷಿಸಲು ಪ್ರಧಾನಿ ಮೋದಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ಸಂಸತ್‍ನಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಲಕ್ಷ ಕೋಟಿಗಳ ಮೊತ್ತದ ಬಹು ದೊಡ್ಡ ಹಗರಣ ನಡೆದಿದೆ. ನಮ್ಮ ಹೋರಾಟ ನಿರಂತರ ಮುಂದುವರಿಯಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಹಿಂಡೆನ್‍ಬರ್ಗ್ ಸಂಶೋಧನಾ ವರದಿಯಲ್ಲಿ ಅದಾನಿ ಗುಂಪಿನ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ಮುಖ್ಯ ನ್ಯಾಯಮೂರ್ತಿ ಅಥವಾ ಜಂಟಿ ಸಂಸದೀಯ ಸಮಿತಿ ಅವರ ಮೇಲ್ವಿಚಾರಣೆಯಲ್ಲಿ ನಿಷ್ಪಕ್ಷಪಾತ ತನಿಖೆಗೆ ನಡೆಸಬೇಕು ಎಂದು ಆಗ್ರಹಿಸಿದರು.

ದೇಶದ ಜನರ ಕೂಡಿಟ್ಟ ಹಣವನ್ನು ಕೇಂದ್ರದ ಬಿಜೆಪಿ ಸರಕಾರ ತಮ್ಮ ಸ್ನೇಹಿತರ ಕಂಪೆನಿಗಳ ಲಾಭಕ್ಕಾಗಿ ಸಾರ್ವಜನಿಕ ಸಂಸ್ಥೆಗಳಾದ ಎಸ್‍ಬಿಐ, ಎಲ್‍ಐಸಿ ಹಾಗೂ ಇನ್ನಿತರ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ವಿರುದ್ಧ ಈ ಹೋರಾಟ ನಡೆಸಲಾಗುತ್ತಿದೆ ಎಂದರು. ಬಿಬಿಎಂಪಿ ಮಾಜಿ ಮೇಯರ್‍ಗಳಾದ ಮಂಜುನಾಥ ರೆಡ್ಡಿ, ಗಂಗಾಬಿಕೆ ಸೇರಿದಂತೆ ಪ್ರಮುಖರಿದ್ದರು.

Similar News