ಮನರೇಗಾ ಯೋಜನೆಗೆ ಅನುದಾನ ಕಡಿತ | ದಿನಕ್ಕೆ 600 ರೂ. ವೇತನ ನಿಗದಿಗೊಳಿಸಲು ಕೂಲಿಕಾರರ ಆಗ್ರಹ

ಮಂಡ್ಯದಿಂದ ಪಾದಯಾತ್ರೆ ಮೂಲಕ ಬಂದ ಕಾರ್ಮಿಕರಿಂದ ಫ್ರೀಡಂ ಪಾರ್ಕ್ ಬಳಿ ಧರಣಿ

Update: 2023-02-08 14:58 GMT

ಬೆಂಗಳೂರು, ಫೆ.8: ರಾಜ್ಯದಲ್ಲಿ ಕೃಷಿ ಕೂಲಿಕಾರರಿಗೆ ಕಡ್ಡಾಯವಾಗಿ ಮನರೇಗಾ ಯೋಜನೆಯಡಿ 200 ದಿನಗಳ ಕೆಲಸ ಹಾಗೂ ದಿನಕ್ಕೆ 600 ರೂಪಾಯಿ ವೇತನ ನಿಗದಿ ಮಾಡಬೇಕೆಂದು ಆಗ್ರಹಿಸಿ ರಾಜ್ಯದ ಕೃಷಿ, ಗ್ರಾಮೀಣ ಕಾರ್ಮಿಕರು ಆಗ್ರಹಿಸಿದರು.

ಕರ್ನಾಟಕ ಪ್ರಾಂತ ಕೃಷಿ-ಕೂಲಿಕಾರರ ಸಂಘದ ನೇತೃತ್ವದಲ್ಲಿ ಮಂಡ್ಯದಿಂದ ಪಾದಯಾತ್ರೆ ಮೂಲಕ ಬುಧವಾರ ಇಲ್ಲಿನ ಫ್ರೀಡಂ ಪಾರ್ಕಿನ ಮೈದಾನದ ಬಳಿ ಸಮಾವೇಶಗೊಂಡ ಹೋರಾಟಗಾರರು, ನಿಗದಿತ ವೇತನ ಜೊತೆಗೆ ತುಟ್ಟಿ ಭತ್ಯೆ, ಭವಿಷ್ಯ ನಿಧಿ, ಆರೋಗ್ಯ ವಿಮಾ ಸೌಲಭ್ಯ, ಸಾಮಾಜಿಕ ಭದ್ರತೆಗಾಗಿಕ ಡ್ಡಾಯವಾಗಿ ಪಿಂಚಣಿ ಕೊಡಬೇಕೆಂದು ಒತ್ತಾಯಿಸಿದರು.

ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತ ಕೃಷಿ ಕೂಲಿ ಕಾರ್ಮಿಕರ ಸಂಘದರಾಷ್ಟ್ರೀಯ ಕಾರ್ಯದರ್ಶಿಬಿ.ವೆಂಕಟ್ ಮಾತನಾಡಿ, ನರೇಂದ್ರ ಮೋದಿ ಒಂದು ದಿನ ಬಂದು ನರೇಗಾ ಕೆಲಸ ಮಾಡಿದರೆ ಕೂಲಿಕಾರರ ಸಂಕಷ್ಟ ಏನೆಂದು ತಿಳಿಯುತ್ತದೆ ಎಂದು ತಿಳಿಸಿದರು.

ಅಲ್ಲದೆ, ಮನರೇಗಾ ಯೋಜನೆಯನ್ನೇ ನಂಬಿರುವ ಗ್ರಾಮೀಣ ಕಾರ್ಮಿಕರು, ಕೃಷಿ ಕೂಲಿಕಾರರನ್ನು ಉದ್ಯೋಗ ವಂಚಿತರನ್ನಾಗಿ ಮಾಡಲು ಕೇಂದ್ರ ಸರ್ಕಾರ ಮನರೇಗಾ ಯೋಜನೆಗೆ ಅನುದಾನ ಕಡಿತ ಮಾಡಿದೆ. ಫೆ.1ರಂದು ಮಂಡನೆಯಾದ ಬಜೆಟ್‍ನಲ್ಲಿ ಸಾಮಾನ್ಯ ಜನರ ಬದುಕಿನ ನಿರೀಕ್ಷೆಗಳನ್ನೇ ಸುಳ್ಳು ಮಾಡಿದ್ದು, ಬಡವರು ಬದುಕುವ ಶಕ್ತಿಯನ್ನೆ ಕಸಿದುಕೊಳ್ಳಲು ಸಾರ್ವಜನಿಕ ವಲಯಗಳಿಗೂ ಅನುದಾನ ಕಡಿತ ಮಾಡಿದೆಎಂದು ಟೀಕಿಸಿದರು.

ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾದು ಮಾತನಾಡಿ, ಬೀಡಿಕಾರ್ಮಿಕರು, ಹಮಾಲಿ ಕಾರ್ಮಿಕರು, ತೋಟಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಇರುವಂತೆ ಗ್ರಾಮೀಣ ಕೃಷಿ ಕೂಲಿಕಾರರಿಗೂ ಕಲ್ಯಾಣ ಮಂಡಳಿ ರಚಿಸಬೇಕು. ವಿಮಾ, ಆರೋಗ್ಯ ಸೌಲಭ್ಯ ಕಾರ್ಡುಗಳನ್ನು ಒದಗಿಸಬೇಕುಎಂದು ಒತ್ತಾಯಿಸಿದರು.

ಸಂಘದರಾಜ್ಯ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಮಾತನಾಡಿ, ನಾಲ್ಕು ದಶಕಗಳಿಂದ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡದೆ ವಂಚಿಸುತ್ತಾ ಬಂದಿದ್ದು, ಅವರನ್ನೆಲ್ಲ ಒಕ್ಕಲೆಬ್ಬಿಸುವ ದಾರಿ ಹುಡುಕುತ್ತಿದ್ದಾರೆ.ಆದರೆ, ಜನವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ತಂದು ಬಂಡವಾಳ ಶಾಹಿಗಳನ್ನು ಸತ್ಕರಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಕಿತ್ತೊಗೆಯಲು ನಾವು ಪಣತೊಟ್ಟು ಪಾದಯಾತ್ರೆ ಮತ್ತು ಈ ಸಮಾವೇಶ ನಡೆಸುತ್ತಿದ್ದೇವೆ ಎಂದು ಎಚ್ಚರಿಕೆ ನೀಡಿದರು.

Similar News