ಕುಟುಂಬದ ಸ್ಥಿತಿ ಬಗ್ಗೆ ಬೆಂಗಳೂರಿನಲ್ಲಿರುವ ಸಿರಿಯಾ ವಿದ್ಯಾರ್ಥಿಗಳ ಆತಂಕ

Update: 2023-02-10 03:19 GMT

ಬೆಂಗಳೂರು: ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಆಗಮಿಸಿರುವ ಸಿರಿಯಾ ವಿದ್ಯಾರ್ಥಿಗಳು, ಭೂಕಂಪಪೀಡಿತ ಪ್ರದೇಶಗಳ ತಮ್ಮ ಕುಟುಂಬಗಳ ಸ್ಥಿತಿ ಬಗ್ಗೆ ಆತಂಕಿತರಾಗಿದ್ದಾರೆ.

ಸಿರಿಯಾ ಮೂಲದ 41 ಮಂದಿ ವಿದ್ಯಾರ್ಥಿಗಳು ಬೆಂಗಳೂರಿನ ಜೈನ್ ಸ್ವಾಯತ್ತ ವಿಶ್ವವಿದ್ಯಾನಿಲಯದಲ್ಲಿ ಸ್ಟಡಿ ಇಂಡಿಯಾ ಪ್ರೋಗ್ರಾಂ ಅಡಿಯಲ್ಲಿ ಅಧ್ಯಯನ ಮಾಡುತ್ತಿದ್ದು, ತಮ್ಮ ಕುಟುಂಬಗಳು ಮನೆಗೆ ಮರಳಿದ್ದಾರೆಯೇ ಎಂಬ ಬಗ್ಗೆ ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ.

ವಿದ್ಯಾರ್ಥಿಗಳು ನಿನ್ನೆ ಸಂಜೆ ಕ್ಯಾಂಪಸ್‌ನಲ್ಲಿ ಐಕಮತ್ಯದ ಪಾದಯಾತ್ರೆ ನಡೆಸಿದರು. 2019ಯಲ್ಲಿ ಪ್ರವೇಶ ಪಡೆದಿರುವ ಇವರು ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ತಮ್ಮ ದೇಶಕ್ಕೆ ಮರಳಲು ಸಾಧ್ಯವಾಗಿರಲಿಲ್ಲ.

"ನಾನು ಟೋರ್ಟಸ್ ಎಂಬ ನಗರದಿಂದ ಬಂದಿದ್ದು, ಪೋಷಕರು ದಮಾಸ್ಕಸ್, ಲಟಾಕಿಯಾ ಮತ್ತು ಟೋರ್ಟಸ್‌ನಲ್ಲಿ ಇದ್ದಾರೆ. ಲಟಾಕಿಯಾ ನಗರ ಭೂಕಂಪದಿಂದ ಹಾನಿಗೀಡಾಗಿದ್ದು, ಹಲವು ಮಂದಿ ಮೃತಪಟ್ಟಿದ್ದಾರೆ ಅಥವಾ ನಡುಗುವ ಚಳಿಯಲ್ಲಿ ನಿರ್ಗತಿಕರಾಗಿದ್ದಾರೆ. ನನ್ನ ಮಕ್ಕಳು ಕೂಡಾ ಅಲ್ಲಿದ್ದು, ನಿಜಕ್ಕೂ ಭಯವಾಗುತ್ತಿದೆ" ಎಂದು ನಸ್ರೀಸ್ ಎಂಬ ಪಿಎಚ್‌ಡಿ ವಿದ್ಯಾರ್ಥಿನಿ ಹೇಳುತ್ತಾರೆ.

"ಫೆಬ್ರುವರಿ 6ರಂದು ಬೆಳಿಗ್ಗೆ ನಮ್ಮ ದೇಶದಲ್ಲಿ ಭೂಕಂಪ ಆಗಿರುವ ಬ್ರೇಕಿಂಗ್ ನ್ಯೂಸ್ ಅನ್ನು ಸಾಮಾಜಿಕ ಜಾಲತಾಣಗಲ್ಲಿ ನೊಡಿದೆ. ಅದು 7.8ರಷ್ಟು ತೀವ್ರತೆಯ ಕಂಪನವಾಗಿತ್ತು. ಹಾನ್ಸ್‌ನಲ್ಲಿರುವ ನನ್ನ ಸಹೋದರ ಮತ್ತು ಕುಟುಂಬದ ಬಗ್ಗೆ ಆತಂಕಿತನಾಗಿ ಕರೆ ಮಾಡಿದಾಗ ಅವರು ಚೆನ್ನಾಗಿದ್ದಾರೆ ಎಂದು ತಿಳಿಸಿದರು. ಆದರೆ ಮನೆಯೇ ತಲೆ ಮೇಲೆ ಬೀಳುವಷ್ಟು ಜೋರಾಗಿ ಭೂಮಿ ಕಂಪಿಸಿತು ಎಂದು ಸಹೋದರ ಹೇಳಿದ್ದಾಗಿ" ಹಾಮ್ಸ್ ಮೂಲದ ಮುಹನ್ನದ್ ಡಾರ್ಕ್ ಅಲ್ಸೆಬಾಯಿ ವಿವರಿಸಿದರು.

Similar News