ಬರೀ ಕರ್ತವ್ಯವಲ್ಲ; ರಾಧಿಕಾ ಅಕ್ಕೋರ ಹೃದಯವಂತಿಕೆ

Update: 2023-06-30 10:50 GMT

ಶಿಕ್ಷಕಿ, ಕವಯಿತ್ರಿ ಅಕ್ಷತಾ ಕೃಷ್ಣಮೂರ್ತಿಯವರ ಕೃತಿ ‘ಇಸ್ಕೂಲು’. ಸರಕಾರಿ ಶಾಲೆಯ ಟೀಚರ್ ಹೇಳುವ ಕಥೆ ಎಂಬ ಪುಟ್ಟ ಸುಳಿವು ಈ ಕೃತಿಯ ಹೆಸರಿನ ಜೊತೆಗೇ ಇರುವುದರಿಂದ ಕುತೂಹಲ ಇನ್ನಷ್ಟಾಗುತ್ತದೆ. ಯಾಕೆಂದರೆ, ಸರಕಾರಿ ಶಾಲೆಗಳು ಸದ್ದಿಲ್ಲದೆ ಇಲ್ಲವಾಗುತ್ತಿರುವ ಸಂಕಟದ ದಿನಗಳಲ್ಲಿ ಅಂತಹ ಶಾಲೆಯ ಟೀಚರ್ ಒಬ್ಬರು ಏನೋ ಹೇಳುತ್ತಿದ್ದಾರೆ ಎಂಬುದು ಎಲ್ಲರೂ ಆಲಿಸುವುದಕ್ಕೆ ಅರ್ಹವಾದ ಸಂಗತಿ ಮತ್ತು ಅಕ್ಷತಾ ಅವರು ಇಲ್ಲಿ ಆ ಮೂಲಕ ದಾಖಲಿಸಿರುವುದು ಬೆಟ್ಟದ ಹೊಳೆಯಂತಹ ಬೆರಗನ್ನು.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಅಣಶಿ ಎಂಬ ಹಳ್ಳಿಯ ಬೆಟ್ಟದಂಚಿನ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಅಕ್ಷತಾ ಅವರು ಮಕ್ಕಳೊಡನೆ, ಇತರ ಶಿಕ್ಷಕರೊಡನೆ ಇಡೀ ಶಾಲೆಯನ್ನು ನಂದನ ಮಾಡುವಲ್ಲಿ ತೋರುವ ಅಪರಿಮಿತ ಉತ್ಸಾಹವಿದೆಯಲ್ಲ, ಅದಕ್ಕಿಂತ ಹೆಚ್ಚಾಗಿ ಕಾಳಜಿಯಿದೆಯಲ್ಲ ಅದು ಮಾದರಿಯಾಗುವಂತಹದ್ದು. ಮೂಲತಃ ಕವಯಿತ್ರಿಯಾಗಿರುವ ಅವರಿಗೆ ಇದೊಂದು ಸರಕಾರಿ ಕೆಲಸವಾಗದೆ, ಹೃದಯವಂತಿಕೆಯ ನಡೆಯಾಗಿದೆ.

ಪುಸ್ತಕದ ಅರಿಕೆಯಲ್ಲಿನ ಮೊದಲ ಸಾಲುಗಳಲ್ಲಿಯೇ ಅವರ ಕಳಕಳಿ ಎಂಥದು ಎಂಬುದನ್ನು ತಿಳಿಯಬಹುದು. ‘‘ಕಾಡಿನ ಶಾಲೆಯ ದಾರಿಯ ಓಡಾಟ, ಬಸ್ಸು ತಪ್ಪಿಹೊಯ್ದಿಟ, ಮಳೆಯ ಭೀಕರತೆ, ಪ್ರವಾಹದ ಸೆಳೆತ, ಕಾಳಿ ಕೆರಳಿದ ದಿನಗಳ ಆತಂಕ, ಮಳೆ, ಮಕ್ಕಳು ಮನೆಯನ್ನು ಕಳೆದುಕೊಂಡ ಪರಿಸ್ಥಿತಿಯ ನೋವು, ಕಾಡುಪ್ರಾಣಿಗಳ ಭಯದ ನೆರಳು, ಸರಕಾರದ ಹೊಸ ಹೊಸ ಯೋಜನೆಗಳು, ಯಾರ್ಯಾರದ್ದೋ ಹಿತಾಸಕ್ತಿಗೆ ನೆಲೆ ಕಳೆದುಕೊಳ್ಳುತ್ತಿರುವ ಅಣಶಿ, ಜೋಯಿಡಾದ ಜೀವಗಳ ಸಂಕಟಗಳು, ಬದುಕಿಗಾಗಿ ಹೋರಾಟಗೈಯುವ ಕಾಡಿನ ಜೀವಗಳ ನಿಟ್ಟುಸಿರು, ಸಡಿಲಗೊಳ್ಳುತ್ತಿರುವ ಬುಡಕಟ್ಟಿನ ಬೇರುಗಳ ತಳಮಳ.’’

ಒಂದಿಡೀ ಊರಿನ ಅಂತರಂಗವನ್ನು, ಅದರೊಳಗಿನ ಬದುಕುಗಳ ತವಕ ತಲ್ಲಣಗಳನ್ನು ತನ್ನದೇ ಎನ್ನುವಂತೆ ಕಾಣುವ ರೀತಿಯಲ್ಲಿಯೇ, ಶಾಲೆಯಾಚೆಗೂ ಶಿಕ್ಷಕರೊಬ್ಬರ ಸಾಮಾಜಿಕ ಹೊಣೆಗಾರಿಕೆ ಇರುತ್ತದೆಂಬ ಗ್ರಹಿಕೆಯಿದೆ. ಮತ್ತದನ್ನು ಸತತವಾಗಿ ನಿರ್ವಹಿಸುವ ಮೂಲಕವೇ ಮಕ್ಕಳ ಮನಗೆದ್ದವರು ಅಕ್ಷತಾ ಅವರೆಂಬುದನ್ನು ಅವರಿಗೆ ಸಂದಿರುವ ಗೌರವಗಳೇ ನಿರೂಪಿಸಿವೆ. ಅಂತಹವರು ರಾಧಿಕಾ ಅಕ್ಕೋರಾಗಿ ಹೇಳುವ, ಎಲ್ಲರನ್ನೂ ಒಳಗೊಳ್ಳುವ ಕಥೆಗಳು ಈ ಪುಸ್ತಕದಲ್ಲಿ ಒಟ್ಟಾಗಿವೆ.

ನಗರದ ಶಾಲೆಗಳಲ್ಲಿ ಶಿಕ್ಷಕಿಯೊಬ್ಬರು ‘ಮ್ಯಾಮ್’ ಆಗಿಬಿಡುತ್ತಾರೆ. ಆದರೆ ಪುಟ್ಟ ಹಳ್ಳಿಯ, ಕನ್ನಡ ಘಮಘಮಿಸುವ ಶಾಲೆಯ ಶಿಕ್ಷಕಿ ‘ಅಕ್ಕೋರು’ ಆಗಿ, ಮಕ್ಕಳ ಪ್ರೀತಿ ಗಳಿಸುವ ಮತ್ತು ಮಕ್ಕಳಿಗೆ ಪ್ರೀತಿ ಹಂಚುವ, ಕಲಿಕೆಯನ್ನು ಕುಶಲ ಕೇಳುವ ಕಾಳಜಿಯೊಡನೆ ಬೆಸೆವ ಸೇತುವಾಗುತ್ತಾರೆ. ಹಾಗೆ ಸೇತುವಾಗಿ ಕಟ್ಟಿದ ಬಾಂಧವ್ಯದ ಕಥನಗಳು ಇಲ್ಲಿಯ ಪ್ರತೀ ಪುಟದಲ್ಲಿಯೂ ತುಳುಕುತ್ತವೆ. ಪುಟ್ಟ ಪುಟ್ಟ ಸಂಗತಿಗಳಲ್ಲೂ ಮಕ್ಕಳ ಮನಸ್ಸನ್ನು ಹುಡುಕುವ, ಮಕ್ಕಳೊಳಗಿನ ಕಾತುರಗಳಿಗೆ ಓಗೊಡುವ, ಅವರೊಳಗಿನ ಖುಷಿ ಕೈದೋಟದಂತೆ ನಳನಳಿಸಬಲ್ಲ ಹುರುಪು ಕೊಡುವ ಹಾಗೆ ತಮ್ಮನ್ನು ತೊಡಗಿಸಿಕೊಂಡ ರಾಧಕ್ಕೋರು, ಶಾಲೆಯಂಗಳದಿಂದ ಮನೆಯಂಗಳದವರೆಗೂ ಆ ಕಾಳಜಿಯನ್ನು ಹಬ್ಬಿಸಿದವರು. ಯಾವುದೋ ಹುಡುಗನಿಗೆ ನಾಯಿ ಕಚ್ಚಿತೆಂದರೆ ಇವರಿಗಿಲ್ಲಿ ಚಿಂತೆ. ಬಾಲಕಿಯೊಬ್ಬಳಿಗೆ ಹಾವು ಕಡಿದರೆ ಜೀವ ಕೈಯಲ್ಲಿ ಹಿಡಿದು ಕಾಪಾಡುವಷ್ಟು ತನ್ಮಯತೆ.

ಪ್ರತಿನಿತ್ಯದ ಕಮನೀಯತೆಯನ್ನು ಶಾಲೆಯೊಳಗಿನ ಕೆಲವೇ ತಾಸುಗಳ ಪರಿಧಿಯ ಆಚೆಗೂ ಉಳಿಸುವಂತೆ ದಾಖಲಿಸಿದ ಈ ಬರವಣಿಗೆ ಆ ಕಾರಣಕ್ಕೇ ವಿಶಿಷ್ಟವೂ ಹೃದ್ಯವೂ ಆಗಿದೆ. ಶಾಲೆಯೊಂದು, ಅದರಲ್ಲೂ ಸರಕಾರಿ ಶಾಲೆಯು ಶಿಕ್ಷಕರ ಇಂತಹ ತೊಡಗಿಸಿಕೊಳ್ಳುವಿಕೆಯಿಂದ ಮಾತ್ರವೇ ಜೀವಂತಿಕೆ ಸೂಸಬಲ್ಲದು. ಮಕ್ಕಳನ್ನು ಪಠ್ಯದ ಜೊತೆಗೇ ಪಠ್ಯದ ಆಚೆಗೂ ಕುತೂಹಲಿಗಳನ್ನಾಗಿಸುವ ಮತ್ತು ಅವರೊಳಗಿನ ಸುಪ್ತ ಪ್ರತಿಭೆಯನ್ನು ಕಂಡು ಹದಗೊಳಿಸುವ ಈ ತೊಡಗಿಸಿಕೊಳ್ಳುವಿಕೆ ಇವತ್ತು ನಿತ್ರಾಣಗೊಳ್ಳುತ್ತಿರುವ ಎಲ್ಲ ಕನ್ನಡ ಶಾಲೆಗಳಲ್ಲೂ ಬೇಕಿದೆ. ರಾಧಕ್ಕೋರು ಅಂಥ ಪಾಠಗಳನ್ನು ಇಲ್ಲಿ ಹೇಳಿದ್ದಾರೆ. ಈ ಪಾಠಗಳು ಇನ್ನಷ್ಟು ಶಾಲೆಗಳಲ್ಲಿ ಕನಸುಗಳನ್ನು ಅರಳಿಸುವಂತಾಗಲಿ. ಎಲ್ಲ ಮಕ್ಕಳ ಮನಸ್ಸುಗಳು ತುಂಬಿಕೊಳ್ಳಲಿ.

ಪುಸ್ತಕ: ಇಸ್ಕೂಲು

ಲೇಖಕರು: ಅಕ್ಷತಾ ಕೃಷ್ಣಮೂರ್ತಿ

ಪ್ರಕಾಶನ: ಜನ ಪ್ರಕಾಶನ, ಬೆಂಗಳೂರು.

ಬೆಲೆ: 200 ರೂ.

Similar News