ಮಾ.23ರಿಂದ ಬೆಂಗಳೂರಿನಲ್ಲಿ ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವ: ಸಚಿವ ಆರ್.ಅಶೋಕ್

Update: 2023-02-08 16:45 GMT

ಬೆಂಗಳೂರು, ಫೆ. 8: ಹದಿನಾಲ್ಕನೆಯ ‘ಬೆಂಗಳೂರು ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವ’ ಮಾ.23ರಿಂದ 30ರ ವರೆಗೆ ನಡೆಯಲಿದ್ದು, ವಿಧಾನಸೌಧದ ವೈಭವ ಪೇತ ಮೆಟ್ಟಿಲುಗಳ ಮೇಲೆ ಉತ್ಸವಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದು ಚಲನಚಿತ್ರೋತ್ಸವ ಸಂಘಟನಾ ಸಮಿತಿ ಅಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಸಭೆ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಚಲನಚಿತ್ರೋತ್ಸವವನ್ನು ಮಾ.23ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ. ದೇಶ-ವಿದೇಶಗಳ ಹಲವು ನಟ-ನಟಿಯರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರ ನೀಡಿದರು.

ಮಾ.30ರಂದು ಪ್ರಶಸ್ತಿ ಪ್ರದಾನ ಸಮಾರೋಪ ಸಮಾರಂಭ ನಡೆಯಲಿದೆ. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಚಿತ್ರೋತ್ಸವದಲ್ಲಿ 300ಕ್ಕೂ ಅಧಿಕ ಸಿನಿಮಾಗಳು 11 ಸ್ಕ್ರೀನ್‍ಗಳಲ್ಲಿ ಪ್ರದರ್ಶನವಾಗಲಿವೆ. ಹಲವು ಭಾಷೆಗಳ ಚಲನಚಿತ್ರಗಳು ಪ್ರದರ್ಶನವಾಗಲಿವೆ ಎಂದು ಅಶೋಕ್ ಮಾಹಿತಿ ನೀಡಿದರು.

ಪ್ರಶಸ್ತಿಯ ಮೊತ್ತವನ್ನು ಹೆಚ್ಚಿಸುವಂತೆಯೂ ಸಲಹೆ ನೀಡಲಾಗಿದೆ. ಪ್ರಸ್ತುತ ವಿವಿಧ ವಿಭಾಗದಲ್ಲಿ 3 ಲಕ್ಷ ರೂ., 2 ಲಕ್ಷ ರೂ. ಮತ್ತು 1ಲಕ್ಷ ರೂ. ಮೊತ್ತವನ್ನು ಬಹುಮಾನ ನೀಡಲಾಗುತ್ತಿದೆ. ಇದನ್ನು ಹೆಚ್ಚಿಸುವಂತೆ ಸಲಹೆ ನೀಡಲಾಗಿದೆ. ಎಷ್ಟು ಮೊತ್ತ ಎಂಬುದರ ಕುರಿತು ಶೀಘ್ರದಲ್ಲಿಯೇ ತೀರ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.

ಏಷ್ಯಾ, ಭಾರತೀಯ ಹಾಗೂ ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗ, ಸಮಕಾಲೀನ ವಿಶ್ವ ಸಿನಿಮಾ ವಿಭಾಗ, ಪುರಾವಲೋಕನ ವಿಭಾಗ ಎಂದು ವಿಂಗಡಿಸಲಾಗಿದೆ. ಕಾರ್ಯಾಗಾರ, ಸಂವಾದ, ಚರ್ಚೆ, ವಿಚಾರ ಸಂಕಿರಣ, ಅತ್ಯುತ್ತಮ ನಿರ್ದೇಶಕರೊಂದಿಗೆ ಸಂವಾದ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಚಿತ್ರೋತ್ಸವದಲ್ಲಿ ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಇಲಾಖೆಯ ಆಯುಕ್ತ ಪಿ.ಎಸ್.ಹರ್ಷ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ.ಹರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Similar News