×
Ad

ಸಮಾನತೆ ತರುವ ಸಾಧ್ಯತೆಗಳಲ್ಲಿ ಕಾಮವೂ ಒಂದು: ಡಾ.ನಟರಾಜ್ ಹುಳಿಯಾರ್ ಅಭಿಪ್ರಾಯ

Update: 2023-02-11 22:48 IST

ಬೆಂಗಳೂರು, ಫೆ. 11: ಭಾರತದಲ್ಲಿ ಸಮಾನತೆಯನ್ನು ತರುವ ಅನೇಕ ಸಾಧ್ಯತೆಗಳಲ್ಲಿ ಕಾಮವೂ ಒಂದು. ಪ್ರಸ್ತುತ ನಾವು ಒಂದು ಮಟ್ಟಕ್ಕೆ  ಅಸ್ಪೃಶ್ಯತೆಯನ್ನು ಮೀರಿದ್ದಿದ್ದರೆ ಕಾಮವೂ ಒಂದಂಶ ಎಂದು ಹಿರಿಯ ಲೇಖಕ ಡಾ.ನಟರಾಜ್ ಹುಳಿಯಾರ್ ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ನ್ಯಾಷನಲ್ ಕಾಲೇಜಿನ ಎಚ್.ಎನ್.ಮಲ್ಟಿಮೀಡಿಯಾ ಸಭಾಂಗಣದಲ್ಲಿ ಪ್ರಕಾಶ್ ಮಂಟೇದ ಅವರ ‘ಕಾಮಕಸ್ತೂರಿ ಬನ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಮ ದೇಹದ ತೃಷೆಗಳ ಸೂಕ್ಷ್ಮತೆಗಳನ್ನು ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ. ಕವಿತೆಯೊಳಗೆ ಈ ಕಾಲದ ಎಲ್ಲ ವಸ್ತುಗಳು ತುಂಬಿಕೊಂಡಿದ್ದು, ತೀವ್ರ ಹಿಂಸೆಯ ಕಾಲಘಟ್ಟದಲ್ಲಿ ಕಾರುಣ್ಯದ ಭಾಷೆಯ ಮೂಲಕ ವ್ಯವಸ್ಥೆಯನ್ನು ಧಿಕ್ಕರಿಸಲಾಗುತ್ತದೆ. ಪ್ರೇಮಿ, ಹುಚ್ಚ ಮತ್ತು ಕವಿ ಸದಾ ಕಲ್ಪನೆಯಿಂದ ತುಂಬಿ ತುಳುಕುತ್ತಿರುತ್ತಾನೆ. ಪ್ರಕಾಶ್ ತನ್ನ ವಿಭಿನ್ನ ಚಿಂತನೆಗಳ ಮೂಲಕ ವೈಚಾರಿಕ ಕವಿಯಾಗಿ ಹೊರಹೊಮ್ಮಿದ್ದಾರೆ ಎಂದು ನುಡಿದರು.

ಕವಯಿತ್ರಿ ಚಾಂದಿನಿ ಮಾತನಾಡಿ, ಮಂಗಳಮುಖಿ ಬರಹಗಾರರನ್ನು ಸಾಹಿತ್ಯ ರಂಗದಲ್ಲಿ ಗುರುತಿಸಲು ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಅನೇಕ ಮಂಗಳಮುಖಿ ಬರಹಗಾರರು ಇನ್ನೂ ತೆರೆಮರೆಯಲ್ಲಿದ್ದು, ಅಂತಹವರನ್ನು ಹೊರ ಜಗತ್ತಿಗೆ ಪರಿಚಯಿಸುವ ಕೆಲಸವಾಗಬೇಕು ಎಂದು ಸಲಹೆ ಮಾಡಿದರು.

ಪ್ರಕಾಶ್ ಮಂಟೇದ ಅವರ ಕಾಮಕಸ್ತೂರಿ ಬನ ಪುಸ್ತಕ ಸಮಾಜದ ಕಣ್ಣು ತೆರೆಸಿ, ಸೀಮಿತ ಚೌಕಟ್ಟನ್ನು ಹೊಡೆಯುವ ವಿಷಯಗಳನ್ನು ಒಳಗೊಂಡಿರುವುದು ಸಂತಸದ ಸಂಗತಿ ಎಂದ ಅವರು, ನಮ್ಮನ್ನು ತೆಗಳುವ ಮತ್ತು ಹೊಗಳುವ ಜನರ ಮಧ್ಯೆ ನಾವು ಬದುಕುತ್ತಿದ್ದು, ಸಾಹಿತ್ಯ ಮಾತ್ರ ನಮ್ಮನ್ನು ಖುಷಿ ಮತ್ತು ನೆಮ್ಮದಿಯಿಂದ ಇಡಲು ಸಾಧ್ಯ. ಆದ್ದರಿಂದ ನಾನು ಅನುಭವ, ಭಾವನೆಗಳನ್ನು ಬರೆದಿಡುತ್ತಿದ್ದೇನೆ ಎಂದು ಚಾಂದಿನಿ ಹೇಳಿದರು.

ಹಿರಿಯ ಕೆಎಎಸ್ ಅಧಿಕಾರಿ ಡಾ.ವೆಂಕಟೇಶಯ್ಯ ನೆಲ್ಲುಕುಂಟೆ ಮಾತನಾಡಿ, ‘ಪ್ರಸ್ತುತ ದಿನಮಾನಗಳಲ್ಲಿ ಕವಿ ತೀವ್ರ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದು, ಇಂತಹ ಕೆಟ್ಟ ಕಾಲದಲ್ಲಿಯೇ ಉತ್ತಮ ಕವಿ, ಲೇಖಕ ಜನಿಸಲು ಸಾಧ್ಯ. ಮಂಟೇದ ಅವರು ಪುಸ್ತಕದಲ್ಲಿ ಮಂಗಳಮುಖಿ ವರ್ಗದ ಒಳನೋಟಗಳನ್ನು ಬಿತ್ತರಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಕವಿ ಪ್ರಕಾಶ್ ಮಂಟೇದ ಸೇರಿದಂತೆ ಇತರರು ಇದ್ದರು.

Similar News