ರಾಮಾಯಣ, ಮಹಾಭಾರತದಂತೆ ಸಂವಿಧಾನವನ್ನು ಕಲಿಸಲು ಸಾಧ್ಯವಾಗುತ್ತಿಲ್ಲ: ಎಚ್.ಎನ್. ನಾಗಮೋಹನ್ ದಾಸ್

Update: 2023-02-07 12:12 GMT

ಬೆಂಗಳೂರು, ಫೆ.7: ದೇಶದಲ್ಲಿ ಅನಕ್ಷರಸ್ಥರಿಗೂ ರಾಮಾಯಣ, ಮಹಾಭಾರತವನ್ನು ಕಲಿಸುತ್ತಾರೆ. ಆದರೆ, ಸಂವಿಧಾನವನ್ನು ಕಲಿಸಲು ಸಾಧ್ಯವಾಗುತ್ತಿಲ್ಲ ಎಂದು ಹೈಕೋರ್ಟ್‍ನ ನಿವೃತ್ತ ನ್ಯಾಯಾದೀಶ ಎಚ್.ಎನ್. ನಾಗಮೋಹನ್ ದಾಸ್ ಬೇಸರ ವ್ಯಕ್ತಪಡಿಸಿದ್ದಾರೆ. 

ಮಂಗಳವಾರ ನಗರದ ಕಲಾಗ್ರಾಮದಲ್ಲಿ ರಾಷ್ಟ್ರಕವಿ ಪ್ರೊ. ಜಿ.ಎಸ್. ಶಿವರುದ್ರಪ್ಪ ಮತ್ತು ಜ್ಞಾನಪೀಠ ಪುರಸ್ಕøತ ಪ್ರೊ. ಯು.ಆರ್. ಅನಂತಮೂರ್ತಿ ಪುಣ್ಯಸ್ಥಳ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎಲ್ಲ ಸಾಹಿತಿಗಳು, ಕಲಾವಿದರು ನಮ್ಮ ಸಂವಿಧಾನವನ್ನು ಸಾಧಾರಣ ಜನರಿಗೆ ಯಾವ ರೀತಿ ತಿಳಿಯಪಡಿಸಬೇಕು ಎಂದು ಚಿಂತನೆ ನಡೆಸಬೇಕಾಗಿದೆ. ಆ ದಿಕ್ಕಿನಲ್ಲಿ ಸಾಹಿತಿಗಳು ಕಾರ್ಯಪ್ರವೃತ್ತರಾಗಬೇಕಾಗಿದೆ. ಏಕೆಂದರೆ ಇವತ್ತು ದೇಶ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದೆ ಎಂದರು. 

ದೇಶದ ಸಮಸ್ಯೆಗಳನ್ನು ತೊಲಗಿಸುವ ಏಕೈಕ ಮಾರ್ಗವೆಂದರೆ ಸಂವಿಧಾನವಾಗಿದೆ. ಈ ಸಂವಿಧಾನದ ಮಾರ್ಗದಲ್ಲಿ ನಾವು ಸಾಗಬೇಕಾದರೆ, ಎಲ್ಲ ಪ್ರಕಾರಗಳನ್ನು ಬಳಸಿಕೊಳ್ಳಬೇಕು. ಹಂಪನಾ, ಹರಿಹರ ಪ್ರಿಯರಂತಹವರು ಎಲ್ಲ ಪ್ರಕಾರಗಳನ್ನು ಬಳಕೆ ಮಾಡಿ, ಸಂವಿಧಾನವನ್ನು ಸಾಮಾನ್ಯರಿಗೆ ತಿಳಿಸುವ ಕೆಲಸವನ್ನು ಮಾಡಬೇಕಲು ಎಂದು ಅವರು ಆಶಿಸಿದರು. 

ನಮ್ಮ ಸುತ್ತಮುತ್ತ ಬೆಂಕಿಯನ್ನು ಹಚ್ಚುವ ಸಾಹಿತಿಗಳು ಇದ್ದಾರೆ. ಉಸಿರು ಕಟ್ಟುವ ವಾತಾವರಣದಲ್ಲಿ ನಾವು ಬದುವಂತಹ ಸಾಹಿತ್ಯವನ್ನು ರಚನೆ ಮಾಡುತ್ತಿದ್ದಾರೆ. ಆದರೆ ಸಾಹಿತ್ಯ ಬೆಂಕಿ ಹಚ್ಚು ಸಾಹಿತ್ಯ ಆಗಬಾರದು, ಹಗೆ ಸಾಧಿಸುವ ಸಾಹಿತ್ಯ ಆಗಬಾರದು, ಬದಲಾಗಿ ಬೆಳಕಿನ ಕ್ರಿಯಾಶೀಲ ಸಾಹಿತ್ಯ ನಮಗೆ ಬೇಕಾಗಿದೆ ಎಂದು ಅವರು ತಿಳಿಸಿದರು. 

ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಪ್ರೊ. ಜಿ.ಎಸ್. ಶಿವರುದ್ರಪ್ಪ  ರಾಷ್ಟ್ರೀಯ ಪುರಸ್ಕಾರವನ್ನು ಪುಸ್ತಕಮನೆ ಹರಿಹರಪ್ರಿಯ ಅವರಿಗೆ ನೀಡಲಾಯಿತು. ಸಾಹಿತಿಗಳಾದ ಹಂಪನಾ, ಬಿ.ಟಿ. ಲಲಿತಾ ನಾಯ್ಕ್, ಕುಮಾರ್ ಕೆ.ಎಚ್., ಡಾ. ಪ್ರಿಯದರ್ಶಿನಿ ಮತ್ತಿತರರು ಉಪಸ್ಥಿತರಿದ್ದರು. 

Similar News