ಹಸಿವು, ಅಪೌಷ್ಟಿಕತೆಯ ನಿರ್ಲಕ್ಷ್ಯ ಸಲ್ಲ

Update: 2023-02-09 03:37 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಭಾರತದ ಅತಿ ದೊಡ್ಡ ಭಯೋತ್ಪಾದಕನೆಂದು 'ಹಸಿವು' ಈಗಾಗಲೇ ಗುರುತಿಸಲ್ಪಟ್ಟಿದೆ. ಕೊರೋನ ದಿನಗಳ ಬಳಿಕ ಹೆಚ್ಚಿದ ಬಡತನ, ನಿರುದ್ಯೋಗ ದೇಶದಲ್ಲಿ ಅಪೌಷ್ಟಿಕತೆಯನ್ನು ಹೆಚ್ಚಿಸಿದೆ ಎನ್ನುವ ಅಂಶವನ್ನು ವಿಶ್ವಸಂಸ್ಥೆ ಬಹಿರಂಗಪಡಿಸಿದೆ. ಭಾರತದಲ್ಲಿ ಇದರ ನೇರ ಸಂತ್ರಸ್ತರು ಮಕ್ಕಳು ಮತ್ತು ಮಹಿಳೆಯರು. ಅಪೌಷ್ಟಿಕತೆಯ ಕಾರಣದಿಂದ ಮಹಿಳೆಯರ ಹೆರಿಗೆ ಅಪಾಯಕಾರಿಯಾಗಿ ಪರಿವರ್ತನೆಗೊಂಡಿದೆ. ತಾಯಿಯ ಗರ್ಭದಲ್ಲಿರುವಾಗಲೇ ಶಿಶು ರೋಗ ಪೀಡಿತವಾಗುತ್ತಿರುವ ಅಂಶವನ್ನು ವರದಿಗಳು ಹೇಳುತ್ತಿವೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ ಕಳಪೆಯಾಗಿದೆ. ಇದು ಮಕ್ಕಳ ಬೆಳವಣಿಗೆಯ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತಿವೆ. ಇಂದಿನ ಮಕ್ಕಳೇ ಭವಿಷ್ಯದ ಭಾರತ. ಹೀಗಿರುವಾಗ ಈ ಮಕ್ಕಳ ಅಪೌಷ್ಟಿಕತೆಯ ಕಡೆಗೆ ಗಮನ ಹರಿಸುವುದು ಸರಕಾರದ ಕರ್ತವ್ಯವಾಗಿದೆ. ಆದುದರಿಂದ ಈ ಬಾರಿಯ ಬಜೆಟ್‌ನಲ್ಲಿ ಆಹಾರ ಸಮಸ್ಯೆ ಮತ್ತು ಅಪೌಷ್ಟಿಕತೆಯನ್ನು ನಿವಾರಿಸಲು ಸರಕಾರ ಆದ್ಯತೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. 2023-24ರ ಸಾಲಿನ ಬಜೆಟ್‌ನಲ್ಲಿರುವ ಆತಂಕಕಾರಿ ವಿಷಯವೆಂದರೆ, ಆಹಾರ ಮತ್ತು ಪೌಷ್ಟಿಕತೆಯ ಸರಕಾರ ಸಂಪೂರ್ಣ ನಿರ್ಲಕ್ಷಿಸಿರುವುದು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಈ ವಲಯಕ್ಕೆ ನೀಡಿರುವ ಅನುದಾನದಲ್ಲಿ ಭಾರೀ ಕಡಿತಗೊಳಿಸಲಾಗಿದೆ. ಅನುದಾನವು ಕಳೆದ ವರ್ಷದಷ್ಟೇ ಇದ್ದರೂ, ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡರೆ ಅದರ ವಾಸ್ತವಿಕ ವೌಲ್ಯವು ಕಳೆದ ವರ್ಷಕ್ಕಿಂತ ಕಡಿಮೆಯೇ ಆಗುತ್ತದೆ.

ಆಹಾರ ಮತ್ತು ಪೌಷ್ಟಿಕತೆ ಕಾರ್ಯಕ್ರಮದಲ್ಲಿ ಸರಕಾರ ಮಾಡುವ ಅತ್ಯಧಿಕ ವೆಚ್ಚವೆಂದರೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಭಾರತೀಯ ಆಹಾರ ನಿಗಮ (ಎಫ್‌ಸಿಐ)ಕ್ಕೆ ಸಬ್ಸಿಡಿ ನೀಡುವುದು. ಇದಕ್ಕಾಗಿ 2021-22ರ ಸಾಲಿನಲ್ಲಿ 2,08,929 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಮುಂದಿನ ವರ್ಷದ ಪರಿಷ್ಕೃತ ಅಂದಾಜಿನಲ್ಲಿ ಇದಕ್ಕೆ ನೀಡಲಾದ ಮೊತ್ತ 2,14,696 ಕೋಟಿ ರೂ. ಇದಕ್ಕೆ ಹೋಲಿಸಿದರೆ, ಇತ್ತೀಚಿಗೆ ಮಂಡಿಸಲಾದ 2023-24ರ ಸಾಲಿನ ಬಜೆಟ್‌ನಲ್ಲಿ ಈ ಉದ್ದೇಶಕ್ಕಾಗಿ ನೀಡಲಾಗಿರುವ ಮೊತ್ತ ಕೇವಲ 1,37,207 ಕೋಟಿ ರೂಪಾಯಿ. ಇದು ಕಳೆದ ವರ್ಷದ ಪರಿಷ್ಕೃತ ಅಂದಾಜಿನ ಕೇವಲ ಮೂರನೇ ಎರಡರಷ್ಟಾಗಿದೆ. ಫಲಾನುಭವಿಗಳ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳ ಮತ್ತು ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡು ಹೆಚ್ಚಿನ ಮೊತ್ತದ ಅನುದಾನವನ್ನು ಈ ಉದ್ದೇಶಕ್ಕಾಗಿ ಒದಗಿಸಬೇಕಾಗಿತ್ತು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 2021-22ರ ಸಾಲಿನಲ್ಲಿ ಆಹಾರ ಧಾನ್ಯವನ್ನು ಖರೀದಿಸಲು ನೀಡಲಾದ ಆಹಾರ ಸಬ್ಸಿಡಿಯು 79,789 ಕೋಟಿ ರೂಪಾಯಿ ಆಗಿತ್ತು. 2022-23ರ ಪರಿಷ್ಕೃತ ಅಂದಾಜು 72,282 ಕೋಟಿ ರೂಪಾಯಿ ಆಗಿತ್ತು. ಇದಕ್ಕೆ ಹೋಲಿಸಿದರೆ, 2023-24ರ ಸಾಲಿನ ಅನುದಾನವು 59,793 ಕೋಟಿ ರೂಪಾಯಿಗೆ ಇಳಿದಿದೆ. ಕಡು ಬಡವರು ತಮ್ಮ ದಿನ ನಿತ್ಯದ ಆಹಾರ ಸಂಪಾದಿಸಲು ಅಗತ್ಯವಾದ ಗ್ರಾಮೀಣ ಉದ್ಯೋಗ ಖಾತರಿ ಕಾರ್ಯಕ್ರಮ ಎಮ್‌ಜಿ-ನರೇಗಾ ಅತ್ಯಂತ ಮಹತ್ವದ ಯೋಜನೆಯಾಗಿದೆ. ಇದಕ್ಕೆ ಕಾನೂನಿನ ಬಲವೂ ಇದೆ. 2021-22ರ ಸಾಲಿನಲ್ಲಿ ಈ ಯೋಜನೆಗಾಗಿ 98,467 ಕೋಟಿ ರೂ. ಒದಗಿಸಲಾಗಿತ್ತು. 2022-23ರಲ್ಲಿ ಅದರ ಪರಿಷ್ಕೃತ ಅಂದಾಜು 89,400 ಕೋಟಿ ರೂಪಾಯಿ ಆಗಿತ್ತು. ಆದರೆ, 2023-24ರ ಸಾಲಿಗೆ ಈ ಯೋಜನೆಗೆ ಒದಗಿಸಲಾದ ಅನುದಾನ ಕೇವಲ 60,000 ಕೋಟಿ ರೂಪಾಯಿ.

ಇನ್ನು, ಎರಡು ಪ್ರಮುಖ ಪೌಷ್ಟಿಕಾಂಶ ಕಾರ್ಯಕ್ರಮಗಳನ್ನು ಪರಿಶೀಲಿಸೋಣ. ಅವುಗಳನ್ನು ಈಗ ವಿಲೀನಗೊಳಿಸಿ ಮರುನಾಮಕರಣ ಮಾಡಲಾಗಿದೆ. ಸಕ್ಷಮ ಪೋಷಣ್ ಮತ್ತು ಅಂಗನವಾಡಿ ಕಾರ್ಯಕ್ರಮಕ್ಕೆ ಈ ವರ್ಷ ನೀಡಲಾಗಿರುವ ಅನುದಾನವು ಬಹುತೇಕ ಹಿಂದಿನ ವರ್ಷದಷ್ಟೇ ಇದೆ. ಆದರೆ, ವಾಸ್ತವಿಕವಾಗಿ ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡ ಬಳಿಕ, ಆ ಮೊತ್ತವು ಕಳೆದ ವರ್ಷಕ್ಕಿಂತ ಕಡಿಮೆಯಾಗುತ್ತದೆ. ಅದೂ ಅಲ್ಲದೆ, ಕಳೆದ ವರ್ಷವೇ, ಈ ಮೊತ್ತವನ್ನು ಕಡಿಮೆ ಎಂಬುದಾಗಿ ಪರಿಗಣಿಸಲಾಗಿತ್ತು. ಪಿಎಮ್ ಪೋಷಣ್ ಎರಡನೇ ಮಹತ್ವದ ಪೌಷ್ಟಿಕಾಂಶ ಕಾರ್ಯಕ್ರಮವಾಗಿದೆ. ಕಳೆದ ವರ್ಷ ಆ ಕಾರ್ಯಕ್ರಮದ ಪರಿಷ್ಕೃತ ಅಂದಾಜು 12,800 ಕೋಟಿ ರೂಪಾಯಿ ಆಗಿತ್ತು. ಆದರೆ, ಈ ವರ್ಷ ಆ ಕಾರ್ಯಕ್ರಮಕ್ಕೆ ನೀಡಿರುವುದು ಕೇವಲ 11,600 ಕೋಟಿ ರೂಪಾಯಿ. ಪೌಷ್ಟಿಕತೆಯ ಮೇಲೆ ಪರಿಣಾಮ ಬೀರುವ ಕಾರ್ಯಕ್ರಮಗಳು ಮತ್ತು ಯೋಜನೆಗಳು ಹಲವಿದ್ದರೂ, ಸಾಮಾನ್ಯವಾಗಿ ಈ ಐದು ಯೋಜನೆಗಳ ಬಗ್ಗೆ ಹೆಚ್ಚಾಗಿ ಚರ್ಚೆ ನಡೆಸಲಾಗುತ್ತದೆ. ಹಾಗಾಗಿ, ಈ ಎಲ್ಲಾ ಐದು ಯೋಜನೆಗಳಿಗೆ ನೀಡುವ ಅನುದಾನದಲ್ಲಿನ ಇಳಿಕೆ ಅತ್ಯಂತ ಕಳವಳಕಾರಿಯಾಗಿದೆ.

ತಳಸ್ತರದಲ್ಲಿ ಯಾವುದೇ ಯೋಜನೆಗಳನ್ನು ರೂಪಿಸದೆ, ಮೇಲ್‌ಸ್ತರದ ಶ್ರೀಮಂತವರ್ಗಕ್ಕೆ ಇನ್ನಷ್ಟು ಸವಲತ್ತುಗಳನ್ನು ಕೊಡುವ ಮೂಲಕ ಸಮಗ್ರ ಭಾರತವನ್ನು ಕಟ್ಟುವುದಕ್ಕೆ ಸಾಧ್ಯವಿಲ್ಲ. ಅಂತಹ ಭಾರತ ನಿಧಾನಕ್ಕೆ ಕ್ಷೀಣ ದೇಹದ, ಬೃಹತ್ ತಲೆಯ ಅಸ್ವಸ್ಥ ಮಗುವಿನ ಸ್ಥಿತಿಗೆ ತಲುಪುತ್ತದೆ. ಕಾರ್ಪೊರೇಟ್ ಶಕ್ತಿಗಳಿಗೆ ಸಕಲ ಸವಲತ್ತುಗಳನ್ನು ನೀಡುತ್ತಾ, ತಳವರ್ಗವನ್ನು ನಿರ್ಲಕ್ಷಿಸಿದ ಪರಿಣಾಮವನ್ನು ದೇಶ ಈಗಾಗಲೇ ಅನುಭವಿಸುತ್ತಿದೆ. ದೇಶದ ಅತಿ ಶ್ರೀಮಂತರೆಂದು ಗುರುತಿಸಿಕೊಂಡಿದ್ದ ಹಲವರು ಭಾರತದ ಬ್ಯಾಂಕ್‌ಗಳಿಗೆ ವಂಚಿಸಿ ವಿದೇಶಗಳಲ್ಲಿ ಅವಿತುಕೊಂಡಿದ್ದಾರೆ. ವಿಶ್ವದಲ್ಲಿ ನಂ.1 ಶ್ರೀಮಂತರಾಗಿ ಗುರುತಿಸಿಕೊಂಡಿದ್ದ ಅದಾನಿಯ ಬಣ್ಣ ಕೂಡ ಬಯಲಾಗುತ್ತಿದೆ. ಕಾರ್ಪೊರೇಟ್ ಶಕ್ತಿಗಳನ್ನು ಪೋಷಿಸಿ, ಸಣ್ಣ ಉದ್ದಿಮೆಗಳನ್ನು ನಿರ್ಲಕ್ಷಿಸುವ ಸರಕಾರದ ಆರ್ಥಿಕ ನೀತಿಯ ಅಧ್ವಾನಗಳು ಒಂದೊಂದಾಗಿ ಬಹಿರಂಗವಾಗುತ್ತಿವೆ. 2022ರಲ್ಲಿ 10,000ಕ್ಕೂ ಅಧಿಕ ಸಣ್ಣ, ಕಿರು, ಮಧ್ಯಮ ಗಾತ್ರದ ಉದ್ದಿಮೆಗಳು ಮುಚ್ಚಿವೆ. ಸಣ್ಣ ಉದ್ದಿಮೆಗಳ ವೈಫಲ್ಯ, ಈ ದೇಶದ ಅಡಿಗಲ್ಲನ್ನು ದುರ್ಬಲಗೊಳಿಸಿದೆ. ಆರ್ಥಿಕತೆಯಲ್ಲಿ ಶೇ. 30ರಷ್ಟು ಮತ್ತು ಉದ್ಯೋಗಗಳಲ್ಲಿ ಶೇ. 40ರಷ್ಟು ಪಾಲನ್ನು ಈ ಉದ್ದಿಮೆಗಳು ನೀಡುತ್ತಿದ್ದವು. ಗ್ರಾಮೀಣ ಪ್ರದೇಶದಲ್ಲಿ ಹಸಿವು, ಬಡತನ ಹೆಚ್ಚಲು ಸರಕಾರದ ಕೆಟ್ಟ ಆರ್ಥಿಕ ನೀತಿಯೂ ಪ್ರಮುಖ ಕಾರಣವಾಗಿದೆ. ಗ್ರಾಮೀಣ ಪ್ರದೇಶದ ಅಪೌಷ್ಟಿಕತೆ, ಹಸಿವನ್ನು ನಿರ್ಲಕ್ಷಿಸಿದರೆ, ಭವಿಷ್ಯದ ಭಾರತ ಇನ್ನಷ್ಟು ದುರ್ಬಲವಾಗಲಿದೆ. ರೋಗ ಪೀಡಿತ ಯುವಜನರ ಸೃಷ್ಟಿಗೆ ಸರಕಾರವೇ ಹೊಣೆಯಾಗಲಿದೆ.

ಆರೋಗ್ಯಗಾಗಿ ಬಡವರು, ಕಾರ್ಮಿಕರು ಸರಕಾರಿ ಆಸ್ಪತ್ರೆಗಳನ್ನೆ ನೆಚ್ಚಿಕೊಂಡಿದ್ದಾರೆ. ಆದರೆ ಸರಕಾರ ಅಲೋಪತಿ ಚಿಕಿತ್ಸೆಗೆ ನೀಡುವ ಹಣವನ್ನು ಅನಗತ್ಯವಾಗಿ ಆಯುಷ್‌ನಂತಹ ವೈದ್ಯಕೀಯ ಚಿಕಿತ್ಸೆಗೆ ವರ್ಗಾಯಿಸುತ್ತಿದೆ. ಆಯುಷ್ ಜನರ ಪಾಲಿಗೆ ಐಚ್ಛಿಕವಾಗಿರಬೇಕೇ ಹೊರತು ಯಾವ ಕಾರಣಕ್ಕೂ ಹೇರಿಕೆಯಾಗಬಾರದು. ಯಾಕೆಂದರೆ, ಜನರ ಎಲ್ಲ ಬಗೆಯ ರೋಗಗಳಿಗೆ ಪೂರ್ಣ ಪ್ರಮಾಣದಲ್ಲಿ ಸ್ಪಂದಿಸಲು ಆಯುಷ್‌ಗೆ ಸಾಧ್ಯವಿಲ್ಲ. ಇಂದು ಅತ್ಯಾಧುನಿಕ ಸಲಕರಣೆಗಳನ್ನು ನಿರೀಕ್ಷಿಸುತ್ತಿರುವುದು ಅಲೋಪತಿ ವೈದ್ಯ ಪದ್ಧತಿ. ಜನರು ಹೆಚ್ಚು ಅವಲಂಬಿಸಿರುವುದೂ ಕೂಡ ಈ ಪದ್ಧತಿಯನ್ನೇ. ಬಡಜನರನ್ನು ಆಯುಷ್‌ನ ಗಿನಿಪಿಗ್ ಅಥವಾ ಪ್ರಯೋಗ ಪಶುವಾಗಿ ಬಳಕೆ ಮಾಡಬಾರದು. ಆದುದರಿಂದ, ಯಾವ ಕಾರಣಕ್ಕೂ ಅಲೋಪತಿಗೆ ನೀಡುತ್ತಿದ್ದ ಆರ್ಥಿಕ ನೆರವನ್ನು ಆಯುಷ್‌ಗೆ ವರ್ಗಾಯಿಸಬಾರದು. ಇದು ಬಲವಂತವಾಗಿ ಬಡವರ ಮೇಲೆ, ಕಾರ್ಮಿಕರ ಮೇಲೆ ಆಯುರ್ವೇದವನ್ನು ಹೇರಿದಂತಾಗುತ್ತದೆ. ಅವರ ದೈಹಿಕ ಆರೋಗ್ಯದ ಮೇಲೆ ಇದು ಇನ್ನಷ್ಟು ದುಷ್ಪರಿಣಾಮಗಳನ್ನು ಬೀರಬಹುದು. ಆರೋಗ್ಯ, ಆಹಾರ, ಪೌಷ್ಟಿಕತೆಗಳಿಗಾಗಿ ಪರಿಷ್ಕೃತ ಅಂದಾಜುಗಳನ್ನು ಸಿದ್ಧಪಡಿಸುವಾಗ ಈ ಕಾರ್ಯಕ್ರಮಗಳಿಗೆ ನೀಡಲಾಗಿರುವ ಅನುದಾನಗಳನ್ನು ಸರಕಾರವು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರವನ್ನು ಎಚ್ಚರಿಸಲು ಪ್ರಬಲ ಸಾರ್ವಜನಿಕ ಆಂದೋಲನವೊಂದು ರೂಪುಗೊಳ್ಳುವುದು ಅನಿವಾರ್ಯವಾಗಿದೆ.

Similar News