ಒತ್ತಡಕ್ಕೆ ಮಣಿದು ಬಲಾಢ್ಯರಿಗೆ ಮೀಸಲಾತಿ ಕಲ್ಪಿಸಿದರೆ ಕಾನೂನು ಹೋರಾಟ: ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಎಚ್ಚರಿಕೆ

Update: 2023-02-06 18:33 GMT

ಬೆಂಗಳೂರು, ಫೆ, 6; ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಯಾಗಲು ಹಿಂ.ವರ್ಗಗಳ ಆಯೋಗದ ಶಿಫಾರಸ್ಸುಗಳ ಬಗ್ಗೆ ತೀರ್ಮಾನ ಕೈಗೊಳ್ಳದೆ ರಾಜಕೀಯ ಒತ್ತಡಕ್ಕೆ ಮಣಿದು ಕೆಲ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ಮುಂದಾಗಿರುವ ರಾಜ್ಯ ಸರಕಾರದ ವಿರುದ್ಧ ಕಾನೂನು ಹೋರಾಟ ನಡೆಸುವುದು ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಎಚ್ಚರಿಕೆ ನೀಡಿದೆ.

ಸೋಮವಾರ ಈ ಕುರಿತು ಪ್ರಕಟನೆ ನೀಡಿರುವ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ವೆಂಕಟರಾಮಯ್ಯ, ‘ಯಾವುದೇ ಕಾರಣಕ್ಕೂ ರಾಜಕೀಯ ಒತ್ತಡಕ್ಕೆ ಮಣಿದು ದ್ವನಿಯಿಲ್ಲದ ಸಮಾಜಗಳ ದ್ವನಿ ಅಡಗಿಸಲು ಹೊರಟಿರುವ ಸರಕಾರದ ನಡೆ ಖಂಡನೀಯ. ಆಯೋಗದ ಶಿಫಾರಸ್ಸು ಇಲ್ಲದೆ ಕೆಲ ಸಮುದಾಯಗ ಒಲೈಕೆಗೆ ಸಾಮಾಜಿಕ ನ್ಯಾಯಕ್ಕೆ ವಿರುದ್ಧ’ ಎಂದು ಆಕ್ಷೇಪಿಸಿದ್ದಾರೆ.

ಕಾಂತರಾಜ್ ಆಯೋಗ 170 ಕೋಟಿ ರೂ.ವೆಚ್ಚ ಮಾಡಿ ಆರ್ಥಿಕ, ಸಾಮಾಜಿಕ ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು ಆ ವರದಿ ಬಹಿರಂಗಕ್ಕೆ ಯಾರೂ ಒತ್ತಾಯ ಮಾಡುತ್ತಿಲ್ಲ. ಆಯೋಗದ ಕಾರ್ಯದರ್ಶಿ ಸಹಿ ಹಾಕಿಲ್ಲ ಎಂದು ಸಬೂಬು ಹೇಳುತ್ತಾ ಜನರಿಗೆ ವಂಚನೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿ ಬಹಳ ವರ್ಷಗಳಿಂದ ಪರಿಷ್ಕರಣೆಯಾಗಿಲ್ಲ. ಇದರಿಂದ ಬಲಾಢ್ಯರು ಮೀಸಲಾತಿ ಪಡೆದು ಶೋಷಿತರ ಪಾಲನ್ನು ಕಬಳಿಸುತ್ತಿದ್ದಾರೆ. ಇದನ್ನು ಮನಗೊಂಡು ಸರಕಾರ ಮೀಸಲಾತಿ ಪರಿಷ್ಕರಣೆ ಮಾಡದೆ ಸಮ ಸಮಾಜ ನಿರ್ಮಾಣಕ್ಕಾಗಿ ಆಸಕ್ತಿವಹಿಸದಿರುವುದು ಅನ್ಯಾಯ ಎಂದು ಅವರು ಹೇಳಿದ್ದಾರೆ.

Similar News