ರಾಜ್ಯಕ್ಕೆ ಬಜೆಟ್‍ನಲ್ಲೂ ಮೋಸ, ವಿಶೇಷ ಅನುದಾನದಲ್ಲೂ ಮೋಸ: ದಿನೇಶ್ ಗುಂಡೂರಾವ್ ವಾಗ್ದಾಳಿ

''ಕೇಂದ್ರದ ದೃಷ್ಟಿಯಲ್ಲಿ ರಾಜ್ಯಕ್ಕೆ ಏನು ಸ್ಥಾನ?''

Update: 2023-02-08 12:54 GMT

ಬೆಂಗಳೂರು, ಫೆ. 8: ‘ಪ್ರತಿಯೊಂದು ವಿಚಾರದಲ್ಲೂ ಕೇಂದ್ರ ಸರಕಾರ, ಕರ್ನಾಟಕವನ್ನು ಎರಡನೆ ದರ್ಜೆ ನಾಗರಿಕನಂತೆ ನಡೆಸಿಕೊಳ್ಳುತ್ತಿದೆ. ಈಗ ವಿಶೇಷ ಅನುದಾನದಲ್ಲೂ ಮಹಾಮೋಸ ಮಾಡಿದೆ. ಆತ್ಮಾಭಿಮಾನವಿರುವ ಕನ್ನಡಿಗರು ಮುಂದಿನ ಚುನಾವಣೆಯಲ್ಲಿ ಒಂದೇ ಒಂದು ಓಟು ಬಿಜೆಪಿಗೆ ಹಾಕಬಾರದು. ಮಲತಾಯಿ ಧೋರಣೆ ತೋರುತ್ತಿರುವ ಬಿಜೆಪಿಯವರಿಗೆ ಕನ್ನಡಿಗರೇ ಎಚ್ಚೆತ್ತು ಪಾಠ ಕಲಿಸಬೇಕು’ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಐದು ವರ್ಷಗಳಲ್ಲಿ ಕೇಂದ್ರ ಸರಕಾರ ರಾಜ್ಯಕ್ಕೆ ಒಂದೇ ಒಂದು ರೂಪಾಯಿ ವಿಶೇಷ ಅನುದಾನ ಕೊಟ್ಟಿಲ್ಲ. ಇದೇ ವೇಳೆ ಉತ್ತರದ ರಾಜ್ಯಗಳಿಗೆ ಅನುದಾನದ ಹೊಳೆಯನ್ನೇ ಹರಿಸಿದೆ. ಕೇಂದ್ರಕ್ಕೆ ರಾಜ್ಯದಿಂದ ತೆರಿಗೆ ದುಡ್ಡು ಬೇಕು, ಜನರ ಓಟು ಬೇಕು. ಆದರೆ ಅನುದಾನ ಕೊಡಲು ಆಗುವುದಿಲ್ಲವೇ? ಉತ್ತರದ ರಾಜ್ಯಗಳ ಉದ್ಧಾರ ಮಾಡಲು ನಮ್ಮ ರಾಜ್ಯದ ತೆರಿಗೆ ಹಣವೇ?’ ಎಂದು ಪ್ರಶ್ನಿಸಿದ್ದಾರೆ.

‘ರಾಜ್ಯಕ್ಕೆ ಬಜೆಟ್‍ನಲ್ಲೂ ಮೋಸ, ವಿಶೇಷ ಅನುದಾನದಲ್ಲೂ ಮೋಸ. ಜಿಎಸ್‍ಟಿ ಬಾಕಿ ಕೊಡಲೂ ಮೋಸ, ತೆರಿಗೆ ನಷ್ಟ ಪರಿಹಾರದಲ್ಲೂ ಮೋಸ. ಮೋದಿ ಸರಕಾರಕ್ಕೆ ಕರ್ನಾಟಕದ ಮೇಲ್ಯಾಕೆ ಇಷ್ಟು ದ್ವೇಷ? ವಿಶೇಷ ಅನುದಾನದಲ್ಲಿ ಉತ್ತರದ ರಾಜ್ಯಗಳಿಗೆ ಭರಪೂರ ಅನುದಾನ. ಕರ್ನಾಟಕಕ್ಕೆ ಶೂನ್ಯ ಅನುದಾನ. ಯಾಕೇ ಈ ತಾರತಮ್ಯ? ಹೇಳಿ ಮೋದಿಯವರೇ?’ ಎಂದು ಅವರು ಕೇಳಿದ್ದಾರೆ.

‘ರಾಜ್ಯದ ಜನ 25 ಜನ ಬಿಜೆಪಿ ಸಂಸದರನ್ನು ಆರಿಸಿ ಕಳಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಆಯ್ಕೆ ಮಾಡಿದ್ದೂ ಕರ್ನಾಟಕ. ಕೇಂದ್ರದಲ್ಲೂ ಬಿಜೆಪಿ ಸರಕಾರ, ರಾಜ್ಯದಲ್ಲೂ ಬಿಜೆಪಿ ಸರಕಾರ. ಬಿಜೆಪಿಗೆ ಇμÉ್ಟಲ್ಲಾ ಕೊಡುಗೆ ಕೊಟ್ಟ ರಾಜ್ಯಕ್ಕೆ ಒಂದೇ ಒಂದು ರೂಪಾಯಿಯ ವಿಶೇಷ ಅನುದಾನವಿಲ್ಲ. ಕೇಂದ್ರದ ದೃಷ್ಟಿಯಲ್ಲಿ ರಾಜ್ಯಕ್ಕೆ ಏನು ಸ್ಥಾನ?’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Similar News