×
Ad

ನಾಟಕದಲ್ಲಿ ಅಂಬೇಡ್ಕರ್‌ ಗೆ ಅವಹೇಳನ: ಸಾಮಾಜಿಕ ಜಾಲತಾಣದಲ್ಲಿ BAN JAIN UNIVERSITY ಅಭಿಯಾನ

Update: 2023-02-11 16:08 IST

ಬೆಂಗಳೂರು, ಫೆ.10: ಜಯನಗರದ 9ನೇ ಬ್ಲಾಕ್ ಬಳಿ ಇರುವ ಜೈನ್ ವಿಶ್ವ ವಿದ್ಯಾಲಯದ ಮ್ಯಾನೇಜ್‍ಮೆಂಟ್ ಸ್ಟಡೀಸ್‍ನಲ್ಲಿ ವಿದ್ಯಾರ್ಥಿಗಳು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಪರಿಶಿಷ್ಟ ಜಾತಿ ಸೇರಿದಂತೆ ದಲಿತ ಸಮುದಾಯ ಅವಹೇಳನ ಮಾಡಿದ ವಿವಾದಾತ್ಮಕ ಕಿರು ನಾಟಕ ಪ್ರದರ್ಶಿಸಿದ್ದು, ನಾಟಕದ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನಗರದ ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದರ ಬೆನ್ನಲ್ಲೇ ಆರು ಮಂದಿ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಅಮಾನತುಗೊಳಿಸಿದೆ. 

ಇದನ್ನೂ ಓದಿ; ಬೆಂಗಳೂರು | ನಾಟಕದಲ್ಲಿ ಅಂಬೇಡ್ಕರ್ ಗೆ ಅವಮಾನ ಪ್ರಕರಣ: ಜೈನ್ ಕಾಲೇಜಿನ 6 ವಿದ್ಯಾರ್ಥಿಗಳು ಅಮಾನತು

ವಿಡಿಯೋದಲ್ಲಿ ಏನಿದೆ?;

ಕೆಳಜಾತಿಯ ಹಿನ್ನೆಲೆಯ ವ್ಯಕ್ತಿಯೊಬ್ಬ ಮೇಲ್ಜಾತಿ ಮಹಿಳೆಯೊಂದಿಗೆ ಡೇಟಿಂಗ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಪ್ರದರ್ಶಿಸಲಾಗಿದೆ. ಇದೇ ವೇಳೆ ಆತ, ‘ತಾನು ದಲಿತ' ಎಂದು ಹೇಳಿಕೊಳ್ಳುವ ಸನ್ನಿವೇಶ ಬರುತ್ತದೆ. ಆಗ ‘ಡೋಂಟ್ ಟಚ್ ಮಿ, ಟಚ್ ಮಿ’ ಎಂಬ ಹಾಡನ್ನು ಹಾಕಿರುವುದು ಕಂಡು ಬಂದಿದೆ. ಹಾಗೆಯೇ ಈ ನಾಟಕದಲ್ಲಿ ಬಿ.ಆರ್.ಅಂಬೇಡ್ಕರ್ ಅವರನ್ನು ‘ಬಿಯರ್ ಅಂಬೇಡ್ಕರ್’ ಎಂದು ಅವಹೇಳನ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ದಾಖಲಾಗಿದೆ.

BAN JAIN UNIVERSITY ಅಭಿಯಾನ; 

''ಮನುಷ್ಯರ ಘನತೆಯನ್ನು ಅಣಕಿಸುವ ಕಾರ್ಯಕ್ರಮ ನಡೆಸುವ ಸಂಸ್ಥೆಗೆ ತನ್ನನ್ನು ತಾನು ವಿಶ್ವವಿದ್ಯಾಲಯ ಎಂದು ಕರೆದುಕೊಳ್ಳಬಾರದು. ಅದು ಅಸಹ್ಯ....'' ಎಂದು ನೆಟ್ಟಿಗರೊಬ್ಬರು BAN JAIN UNIVERSITY ಎಂಬ ಹ್ಯಾಶ್ ಟ್ಯಾಗ್ ನಡಿಯಲ್ಲಿ ಟ್ವೀಟ್ ಮಾಡಿದ್ದಾರೆ. 

ಜೈನ್‌ ವಿಶ್ವವಿದ್ಯಾನಿಲಯವನ್ನು ರದ್ದುಗೊಳಿಸಬೇಕು. ಈ ಸ್ಕಿಟ್‌ನಲ್ಲಿ ಭಾಗಿಯಾಗಿರುವವರು (ಸ್ಕಿಟ್ ಮಾಡಿದವನು, ಮಾಡಲು ಕುಮ್ಮಕ್ಕು ಕೊಟ್ಟವನು, ಅದನ್ನು ಪ್ರೋತ್ಸಾಹಿಸಿದ ಮ್ಯಾನೇಜ್‌ಮೆಂಟ್) ಯಾರೇ ಆದರೂ ಅವರ ವಿರುದ್ಧ ಕ್ರಮ ಜರುಗಿಸಬೇಕು. ಇಂತಹ ದೇಶದ್ರೋಹಿಗಳ ಮೇಲೆ ಯುಎಪಿಎ ಹಾಗೂ ಎಸ್‌ಸಿ, ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣದ ದಾಖಲಿಸಬೇಕು” ಎಂದು ಬೆಂಗಳೂರು ವಿವಿ ವಿದ್ಯಾರ್ಥಿಗಳು ಹೋರಾಟಕ್ಕೆ ಕರೆ ನೀಡಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕಾಲೇಜು ಉತ್ಸವದಲ್ಲಿ ವಿದ್ಯಾರ್ಥಿಗಳು ಹೀಗೆ ಬಿ.ಆರ್.ಅಂಬೇಡ್ಕರ್ ಮತ್ತು ಪರಿಶಿಷ್ಟ ಜಾತಿ ಸೇರಿದಂತೆ ದಲಿತ ಸಮುದಾಯವನ್ನು ಒಳಗೊಂಡ ವಿವಾದಾತ್ಮಕ ಕಿರು ನಾಟಕವನ್ನು ಪ್ರದರ್ಶಿಸಿದ್ದಾರೆ. ಅಲ್ಲದೇ ದಲಿತರು ಮತ್ತು ಪರಿಶಿಷ್ಟ ಜಾತಿಯ ಬಗ್ಗೆ ವಿವಿಧ ಹಾಸ್ಯಗಳನ್ನು ವಿದ್ಯಾರ್ಥಿಗಳು ಮಾಡಿದ್ದಾರೆ. ಹಾಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗವು ಕಾಲೇಜು ಆಡಳಿತ ಮಂಡಳಿಯ ವಿರುದ್ದ ಸ್ವಯಂ ದೂರು ದಾಖಲಿಸಿಕೊಳ್ಳಲು ದಲಿತ ಮುಂಖಂಡರು ಒತ್ತಾಯಿಸುತ್ತಿದ್ದಾರೆ. 

ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಹರ್ಶಕುಮಾರ್ ಕುಗ್ವೆ ''ಜೈನ್ ಕಾಲೇಜಿನ CMS ವಿಬಾಗದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅಪಮಾನಿಸಿ ಕೇಕೆ ಹಾಕಿದ ಪ್ರತಿಯೊಬ್ಬರೂ ದೇಶದ್ರೋಹಿಗಳೇ... ಈಗಲೇ ಇವರ ಮನಸಿನಲ್ಲಿ ಇಶ್ಟು ದ್ವೇಷ, ನಂಜು ತುಂಬಿಕೊಂಡಿರುವಾಗ ಇವರೆಲ್ಲಾ ಮುಂದೆ ಕಂಪನಿಗಳ ಮ್ಯಾನೇಜ್ ಮೆಂಟ್ ವಿಭಾಗಗಳಲ್ಲಿ ಸೇರಿಕೊಂಡು ಏನು ಮಾಡಬಹುದು ಯೋಚಿಸಿ.‌'' ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

''ನಿಜಕ್ಕೂ ಇಂತಾ ದೇಶದ್ರೋಹಿ ಕಾಲೇಜುಗಳಿಗೆ ಮಾನ್ಯತೆಯನ್ನೇ ರದ್ದು ಮಾಡಬೇಕು. ಆ ವಿಡಿಯೋ ಎಡಿಟೆಡ್ ಎಂಬ ತಪ್ಪು ಮಾಹಿತಿ ಪ್ರಚಾರ ನಡೆಯುತ್ತಿದೆ. ಆದರೆ ಅದು ಎಡಿಟೆಡ್ ಅಲ್ಲ. Subtitles ಮಾತ್ರ ಹಾಕಲಾಗಿದೆ. ಆ ವಿಡಿಯೋ ದಲ್ಲಿರುವ ನಾಟಕದಲ್ಲಿ ಪಾತ್ರಗಳು ಮಾತಾಡಿಲ್ಲ. ಬದಲಿಗೆ ಒಬ್ಬ ವ್ಯಕ್ತಿಯ ನಿರೂಪಣೆಗೆ ತಕ್ಕಂತೆ ಪಾತ್ರಗಳು ಅಬಿನಯಿಯಿಸಿವೆ. ಪ್ರೇಕ್ಷಕರು ಕೇಕೆ ಹಾಕಿದ್ದಾರೆ....  ಅದರಲ್ಲಿ ಕಾಲೇಜಿನ ಮ್ಯಾನೇಜ್ಮೆಂಟ್, ನಾಟಕ ಮಾಡಿದವರು, ನೋಡಿದವರು ಎಲ್ಲರೂ ಅಪರಾದಿಗಳೇ, ಮನಸ್ಸಿನಲ್ಲಿ ವಿಷ ತುಂಬಿಕೊಂಡವರೇ...'' ಎಂದು ಅವರು ಬರೆದುಕೊಂಡಿದ್ದಾರೆ.

ಕ್ರಮಕ್ಕೆ ಆಗ್ರಹಿಸಿದ ಕಾಂಗ್ರೆಸ್ 

''ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಇತ್ತೀಚೆಗೆ ಬಾಬಾಸಾಹೇಬ್ ಅಂಬೇಡ್ಕರ್ ಹಾಗು ದಲಿತ ಸಮುದಾಯಗಳ ಕುರಿತು ತೀರಾ ಅಸಭ್ಯವಾಗಿ, ನಿಂದನಾತ್ಮವಾಗಿ ಕಾರ್ಯಕ್ರಮ ನಡೆದಿರುವ ವಿಡಿಯೋ ಹರಿದಾಡುತ್ತಿದೆ. ಪೊಲೀಸರು ದಯವಿಟ್ಟು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ. ಈ ರೀತಿಯ ಘಟನೆ ಅತ್ಯಂತ ಖಂಡನೀಯ'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Full View Full View

Similar News