ಲೇಖಕಿ ಸಾರಾ ಅಬೂಬಕರ್ ಸೇರಿ ಆಗಲಿದ ಗಣ್ಯರಿಗೆ ಸಂತಾಪ
ಬೆಂಗಳೂರು, ಫೆ.10: ಹಿರಿಯ ಸಾಹಿತಿ ಸಾರಾ ಅಬೂಬಕರ್ ಸೇರಿದಂತೆ ಅಗಲಿದ ಹಲವು ಗಣ್ಯರಿಗೆ ವಿಧಾನ ಪರಿಷತ್ತಿನಲ್ಲಿ ಸಂತಾಪ ಸೂಚಿಸಲಾಯಿತು.
ಶುಕ್ರವಾರ ವಿಧಾನಮಂಡದ ಜಂಟಿ ಅಧಿವೇಶವನ್ನುದ್ದೇಶಿಸಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಮಾಡಿದ ಭಾಷಣವನ್ನು ಪರಿಷತ್ತಿನಲ್ಲಿ ಮಂಡನೆ ಮಾಡಲಾಯಿತು. ಬಳಿಕ ಸಂತಾಪ ಸೂಚಕ ನಿರ್ಣಯ ಮಂಡಿಸಿದ ಸಭಾಪತಿ ಹೊರಟ್ಟಿ, ಇತ್ತೀಚೆಗೆ ಅಗಲಿದ ಎಂಟು ಮಂದಿ ಗಣ್ಯರಿಗೆ ಶ್ರದ್ಧಾಂಜಲಿ ಮತ್ತು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಜಿ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.
ಲೇಖಕಿ ಸಾರಾ ಅಬೂಬಕ್ಕರ್, ಹಿರಿಯ ಸಾಹಿತಿ ಕೆ.ವಿ.ತಿರುಮಲೇಶ್, ಮಾಜಿ ಶಾಸಕ ಡಾ.ಎಚ್.ಡಿ.ಲಮಾಣಿ, ಹಿರಿಯ ಸಂಶೋಧಕ ಡಾ.ಎಚ್.ಚಂದ್ರಶೇಖರ್, ಹಿರಿಯ ಶಿಕ್ಷಣ ತಜ್ಞ ಡಾ.ಪಾಂಡುರಂಗ ಶೆಟ್ಟಿ, ನಾಡಿನ ಹಿರಿಯ ಗಮಕಿ ಹಾಗೂ ಸುಗಮ ಸಂಗೀತಗಾರ ಚಂದ್ರಶೇಖರ ಕೆದ್ಲಾಯ, ಗಾಯಕಿ ವಾಣಿ ಜಯರಾಂ ಮತ್ತು ಚಿತ್ರ ಕಲಾವಿದ ಬಿ.ಕೆ.ಎಸ್.ವರ್ಮಾ ನಿಧನರಾಗಿರುವುದನ್ನು ತಿಳಿಸಿ, ಅವರ ಪರಿಚಯ ಮತ್ತು ಸಾಧನೆಗಳನ್ನು ವಿವರಿಸಿದರು.
1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದ್ದ ಸಾ.ರಾ. ಅಬೂಬಕ್ಕರ್ ಅವರು, ಚಂದ್ರಗಿರಿಯ ತೀರದಲ್ಲಿ ಎಂಬ ಮೊದಲ ಕಾದಂಬರಿ ರಚಿಸಿದರು. ಇದು ಅಂದು ಲಂಕೇಶ್ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಗೊಂಡಿತು.
‘ಮುಸ್ಲಿಮ್ ಮಹಿಳೆ ಶಾಲೆ ಕಲಿತಿದ್ದು’ ಬರಹದ ಮೂಲಕ ಮುಸ್ಲಿಮ್ ಮಹಿಳೆಯರ ಮೇಲೆ ಪ್ರತಿನಿತ್ಯ ಆಗುವ ಶೋಷಣೆ, ಅವಮಾನಗಳನ್ನು ಲೇಖನಿಯ ಮೂಲಕ ಬಿಚ್ಚಿಡುತ್ತ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆಯಬೇಕೆಂದು ನಿರಂತವಾಗಿ ಪ್ರತಿಪಾದಿಸಿದ್ದರು.
2008ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ, ಹಂಪಿ ವಿವಿಯ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ನಿಧನದಿಂದಾಗಿ ರಾಜ್ಯವು ಕತೆಗಾರ್ತಿ, ಕಾದಂಬರಿಗಾರ್ತಿ ಹಾಗೂ ಖ್ಯಾತ ಲೇಖಕಿಯನ್ನು ಕಳೆದುಕೊಡಂತೆ ಆಗಿದೆ ಎಂದು ಸಭಾಪತಿ ನುಡಿದರು.
ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಹಿರಿಯ ಸಂಶೋಧಕರಾದ ಡಾ.ಚಂದ್ರಶೇಖರ್, ಸಾಹಿತಿ, ಸಂಶೋಧಕರಾಗಿ ಯಶಸ್ವಿ ಜೀವನ ನಡೆಸಿದರು. ಸಾರಾ ಅಬೂಬಕರ್ ಸ್ವತಂತ್ರ ಪೂರ್ವದಲ್ಲಿ ಜನಿಸಿದರು. ಮಹಿಳೆಯರಿಗೆ ಶಿಕ್ಷಣ ಕಡಿಮೆ ಎಂಬ ಕಾಲಘಟ್ಟದಲ್ಲಿ ಓದಿ ಲೇಖನ ಬರೆಯಲಾರಂಭಿಸಿದರು. ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಸಾಕಷ್ಟು ಕಾದಂಬರಿ, ಲೇಖನ ಬರೆದಿದ್ದರು. ಅವರ ಚಂದ್ರಗಿರಿಯ ತೀರದಲ್ಲಿ ಕಾದಂಬರಿಯನ್ನು ಸಂಪ್ರದಾಯವಾದಿಗಳು ವಿರೋಧಿಸಿದರು. ಪ್ರಗತಿಪರರು ಬೆಂಬಲಿಸಿದರು. ಸಮಾಜದಲ್ಲಿ ಮಹಿಳೆಯರ ಸ್ಥಿತಿ ಸುಧಾರಣೆಗೆ ಅವರು ಬರೆದ ಲೇಖನಗಳು ಇಂದು ಸ್ಮರಣೀಯ ಎಂದರು.
ಸಾಹಿತಿ ಚಂದ್ರಶೇಖರ ಅವರು ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು. ಶ್ರೇಷ್ಠ ಸುಗಮ ಸಂಗೀತ ಹಾಡುಗಾರರಾಗಿದ್ದರು. ಸಾವಿರಾರು ಜನ ಅವರ ಕಾರ್ಯಕ್ರಮಗಳಿಗೆ ಸೇರುತ್ತಿದ್ದರು. ಕೆ.ವಿ.ತಿರುಮಲೇಶ್ ಅವರು ಕಾಸರಗೋಡಿನಲ್ಲಿ ಜನಿಸಿದರು. ಉತ್ತಮ ಸಾಹಿತ್ಯ ರಚಿಸಿದರು, ಅದ್ಭತ ಭಾಷಾ ಶೈಲಿ ಹೊಂದಿದ್ದರು. 60ಕ್ಕೂ ಹೆಚ್ಚು ಕೃತಿಗಳನ್ನು ರಚನೆ ಮಾಡಿದ್ದಾರೆ, ಅವುಗಳಲ್ಲಿ ಬಹುತೇಕ ಕೃತಿಗಳು ಅನ್ಯಭಾಷೆಗೆ ತುರ್ಜುಮೆಗೊಂಡಿವೆ ಎಂದರು.
ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಡಾ.ಎಚ್.ಡಿ.ಲಂಬಾಣಿ ಕರ್ನಾಟಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಬ್ಯಾಡಗಿ ಮೀಸಲು ಕ್ಷೇತ್ರದಿಂದ ಶಾಸಕರಾಗಿ ಬಂಗಾರಪ್ಪ, ವೀರಪ್ಪ ಮೋಯ್ಲಿ ಸರಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದರು. ಕಂದಾಯ ಗ್ರಾಮ ಘೋಷಣೆಗೆ ಅಪಾರವಾಗಿ ಶ್ರಮಿಸಿದರು. ಈಗಿನ ಸರ್ಕಾರ ಅದನ್ನು ಅನುμÁ್ಠನಗೊಳಿಸುತ್ತಿದೆ. ಇತ್ತೀಚೆಗೆ ಅವರು ಸಕ್ರಿಯ ರಾಜಕೀಯ ಜೀವನದಿಂದ ದೂರ ಇದ್ದರು. ಸಾರಾ ಅಬೂಬುಕರ್, ಮಹಿಳಾ ಸಬಲೀಕರಣಕ್ಕೆ ದೊಡ್ಡ ಧ್ವನಿ ಎತ್ತಿದ್ದರು ಎಂದರು.
ಮೃತರ ಆತ್ಮಕ್ಕೆ ಸದ್ಗತಿ ಕೋರುತ್ತಾ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆನಂತರ, ಸಭಾಪತಿ ಅವರು, ಸದನದಲ್ಲಿ ಒಂದು ವಿಶಿಷ್ಟ ಅನುಭವ ಇದಾಗಿದ್ದು. ಶ್ರೇಷ್ಠ ಸಂತರು ಆಗಿದ್ದ ಜ್ಞಾನಯೋಗಿ ಸಿದ್ದೇಶ್ವರರ ಸ್ವಾಮಿಜಿಯ ನುಡಿ ನಮನ ಕಾರ್ಯಕ್ರಮ ಕೈಗೆತ್ತಿಕೊಳ್ಳುತ್ತಿದ್ದೇನೆ. ಈ ಮಹಾತ್ಮರ ಅಗಲಿಕೆಗೆ ಶ್ರದ್ಧಾಂಜಲಿ ಬೇಡ, ನುಡಿ ನಮನ ಸೂಕ್ತ ಎಂದು ಅಭಿಪ್ರಾಯಪಟ್ಟರು.