ಬೆಂಗಳೂರು | ನಾಟಕದಲ್ಲಿ ಅಂಬೇಡ್ಕರ್ ಗೆ ಅವಮಾನ ಪ್ರಕರಣ: ಜೈನ್ ಕಾಲೇಜಿನ 6 ವಿದ್ಯಾರ್ಥಿಗಳು ಅಮಾನತು

ಬೆಂಗಳೂರು: ಡಾ. ಬಿ.ಆರ್ ಅಂಬೇಡ್ಕರ್ ಮತ್ತು ದಲಿತರ ವಿರುದ್ಧ ಆಕ್ಷೇಪಾರ್ಹ ಕಿರು ನಾಟಕ (ಸ್ಕಿಟ್) ಪ್ರದರ್ಶನ ಮಾಡಿದ್ದಕ್ಕೆ ಜೈನ್ ಯೂನಿವರ್ಸಿಟಿ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಆರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ ಎಂದು indianexpress.com ವರದಿ ಮಾಡಿದೆ.
ಈ ವಿಷಯವನ್ನು ತನಿಖೆ ಮಾಡಲು ಯುಜಿಸಿ ಮಾರ್ಗಸೂಚಿಗಳ ಪ್ರಕಾರ ವಿಶ್ವವಿದ್ಯಾಲಯವು ತಜ್ಞರನ್ನು ಒಳಗೊಂಡ ಶಿಸ್ತು ಸಮಿತಿಯನ್ನು ರಚಿಸಿದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ದೃಢಪಡಿಸಿದರು.
ಫೆ.20ರವರೆಗೆ ಕಾಲೇಜು ಆಯೋಜಿಸಿದ್ದ ಯುವಜನೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಪ್ರದರ್ಶನ ನೀಡುತ್ತಿದ್ದರು. ಘಟನೆ ಗುರುವಾರ ಬೆಳಕಿಗೆ ಬಂದಿದೆ. ನಾಟಕದ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಗರದ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ ವಂಚಿತ್ ಬಹುಜನ ಆಗಾಡಿಯ ಕಾರ್ಯಕರ್ತ ಯುವಾ ಅಕ್ಷಯ್ ಬನ್ಸೋಡೆ ಅವರು ಮಹಾರಾಷ್ಟ್ರದ ನಾಂದೇಡ್ ಪೊಲೀಸ್ ವರಿಷ್ಠಾಧಿಕಾರಿಯ ಮುಂದೆ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಔಪಚಾರಿಕ ಪೊಲೀಸ್ ದೂರು ದಾಖಲಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?;
ಕೆಳಜಾತಿಯ ಹಿನ್ನೆಲೆಯ ವ್ಯಕ್ತಿಯೊಬ್ಬ ಮೇಲ್ಜಾತಿ ಮಹಿಳೆಯೊಂದಿಗೆ ಡೇಟಿಂಗ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಪ್ರದರ್ಶಿಸಲಾಗಿದೆ. ಇದೇ ವೇಳೆ ಆತ, ‘ತಾನು ದಲಿತ' ಎಂದು ಹೇಳಿಕೊಳ್ಳುವ ಸನ್ನಿವೇಶ ಬರುತ್ತದೆ. ಆಗ ‘ಡೋಂಟ್ ಟಚ್ ಮಿ, ಟಚ್ ಮಿ’ ಎಂಬ ಹಾಡನ್ನು ಹಾಕಿರುವುದು ಕಂಡು ಬಂದಿದೆ. ಹಾಗೆಯೇ ಈ ನಾಟಕದಲ್ಲಿ ಬಿ.ಆರ್.ಅಂಬೇಡ್ಕರ್ ಅವರನ್ನು ‘ಬಿಯರ್ ಅಂಬೇಡ್ಕರ್’ ಎಂದು ಅವಹೇಳನ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ದಾಖಲಾಗಿದೆ.







