ಫೆ.13ರಿಂದ ಏರೋ ಇಂಡಿಯಾ: ಬೆಂಗಳೂರು ನಗರದ ಹಲವು ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ರಸ್ತೆ ಮಾರ್ಗ ಇಲ್ಲಿದೆ...

Update: 2023-02-10 16:45 GMT

ಬೆಂಗಳೂರು, ಫೆ.10: ನಗರದ ಯಲಹಂಕ ವಾಯುನೆಲೆಯಲ್ಲಿ ಫೆ.13ರಿಂದ ನಡೆಯಲಿರುವ ‘ಏರೋ ಇಂಡಿಯಾ-2023’ರ ಹಿನ್ನೆಲೆ, ನಗರದ ಹಲವು ರಸ್ತೆಗಳಲ್ಲಿ ಸಂಚಾರ ನಿಷೇಧ ಮತ್ತು ಮಾರ್ಗ ಬದಲಾವಣೆ ಮಾಡಿ ಬೆಂಗಳೂರು ನಗರ ಸಂಚಾರ ಪೊಲೀಸರು ಆದೇಶಿಸಿದ್ದಾರೆ.

ಬೆಂಗಳೂರು ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಷೇಧ ಹೇರಲಾಗಿದ್ದು, ಬಳ್ಳಾರಿ ರಸ್ತೆಯಲ್ಲಿ- ಮೇಖ್ರಿ ವೃತ್ತದಿಂದ ಎಂವಿಐಟಿ ಗೇಟ್‍ವರೆಗೆ, ಗೊರಗುಂಟೆಪಾಳ್ಯ ರಸ್ತೆಯಿಂದ ಹೆಬ್ಬಾಳ-ಹೆಣ್ಣೂರು ಕ್ರಾಸ್‍ವರೆಗೂ ನಾಲ್ಕೂ ದಿಕ್ಕಿನಲ್ಲಿ ಸಂಚಾರ ಮತ್ತು ಪಾರ್ಕಿಂಗ್ ಅನ್ನು ನಿಷೇಧಿಸಲಾಗಿದೆ. 

ಜೊತೆಗೆ ನಾಗವಾರ ಜಂಕ್ಷನ್‍ನಿಂದ-ಥಣಿಸಂದ್ರ ಮುಖ್ಯರಸ್ತೆ, ಬಾಗಲೂರು ಮುಖ್ಯರಸ್ತೆ, ರೇವಾ ಕಾಲೇಜ್ ಜಂಕ್ಷನ್‍ವರೆಗೆ ವಾಹನ ಸಂಚಾರ ನಡೆಸುವಂತಿಲ್ಲ. ಬೆಂಗಳೂರು-ತುಮಕೂರು ರಸ್ತೆಯಲ್ಲಿ ಚಿಕ್ಕಬಾಣಾವರ ಕಡೆಯಿಂದ ಹೆಸರಘಟ್ಟ-ಯಲಹಂಕ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಆದೇಶಿಸಲಾಗಿದೆ. 

ಈ ಭಾಗಗಳಲ್ಲಿ ಲಾರಿ, ಟ್ರಕ್, ಖಾಸಗಿ ಬಸ್, ಭಾರಿ ಮತ್ತು ಮಧ್ಯಮ ಸರಕು ಸಾಗಣೆ ವಾಹನ ಹಾಗೂ ಟ್ರ್ಯಾಕ್ಟರ್ ಸಂಚಾರವನ್ನು ನಿಷೇಧಿಸಿ ಟ್ರಾಫಿಕ್ ಪೊಲೀಸರು ಆದೇಶಿಸಿದ್ದು, ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ. 

ಚಿಕ್ಕಬಳ್ಳಾಪುರ ಕಡೆಯಿಂದ ಬರುವ ವಾಹನಗಳು ದೇವನಹಳ್ಳಿಯಿಂದ ದೊಡ್ಡಬಳ್ಳಾಪುರ-ದಾಬಸ್‍ಪೇಟೆ ಮೂಲಕ ಸಂಚರಿಸಬೇಕಿದೆ. ಕೆ.ಆರ್.ಪುರ-ಹೊಸೂರು-ಚೆನ್ನೈ-ಬೆಂಗಳೂರು ಮಾರ್ಗದ ಮುಖಾಂತರ ಹೊಸಕೋಟೆ ರಸ್ತೆಯಲ್ಲಿ ಸಂಚರಿಸಬೇಕು.

ತುಮಕೂರು ರಸ್ತೆಯಿಂದ ಬರುವ ವಾಹನಗಳು ಸಿಎಂಟಿಐ ಜಂಕ್ಷನ್‍ನಲ್ಲಿ ಬಲ ತಿರುವು ಪಡೆದು ಸುಮನಹಳ್ಳಿ, ನಾಯಂಡಹಳ್ಳಿ ವೃತ್ತ, ಕನಕಪುರ ರಸ್ತೆ ಮೂಲಕ ಸಂಚರಿಸಬೇಕು ಎಂದು ತಿಳಿಸಲಾಗಿದ್ದು, ಫೆಬ್ರವರಿ 13ರಿಂದ ಏರ್ ಶೋ ಇರುವ ಎಲ್ಲ ದಿನವೂ ಬೆಳಗ್ಗೆ 6 ರಿಂದ ರಾತ್ರಿ 8ಗಂಟೆ ವರೆಗೆ ಈ ನಿಯಮ ಅನ್ವಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News