ಕೆಂಪೇಗೌಡ ವಿಮಾನ ನಿಲ್ದಾಣ: ಫೆ.8ರಿಂದ ದಿನಕ್ಕೆ ಮೂರು ಗಂಟೆ ನಾಗರಿಕ ವಿಮಾನಯಾನ ಸ್ಥಗಿತ

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಹಿನ್ನೆಲೆ

Update: 2023-02-07 17:37 GMT

ಬೆಂಗಳೂರು, ಫೆ.7: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಹಿನ್ನೆಲೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಫೆ.8ರಿಂದ ಮಧ್ಯಂತರವಾಗಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ವಿಮಾನ ನಿಲ್ದಾಣ ನಿರ್ವಾಹಕರು ತಿಳಿಸಿದ್ದಾರೆ.

ಫೆ.8ರಿಂದ ಪ್ರತಿ ದಿನ ಮೂರು ಗಂಟೆಗಳ ಕಾಲ ನಾಗರಿಕ ವಿಮಾನಗಳ ಕಾರ್ಯಾಚರಣೆಯ ವಾಯುಪ್ರದೇಶವನ್ನು ಮುಚ್ಚಲಾಗುತ್ತದೆ ಎಂದು ಕೆಐಎ ಪ್ರಕಟನೆ ಹೊರಡಿಸಿದೆ.

ಏರೋ ಇಂಡಿಯಾ ಪ್ರದರ್ಶನದ 14ನೆ ಆವೃತ್ತಿಯು ಫೆಬ್ರವರಿ 13 ರಿಂದ 17 ರವರೆಗೆ ಯಲಹಂಕದ ಏರ್ ಫೋರ್ಸ್ ವಾಯುನೆಲೆಯಲ್ಲಿ ನಡೆಯಲಿದೆ. ಅಲ್ಲದೆ, ಭಾಗವಹಿಸುವ ತಂಡಗಳು ಫೆ. 8 ರಿಂದ ವೈಯಕ್ತಿಕ ಅಭ್ಯಾಸ ನಡೆಯಲಿವೆ. ಹೀಗಾಗಿ, ಅಭ್ಯಾಸ ನಡೆಸುವ ವೇಳೆ ಮತ್ತು ಪ್ರದರ್ಶನ ವೇಳೆ ನಾಗರಿಕ ವಿಮಾನಯಾನವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಕೆಐಎ ತಿಳಿಸಿದೆ.

ವಿಮಾನಯಾನ ಸ್ಥಗಿತಗೊಳ್ಳುವ ವೇಳಾಪಟ್ಟಿ:  ಫೆ.8 ರಿಂದ 11 ರವರೆಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ, ಮಧ್ಯಾಹ್ನ 2 ರಿಂದ 5 ರವರೆಗೆ ವಿಮಾನ ಹಾರಾಟ ಸ್ಥಗಿತ(ಅಭ್ಯಾಸಕ್ಕಾಗಿ)., ಫೆ.12ರ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ (ಅಂತಿಮ ಅಭ್ಯಾಸ)., ಫೆ.13ರ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ (ಪ್ರದರ್ಶನ ಆರಂಭ)., ಫೆ.14 ಮತ್ತು 15ರಂದು ಮಧ್ಯಾಹ್ನ 12 ರಿಂದ 2.30( ಏರೋ ಇಂಡಿಯಾ ವೈಮಾನಿಕ ಪ್ರದರ್ಶನ)., ಫೆ.16 ಮತ್ತು 17ರಂದು ಬೆಳಗ್ಗೆ 9.30 ರಿಂದ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ 5 ರವರೆಗೆ (ಏರೋ ಇಂಡಿಯಾ ವೈಮಾನಿಕ ಪ್ರದರ್ಶನ).

ಬದಲಾದ ಮತ್ತು ಪರಿಷ್ಕೃತ ಹಾರಾಟದ ವೇಳಾಪಟ್ಟಿಯ ಬಗ್ಗೆ ಪ್ರಶ್ನೆಗಳಿಗೆ ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕಿಸಲು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ.

Similar News