ಕಾರ್ಮಿಕ ವಿರೋಧಿ ನಿಲುವು ಖಂಡಿಸಿ ಭಾರತೀಯ ಮಜ್ದೂರ್ ಸಂಘದಿಂದ ‘ಬೆಂಗಳೂರು ಚಲೋ'

ಸ್ಥಳಕ್ಕೆ ಸಚಿವ ಮುನಿರತ್ನ ಭೇಟಿ: ಸಮಸ್ಯೆ ಪರಿಹರಿಸುವ ಭರವಸೆ

Update: 2023-02-06 16:01 GMT

ಬೆಂಗಳೂರು, ಫೆ. 6: ಸರಕಾರದ ಕಾರ್ಮಿಕ ವಿರೋಧಿ ನಿಲುವುಗಳನ್ನು ಖಂಡಿಸಿ ಭಾರತೀಯ ಮಜ್ದೂರ್ ಸಂಘದಿಂದ ಫ್ರೀಡಂ ಪಾರ್ಕ್‍ನಲ್ಲಿ ಬೆಂಗಳೂರು ಚಲೋ ಬೃಹತ್ ಪ್ರತಿಭಟನೆ ನಡೆಲಾಯಿತು.

ಸೋಮವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದ ತೋಟಗಾರಿಕಾ ಸಚಿವ ಮುನಿರತ್ನ, ಸರಕಾರ ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರು ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಗಮನಿಸಿದೆ. ಕಾರ್ಮಿಕರ ಎಲ್ಲ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಅವುಗಳ ಪರಿಹಾರಕ್ಕೆ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು.

ಇದೇ ವೇಳೆ ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಒಳ ಹಾಗೂ ಹೊರ ಗುತ್ತಿಗೆ ನೌಕರರ ಸೇವಾ ಭದ್ರತೆ ಕುರಿತ ಶ್ರೀನಿವಾಸಚಾರ್ ವರದಿಯನ್ನು ತಕ್ಷಣ ಜಾರಿ ಮಾಡಬೇಕು. ಅವರ ಸೇವೆಯ ಆಧಾರದ ಮೇಲೆ ನೌಕರರನ್ನು ಖಾಯಂಗೊಳಿಸಬೇಕು. ಸಾರಿಗೆ ಸಂಸ್ಥೆಯ ನೌಕರರ ವೇತನ ಪರಿಷ್ಕರಣೆ ಮಾಡಬೇಕಿ. ಸರಕಾರಿ ನೌಕರರಿಗೆ ಸಮಾನ ವೇತನ ನಿಗದಿಗೊಳಿಸಬೇಕು. ಸರಕಾರದ ಎಲ್ಲ ಇಲಾಖೆಯಲ್ಲಿರುವ ಒಳಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ಕೈ ಬಿಡಬೇಕು. ಹಾಲಿ ಇರುವ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಸಚಿವರ ಮೂಲಕ ಮುಖ್ಯಮಂತ್ರಿಗೆ ಒತ್ತಾಯಿಸಲಾಯಿತು.

ಎಲ್ಲ ಕಾರ್ಮಿಕರ ಇಎಸ್‍ಐ ಯೋಜನೆಯ ಸೌಲಭ್ಯದ ಮಿತಿಯನ್ನು 21ಸಾವಿರದಿಂದ 35ಸಾವಿರ ರೂ.ಗಳವರೆಗೆ ಏರಿಸಬೇಕು. ಅಂಗನವಾಡಿ, ಆಶಾ ಮತ್ತು ಬಿಸಿಯೂಟದ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಅವರ ಮಾಸಿಕ ಗೌರವಧನ ಹೆಚ್ಚಿಸಬೇಕು. ಕೇರಳ ಮತ್ತು ತಮಿಳು ನಾಡು ಮಾದರಿಯಲ್ಲಿ ಪ್ರತ್ಯೇಕ ಮಂಡಳಿ ರಚನೆ ಮಾಡಬೇಕು. ಎಲ್ಲ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಪಿಂಚಣಿ ಐದು ಸಾವಿರ ರೂಪಾಯಿವರೆಗೆ ಏರಿಸಬೇಕು ಎಂದು ಪ್ರತಿಭಟನಾಕಾರರು ತಿಳಿಸಿದರು.

ಪ್ರತಿಭಟನೆಯಲ್ಲಿ ಬಿಎಂಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಲ್.ವಿಶ್ವನಾಥ್, ಉಪಾಧ್ಯಕ್ಷ ವೆಂಕಟೇಶ್, ಆರೋಗ್ಯ ಇಲಾಖೆಯ ಒಳಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ವಿಶ್ವರಾಧ್ಯ ಯಾಮೋಜಿ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತಸ್ವಾಮಿ, ಸೇರಿದಂತೆ ಅನೇಕರು ಹಾಜರಿದ್ದರು.

Similar News