ರೈತರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಫ್ರೀಡಂ ಪಾರ್ಕ್‍ನಲ್ಲಿ ಫೆ.16ಕ್ಕೆ ಜನಾಗ್ರಹ ರ‍್ಯಾಲಿ

Update: 2023-02-07 16:35 GMT

ಬೆಂಗಳೂರು, ಫೆ.7: ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತ್ರಿಗೊಳಿಸುವ ಕಾನೂನು ಜಾರಿಯಾಗಬೇಕು ಎಂಬ ಹಲವು ಬೇಡಿಕೆಗಳಿಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಸಮನ್ವಯ ಸಮಿತಿಯಿಂದ ಫೆ.16ಕ್ಕೆ ಬೃಹತ್ ಜನಾಗ್ರಹ ರ‍್ಯಾಲಿ ಮತ್ತು ಪ್ರತಿಭಟನಾ ಸಮಾವೇಶವನ್ನು ನಗರದ ಫ್ರೀಡಂ ಪಾರ್ಕ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಯೋಜಕ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸರಕಾರದ ಭೂ ಸುಧಾರಣಾ, ಎಪಿಎಂಪಿ, ಜಾನುವಾರು ಹತ್ಯೆ, ಭೂಸ್ವಾಧೀನ ಕಾಯ್ದೆ ತಿದ್ದುಪಡಿಗಳು ರದ್ದಾಗಬೇಕು. ಬಡ-ಮಧ್ಯಮ ರೈತರು ಮತ್ತು ಕೃಷಿ ಕೂಲಿಕಾರರಿಗೆ ಬ್ಯಾಂಕ್ ಸಾಲ ನೀಡುವುದು. ಸಾಲ ಮನ್ನಾದಂತಹ ಅಂಶಗಳನ್ನು ಒಳಗೊಂಡ ‘ಋಣ ಮುಕ್ತ ಕಾಯ್ದೆ’ ಜಾರಿಗೊಳಿಸಬೇಕು. ವಿದ್ಯುತ್ ಖಾಸಗೀಕರಣ ನಿಲ್ಲಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ಶಿಕ್ಷಣದ ವ್ಯಾಪಾರಿಕರಣ, ಕೋಮುವಾದಿ ದ್ವೇಷ ರಾಜಕಾರಣ ನಿಲ್ಲಬೇಕು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಆಗ್ರಹಿಸಿ, ರಾಜ್ಯದ ರೈತರು, ದಲಿತರು, ಕಾರ್ಮಿಕರು, ಯುವಜನ, ಮಹಿಳೆಯರು ಸೇರಿದಂತೆ ಸುಮಾರು 25 ಸಾವಿರ ಜನ ಬೃಹತ್ ರ್ಯಾಲಿಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.

ಗುಜರಾತಿನಲ್ಲಿ ನಾಟಿ ಹಸು ಸಾಕಾಣಿಕೆಗೆ ನಾಲ್ಕು ಸಾವಿರ ರೂ. ನೀಡುತ್ತಾರೆ. ಆದರೆ, ಕರ್ನಾಟಕದಲ್ಲಿ ಮುಖ್ಯಮಂತ್ರಿಯು ಗೋವುಗಳನ್ನು ಪ್ರೀತಿಯಿಂದ ಕಾಣುವುದರ ಜತೆಗೆ ಅವುಗಳ ಸಂರಕ್ಷಣೆಗೂ ಮಹತ್ವ ನೀಡಬೇಕು. ಅದೇ ರೀತಿ ವೃದ್ಧಾಶ್ರಮಗಳಾಗಿ ಮಾರ್ಪಾಡಾಗುತ್ತಿರುವ ಹಳ್ಳಿಗಳ ಸಂರಕ್ಷಣೆಗೂ ಮುಂಬರುವ ರಾಜ್ಯ ಬಜೆಟ್‍ನಲ್ಲಿ ಮಹತ್ವ ಕೊಡಬೇಕು ಎಂದು ಮನವಿ ಮಾಡಿದರು. 

ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಟನೆಯ ಅಧ್ಯಕ್ಷರಾದ ಕೆ.ಸಿ.ಬಯ್ಯಾರೆಡ್ಡಿ, ಮಾವಳ್ಳಿ ಶಂಕರ್, ನೂರ್ ಶ್ರೀಧರ್, ಚಂದ್ರಪ್ಪ ಹೊಸ್ಕೆರಾ, ಕೆ.ವಿ.ಭಟ್ ಸೇರಿದಂತೆ ಅನೇಕರು ಇದ್ದರು.

Similar News