ಫೆ.9ರಂದು ಸುಂದರೀಕರಣಗೊಂಡ ಕೂಳೂರಿನ ಮೇಲ್ಸೇತುವೆಯ ತಳಭಾಗ ಲೋಕಾರ್ಪಣೆ

Update: 2023-02-07 10:44 GMT

ಮಂಗಳೂರು, ಫೆ.7: ಸುಂದರೀಕರಣಗೊಂಡ ಕೂಳೂರಿನ ಮೇಲ್ಸೇತುವೆಯ ತಳಭಾಗದ ಲೋಕಾರ್ಪಣೆಯು ಫೆ.9ರಂದು ಸಂಜೆ 4:30ಕ್ಕೆ ನಡೆಯಲಿದೆ ಎಂದು ನಾಗರಿಕ ಹಿತರಕ್ಷಣಾ ಸಮಿತಿಯ ಗುರುಚಂದ್ರ ಹೆಗ್ಡೆ ಗಂಗಾರಿ ಕೂಳೂರು ಹೇಳಿದರು.

ಕೂಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಮೇಲ್ಸೇತುವೆಯ ತಳಭಾಗದಲ್ಲಿ ತ್ಯಾಜ್ಯ ರಾಶಿ ಬಿದ್ದು ಸಾರ್ವಜನಿಕರು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಗಮನಿಸಿದ ಸಮಾನಮನಸ್ಕರು ನಾಗರಿಕ ಹಿತರಕ್ಷಣಾ ಸಮಿತಿಯನ್ನು ಅಸ್ತಿತ್ವಕ್ಕೆ ತಂದು 1,10,000 ರೂ. ಖರ್ಚು ಮಾಡಿ ಫ್ಲೈ ಓವರ್ ಕೆಳಗಡೆ ಸುಂದರಗೊಳಿಸುವ ಕೆಲಸಕ್ಕೆ ಚಾಲನೆ ನೀಡಿದೆವು. ಹಸಿರನ್ನು ಉಳಿಸುವ ನಿಟ್ಟಿನಲ್ಲಿ ನಾಲ್ಕೈದು ವರ್ಷ ಚೆನ್ನಾಗಿ ನೋಡಿಕೊಂಡೆವು. ಆದರೆ ಕೋವಿಡ್ ಸಂದರ್ಭದಲ್ಲಿ ನಿರ್ವಹಣೆ ಕಷ್ಟವಾಯಿತು. ಕೋವಿಡ್ ವೇಳೆ ಸಾಮಾಜಿಕ ಸಂಘಟನೆಗಳು ನಿರಾಶ್ರಿತರಿಗೆ ನೀಡಲಾದ ಆಹಾರದ ಪೊಟ್ಟಣದ ತ್ಯಾಜ್ಯವು ಇಲ್ಲಿ ರಾಶಿ ಬಿದ್ದಿತ್ತು. ಅದನ್ನು ಸ್ಥಳೀಯ ಮನಪಾ ಸದಸ್ಯರಿಗೆ ಹೇಳಿ ಸ್ಥಳಾಂತರಿಸಿದ್ದೆವು. ತಳಭಾಗದ ಸುಂದರೀಕರಣಕ್ಕೆ ಸ್ಥಳೀಯರಿಂದ 4 ಲಕ್ಷ ರೂ. ಸಂಗ್ರಹಿಸಲಾಗಿದೆ. 8 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ ಎಂದರು.

ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ದೃಷ್ಟಿಯಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಭಾಗದ ವಿವಿಧ ಬೃಹತ್ ಕೈಗಾರಿಕೆ, ಕಾರ್ಖಾನೆಗಳಿಗೆ ಮನವಿ ಪತ್ರ ನೀಡಲಾಗಿದೆ. ಆದರೆ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಗುರುಚಂದ್ರ ಹೆಗ್ಡೆ, ಗೌರವಾಧ್ಯಕ್ಷ ಎಂ.ಎಸ್.ಪುತ್ರನ್, ಕಾರ್ಯದರ್ಶಿ ಗಣೇಶ್ ಶೆಟ್ಟಿ, ಉಪಾಧ್ಯಕ್ಷರಾದ ಮನೋಜ್ ಚಂದ್ರ ಶೆಟ್ಟಿ, ಶ್ರೀನಿವಾಸ ಕೂಳೂರು, ಕೋಶಾಧಿಕಾರಿ ಕ್ಲೇವರ್ ಡಿಸೋಜ, ಚಂದ್ರಶೆಟ್ಟಿ, ಮನೋಹರ್ ಶೆಟ್ಟಿ ಉಪಸ್ಥಿತರಿದ್ದರು.

Similar News