SSLC ಪೂರ್ವ ಸಿದ್ಧತಾ ಪರೀಕ್ಷೆ; ವಿದ್ಯಾರ್ಥಿಗಳಿಂದ ಹಣ ವಸೂಲಿಗೆ ನಿರಂಜನಾರಾಧ್ಯ ಖಂಡನೆ

Update: 2023-02-06 15:18 GMT

ಬೆಂಗಳೂರು, ಫೆ.6: ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶಕರು 2022-23ನೆ ಸಾಲಿನ ಎಸೆಸೆಲ್ಸಿ ರಾಜ್ಯಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಗೆ ಶುಲ್ಕವಾಗಿ ಎಲ್ಲ ಸರಕಾರಿ ಹಾಗು ಅನುದಾನಿತ ಶಾಲೆಗಳಲ್ಲಿ 10ನೆ ತರಗತಿಯ ವಿದ್ಯಾರ್ಥಿಗಳಿಂದ ತಲಾ 60ರೂ.ಸಂಗ್ರಹಿಸಲು ಆದೇಶ ಹೊರಡಿಸಿರುವುದನ್ನು ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಖಂಡಿಸಿದೆ.

ಸೋಮವಾರ ಈ ಕುರಿತು ವೇದಿಕೆಯ ಮಹಾಪೋಷಕ ನಿರಂಜನಾರಾಧ್ಯ ವಿ.ಪಿ. ಪ್ರಕಟನೆ ಹೊರಡಿಸಿದ್ದು, ಪ್ರತಿವರ್ಷ ಮಕ್ಕಳು ಪಾವತಿಸಿದ ಪರೀಕ್ಷಾ ಶುಲ್ಕದಲ್ಲಿಯೇ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಪರೀಕ್ಷಾ ಮಂಡಳಿಯೇ ನಡೆಸುತ್ತಿತ್ತು. ಮಂಡಳಿ ಮಕ್ಕಳಿಂದ ಈಗಾಗಲೇ ಶುಲ್ಕ ವಸೂಲಿ ಮಾಡಿದ್ದು, ಆ ಹಣದಲ್ಲೇ ಪೂರ್ವಸಿದ್ಧತಾ ಪರೀಕ್ಷೆಯನ್ನು ನಡೆಸಬೇಕಿದೆ. ಆದರೆ, ಈಗ ಮಂಡಳಿಯು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿ ಪ್ರಶ್ನೆ ಪತ್ರಿಕೆಯನ್ನು ಮುದ್ರಿಸಲು 60 ರೂಪಾಯಿಗಳನ್ನು ವಸೂಲಿ ಮಾಡಲು ಮುಂದಾಗಿರುವುದು ಮಕ್ಕಳ ದೃಷ್ಟಿಯಿಂದ ಹೊರೆಯಾಗಿದೆ ಎಂದು ಆಕ್ಷೇಪಿಸಿದ್ದಾರೆ.

ಇದಲ್ಲದೆ ಮತ್ತೆ ಉತ್ತರ ಪತ್ರಿಕೆಗೂ ಶಾಲೆಯ ಮುಖ್ಯ ಶಿಕ್ಷಕರು ಮಕ್ಕಳಿಂದ ಹಣ ವಸೂಲಿ ಮಾಡುತ್ತಾರೆ. ಇದು ಬಡ ಮಕ್ಕಳಿಗೆ ಮತ್ತು ಕುಟುಂಬಗಳಿಗೆ ಎರಡು   ಪಟ್ಟು ಹೊರೆಯಾಗಲಿದ್ದು, ಸರಕಾರ ಬಡ ಮಕ್ಕಳಿಗೆ ಮಾಡಿದ ಅನ್ಯಾಯವಾಗಿದೆ. ಮಂಡಳಿಯಲ್ಲಿ ಕೋಟ್ಯಂತರ ಹಣವಿದ್ದು, ಮಂಡಳಿಯೇ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಸರಬರಾಜು ಮಾಡಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ರಾಜ್ಯಮಟ್ಟದಲ್ಲಿ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Similar News