ಬೆಂಗಳೂರಿನ ಮಾಜಿ ಆರ್ಚ್ ಬಿಷಪ್‍ ಡಾ.ಇಗ್ನೇಷಿಯಸ್ ಪೌಲ್ ಪಿಂಟೋ ನಿಧನ

Update: 2023-02-08 15:02 GMT

ಬೆಂಗಳೂರು, ಫೆ.8: ಬೆಂಗಳೂರು ಮಹಾಧರ್ಮಕ್ಷೇತ್ರದ ಮಾಜಿ ಆರ್ಚ್ ಬಿಷಪ್‍ ಡಾ.ಇಗ್ನೇಷಿಯಸ್ ಪೌಲ್ ಪಿಂಟೋ(98) ಅವರು ವಯೋ ಸಹಜ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ.

ಇಲ್ಲಿನ ಹೊಸೂರು ರಸ್ತೆಯ ಲಿಟಲ್ ಸಿಸ್ಟರ್ಸ್ ಆಫ್ ದಿ ಪೂವರ್ ಹಿರಿಯ ನಾಗರಿಕರ ಆಶ್ರಮದಲ್ಲಿ ಅವರು ನಿಧನರಾಗಿದ್ದು, ಅಂತ್ಯಕ್ರಿಯೆಯು ನಾಳೆ(ಫೆ.10) ಫ್ರೇಝರ್ ಟೌನ್‍ನಲ್ಲಿರುವ ಸೇಂಟ್ ಫ್ರಾನ್ಸಿಸ್‍ ಕ್ಸೇವಿಯರ್ ಕೆಥಿಡ್ರಲ್‍ ಚರ್ಚಿನಲ್ಲಿ ಬೆಳಗ್ಗೆ 10 ಗಂಟೆಗೆ ನೆರವೇರಲಿದೆ. ಅಂದು ಬೆಳಿಗ್ಗೆ 8 ಗಂಟೆಯಿಂದ 10 ಗಂಟೆಯ ವರೆಗೆ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ಹಾಗೂ ಭಕ್ತಾಧಿಗಳ ದರ್ಶನಕ್ಕೆ ಇಡಲಾಗಿದೆ.

1925 ಮೇ 18ರಂದು ಬಂಟ್ವಾಳ ತಾಲೂಕಿನಲ್ಲಿ ಜನಿಸಿದ ಡಾ.ಇಗ್ನೇಷಿಯಸ್ ಪೌಲ್ ಪಿಂಟೋಅವರು 1952ರಲ್ಲಿ ಸೆಮಿನರಿಯನ್ನು ಸೇರಿ ಕ್ರೈಸ್ತ ಧರ್ಮ ಗುರುಗಳಾದರು. ಬೆಂಗಳೂರು ಮಹಾಧರ್ಮಕ್ಷೇತ್ರದ ವಿವಿಧ ಚರ್ಚುಗಳಲ್ಲಿ ಸೇವೆ ಸಲ್ಲಿಸಿದ ಅವರು, 1988ರಲ್ಲಿ ಅಂದಿನ ಪೋಪ್ ದ್ವಿತೀಯ ಜಾನ್‍ಪೌಲರು ನೂತನವಾಗಿ ರಚಿಸಲ್ಪಟ್ಟ ಶಿವಮೊಗ್ಗ ಧರ್ಮಕ್ಷೇತ್ರದ ಮೊದಲ ಬಿಷಪ್ ಆಗಿ ನೇಮಕವಾದರು.

ಆನಂತರ ಬೆಂಗಳೂರಿನ ಆರ್ಚ್‍ಬಿಷಪ್ ಆಗಿ ಸುಮಾರು ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು 2004ರಲ್ಲಿ ನಿವೃತ್ತರಾದರು. ಬೆಂಗಳೂರಿನ ಆರ್ಚ್ ಬಿಷಪ್‍ ಡಾ.ಪೀಟರ್ ಮಚಾದೊ ಅವರು ಡಾ.ಇಗ್ನೇಷಿಯಸ್ ಪೌಲ್ ಪಿಂಟೋ ನಿಧನಕ್ಕೆ ಸಂತಾಪ ಸೂಚಿಸಿದ್ದು, ಬೆಂಗಳೂರಿನ ಎಲ್ಲ ಕ್ಯಾಥೋಲಿಕ್ ಚರ್ಚುಗಳಲ್ಲಿ ಪ್ರಾರ್ಥನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಿಸಿದ್ದಾರೆ.

Similar News