ಫೆ.9-12: ಜಾಮಿಯಾ ಇರ್ಫಾನಿಯ ಚಪ್ಪಾರಪಡವ್ 35ನೇ ವಾರ್ಷಿಕ, 21ನೇ ಬಿರುದುದಾನ ಸಮ್ಮೇಳನ

Update: 2023-02-08 08:34 GMT

ಮಂಗಳೂರು, ಫೆ.8: ಕೇರಳ, ಕಣ್ಣೂರು ಜಿಲ್ಲೆಯ ತಳಿಪರಂಬ ತಾಲೂಕಿನ ಚಪ್ಪಾರಪಡವಿನಲ್ಲಿರುವ ಜಾಮಿಯಾ ಇರ್ಫಾನಿಯಾ ಧಾರ್ಮಿಕ ಶಿಕ್ಷಣ ಸಂಸ್ಥೆಯ 35ನೇ ವಾರ್ಷಿಕ ಹಾಗೂ 21ನೇ ಬಿರುದುದಾನ ಮಹಾಸಮ್ಮೇಳನವು ಫೆ.9ರಿಂದ 12ರ ತನಕ  ನಡೆಯಲಿದೆ ಎಂದು ಕರ್ನಾಟಕ ಇರ್ಫಾನೀಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಶೇಖ್ ಮುಹಮ್ಮದ್ ಇರ್ಫಾನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶೈಖುನಾ ಚಪ್ಪಾರಪ್ಪಡವ್ ಉಸ್ತಾದ್ ನೇತೃತ್ವದಲ್ಲಿ ಫೆ.9ರಂದು ಬದ್ರ್ ಮೌಲಿದ್, ಧ್ವಜಾರೋಹಣ, ಕುತುಬಿಯತ್ ಕಾರ್ಯಕ್ರಮ ಜರುಗಲಿದೆ. ಫೆ.10ರಂದು ಅಜ್ಮೀರ್ ಮೌಲಿದ್, ಸ್ವಲಾತ್ ಮಜ್ಲಿಸ್, ಫೆ.11 ರಂದು ವಿವಿಧ ಸೆಮಿನಾರ್ ಗಳು ನಡೆಯಲಿವೆ.

ಫೆ.12ರಂದು  ಮೊಹಲ್ಲಾ ಸಂಗಮ, ಪ್ರವಾಸಿ ಸಂಗಮ ಜರುಗಲಿದೆ. ಮಗ್ರಿಬ್  ನಮಾಝ್ ಬಳಿಕ ಸಮಾರೋಪ ಸಮಾರಂಭ,  ನಸೀಹತ್ ಮಜ್ಲಿಸ್, ಮತ್ತು ಬಿರುದು ದಾನ ಮಹಾ ಸಮ್ಮೇಳನ ಜರುಗಲಿದೆ. ಶೈಖುನಾ ಉಸ್ತಾದ್ ನಸೀಹತ್ ಮತ್ತು ದುಆಗೈಯುವರು. ಕರ್ನಾಟಕದಿಂದ ಸಮಸ್ತ ಕೇರಳ ಜಮೀಯತುಲ್ ಉಲಮಾದ ಕೇಂದ್ರ ಮುಶಾವರ ಸದಸ್ಯರೂ, ಉಳ್ಳಾಲ ಸೈಯದ್ ಮದನಿ ಅರಬಿ ಕಾಲೇಜಿನ ಪ್ರಾಂಶುಪಾಲ ಉಸ್ಮಾನುಲ್ ಫೈಝಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದವರು ಪ್ರಕಟನೆಯಲ್ಲಿ ಮಾಹಿತಿ ನೀಡಿದ್ದಾರೆ.

  ಜಾಮಿಯಾದ ಅಧೀನದಲ್ಲಿ  15ರಷ್ಟು ಜೂನಿಯರ್ ಕಾಲೇಜುಗಳು ಕಾರ್ಯಾಚರಿಸುತ್ತಿದ್ದು, ಕರ್ನಾಟಕದಲ್ಲೂ ಇದರ  ಶಾಖೆಗಳಿವೆ. ಶರೀಅತ್ ಕಾಲೇಜುಗಳು,  ಹಿಫ್ಲುಲ್ ಕುರ್ ಆನ್ ಕಾಲೇಜುಗಳು ಮತ್ತು ಯತೀಂ ಖಾನಗಳಿವೆ. ಜಾಮಿಯಾ ಇರ್ಫಾನಿಯಾದಲ್ಲಿ ಸುಮಾರು 400ರಷ್ಟು ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದಾರೆ, ಒಟ್ಟು ಈ ಸಂಸ್ಥೆಗಳಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಸುಮಾರು 700ರಷ್ಟು ಇರ್ಫಾನಿ ಬಿರುದು ದಾರಿಗಳಾದ ಉಲಮಾಗಳು ದೇಶದ ವಿವಿಧ   ಧಾರ್ಮಿಕ ಸೇವಾ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Similar News