ಬೆಂಗಳೂರು | ತಂಗಿ ಜಮೀನಿಗೆ ಬೇಲಿ ಹಾಕಲಿಲ್ಲ ಎಂದು ಕಾರ್ಮಿಕನಿಗೆ ಥಳಿಸಿದ ಇನ್ಸ್ ಪೆಕ್ಟರ್: ಆರೋಪ

Update: 2023-02-07 16:44 GMT

ಬೆಂಗಳೂರು, ಫೆ.7: ತನ್ನ ತಂಗಿಯ ಹೆಸರಿನಲ್ಲಿರುವ ಖಾಲಿ ಜಮೀನಿಗೆ ಸೂಕ್ತ ಸಮಯಕ್ಕೆ ಬೇಲಿ ಹಾಕಲಿಲ್ಲ ಎನ್ನುವ ಕಾರಣಕ್ಕೆ ಪೊಲೀಸ್ ಇಲಾಖೆಯ  ಇನ್ಸ್ ಪೆಕ್ಟರ್ ಒರೊಬ್ಬರು ದಿನಗೂಲಿ ಕಾರ್ಮಿಕರನಿಗೆ ಥಳಿಸಿ, ಠಾಣೆಯಲ್ಲಿ ಅಕ್ರಮವಾಗಿ ಇರಿಸಿಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ.

ಮಂಗಳವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಿನಗೂಲಿ ಕಾರ್ಮಿಕ ಕಿರಣ್ ಕುಮಾರ್, ಯಾವುದೇ ತಪ್ಪನ್ನು ಮಾಡದೆ ನನ್ನ ಮೇಲೆ ವಿನಾಃಕಾರಣ ಉದ್ದೇಶಪೂರಕವಾಗಿ ಮೂರು ದಿನಗಳ ಕಾಲ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಬಂಧಿಸಿ, ಅಂದಿನ ಠಾಣಾ ಇನ್ಸ್ ಪೆಕ್ಟರ್ ಶಿವಕುಮಾರ್ ಸೇರಿದಂತೆ ಹಲವು ಪೇದೆಗಳು ಗುಂಪುಗೂಡಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಜ.12ರಂದು ಮನೆಗೆ ಬಂದ ಕೋಣನಕುಂಟೆ ಪೊಲೀಸ್ ಠಾಣೆಯ ಶೈಲೇಶ್, ಹನುಮಂತ ಬಡಿಗೇರ, ಶ್ರೀಧರ ನಾಯ್ಕ್ ನನಗೆ ಯಾವುದೇ ಮಾಹಿತಿ ನೀಡದೆ ಮನೆಯಿಂದ ಎಳೆದೊಯ್ದು, ಮೂರು ದಿನಗಳ ಕಾಲ ಠಾಣೆಯಲ್ಲಿಟ್ಟು ಥಳಿಸಿದ್ದಾರೆ ಎಂದು ಆಪಾದಿಸಿದರು.

ಪೊಲೀಸ್ ಠಾಣೆಯಲ್ಲಿ ತನ್ನನ್ನು ಕೂಡಿ ಹಾಕಿದ್ದು, ನೀರು ಕೇಳಿದರೆ, ಆವಾಚ್ಯ ಶಬ್ದಗಳಿಂದ ನಿಂದಿಸಿ, ಹಲವು ಬಾರಿ ಹಲ್ಲೆ ನಡೆಸಿದರು. ಆನಂತರ, ಊರು ಖಾಲಿ ಮಾಡಬೇಕು, ಇಲ್ಲವೇ ಸುಳ್ಳು ಪ್ರಕರಣದಲ್ಲಿ ಎನ್‍ಕೌಂಟರ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದರು.

ಇನ್ಸ್ ಪೆಕ್ಟರ್ ಶಿವಕುಮಾರ್ ಅವರ ಅಕ್ಕನ ಹೆಸರಿನಲ್ಲಿ ಠಾಣಾ ವ್ಯಾಪ್ತಿಯಲ್ಲಿ ಸುಮಾರು 5 ರಿಂದ 6 ಖಾಲಿ ನಿವೇಶನಗಳನ್ನು ಖರೀದಿಸಿರುತ್ತಾರೆ. ಈ ನಿವೇಶನಗಳಿಗೆ ಬೇಲಿ ಹಾಕಲು ಶೈಲೇಶ್ ಹೇಳಿದರು. ಇದನ್ನು ನಿರಾಕರಿಸಿದ್ದಕ್ಕೆ ಈ ರೀತಿಯಾಗಿ ದೌರ್ಜನ್ಯ ಮಾಡಿದ್ದಾರೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ, ಮಾನವ ಹಕ್ಕುಗಳ ಆಯೋಗಕ್ಕೆ ದೂರು:

ಈ ಸಂಬಂಧ ಮುಖ್ಯಮಂತ್ರಿ, ಗೃಹಮಂತ್ರಿ, ಪೊಲೀಸ್ ಆಯುಕ್ತರು, ಪೊಲೀಸ್ ದೂರು ಪ್ರಾಧಿಕಾರ, ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದು, 'ನನಗೆ ವಿನಾಃಕಾರಣ ತೊಂದರೆ ನೀಡಿರುವ ಕೋಣನಕುಂಟೆ ಇನ್ಸ್ ಪೆಕ್ಟರ್ ಶಿವಕುಮಾರ್, ಪೊಲೀಸ್ ಪೇದೆಗಳಾದ ಶೈಲೇಶ್, ಹನುಮಂತ ಬಡಿಗೇರ, ಶ್ರೀಧರ ನಾಯ್ಕ್ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

Similar News