ಪುನೀತ್ ರಾಜ್‌ಕುಮಾರ್ ರಸ್ತೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

''ಪುನೀತ್‍ ಒಬ್ಬ ಸಾಧಕ, ನಮ್ಮ ನಡುವೆ ಇನ್ನೂ ಬದುಕಿದ್ದಾನೆ''

Update: 2023-02-07 17:11 GMT

ಬೆಂಗಳೂರು, ಫೆ.7: ನಟ ಪುನೀತ್ ರಾಜಕುಮಾರ್ ಅವರು ಒಬ್ಬ ಸಾಧಕ ಸಾವಿನ ನಂತರವು ಅವರು ನಮ್ಮ ನಡುವೆ ಬದುಕಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಪದ್ಮನಾಭನಗರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ “ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಕರ್ನಾಟಕ ರತ್ನ ಡಾ. ಪುನೀತ್ ರಾಜ್‍ಕುಮಾರ್ ರಸ್ತೆ ನಾಮಕರಣ, ಅಶೋಕಸ್ತಂಭ ಉದ್ಯಾನವನ, ಶ್ರೀಗುರುಶಂಕರ ಉದ್ಯಾನವನ, ಶ್ರೀ ಹನುಮಾನ್ ಚಾಲಿಸ ಕ್ರೀಡಾಂಗಣ, ದೋಭಿಘಾಟ್ ನಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯ 28 ಮನೆಗಳು ಹಾಗೂ ಅಟಲ್ ಬಿಹಾರಿ ವಾಜಪೇಯಿ ಆಟದ ಮೈದಾನದ ಲೋಕಾರ್ಪಣೆ” ಯನ್ನು ಸಿಎಂ ಬಸವರಾಜ ಎಸ್. ಬೊಮ್ಮಾಯಿ ರವರು ನೆರವೇರಿಸಿ ನಂತರ ಮಾತನಾಡಿದರು.

ಪುನೀತ್ ಅವರ ಹೆಸರನ್ನು ರಸ್ತೆ, ಸರ್ಕಲ್ ಹಾಗೂ ಪಾರ್ಕ್‍ಗಳಿಗೂ ಇಡಲಾಗುತ್ತಿದೆ. ಇದೀಗ ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ಹೆಸರನ್ನು ಇಟ್ಟು ಅವರನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. 

ಸರ್ಕಾರದ ವತಿಯಿಂದ ಸ್ಮಾರಕ

ನಮ್ಮ ಸರಕಾರದ ವತಿಯಿಂದ ಅಪ್ಪು ಮತ್ತು ರಾಜ್ ಕುಮಾರ್ ಸ್ಮಾರಕ ಮಾಡುತ್ತೀವಿ. ಸ್ಮಾರಕ ಕಟ್ಟಿಸುವ ಹಾಗೂ ಕರ್ನಾಟಕ ರತ್ನ ಕೊಡುವ ಭಾಗ್ಯ ನನಗೆ ಸಿಕ್ಕಿದೆ. ನನ್ನ ಆತ್ಮೀಯ ಸ್ನೇಹಿತ ಅಂಬರೀಶ್, ಅವನು ಸಾಕಷ್ಟು ಹಣ ಮಾಡಬಹುದಿತ್ತು ಆದರೆ. ಮಾಡಲಿಲ್ಲ. ನನ್ನ ಸ್ನೇಹಿತನ ಸ್ಮಾರಕ ಮಾಡುವ ಸೌಭಾಗ್ಯ ಕೂಡ ಸಿಕ್ಕಿತ್ತು. ಅದಕ್ಕೆ ಹಣ ಬಿಡುಗಡೆ ಮಾಡಿದ್ದೆ ಈಗ ಕಂಪ್ಲೀಟ್ ಆಗಿದೆ ಎಂದರು. 

ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರು: ನಮ್ಮ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡುವಂತೆ ಮನವಿ ಮಾಡಿದ್ದಾರೆ. ಆ ರಸ್ತೆಗೂ ಅಂಬರೀಶ್ ಅವರಿಗೂ ನಂಟಿದೆ. ಹೀಗಾಗಿ, ಆ ರಸ್ತೆಗೆ ಅಂಬರೀಶ್ ಹೆಸರನ್ನ ಇಡೋಕೆ ನಿರ್ಧಾರ ಮಾಡಿದ್ದೀವಿ ಎಂದರು. 

ಈ ವೇಳೆ ಸಾಹಿತಿ ಚಂದ್ರಶೇಖರ ಕಂಬಾರ, ಕಂದಾಯ ಸಚಿವ ಆರ್.ಅಶೋಕ, ಶಾಸಕರಾದ ರವಿಸುಬ್ರಮಣ್ಯ, ಸತೀಶ್ ರೆಡ್ಡಿ, ಕೃಷ್ಣಪ್ಪ, ಉದಯ್ ಬಿ. ಗರುಡಾಚಾರ್, ಸಂಸದ ತೇಜಸ್ವಿ ಸೂರ್ಯ, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್, ಚಲನಚಿತ್ರ ನಟರಾದ ರಾಘವೇಂದ್ರ ರಾಜ್‍ಕುಮಾರ್, ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್  ಉಪಸ್ಥಿತರಿದ್ದರು. 

Similar News