ವಿಶ್ರಾಂತ ಪೋಪ್ ಬೆನೆಡಿಕ್ಟ್ ಮೃತಪಟ್ಟ ಬಳಿಕ ವ್ಯಾಟಿಕನ್‌ನಲ್ಲಿ ಅಸಮಾಧಾನ ಸ್ಫೋಟ: ವರದಿ

Update: 2023-02-11 18:08 GMT

ವ್ಯಾಟಿಕನ್ ಸಿಟಿ, ಫೆ.11: ತಮ್ಮ ಪೂರ್ವಾಧಿಕಾರಿ ಬೆನೆಡಿಕ್ಟ್ ಮೃತಪಟ್ಟ ಬಳಿಕ ಪೋಪ್ ಫ್ರಾನ್ಸಿಸ್ ವ್ಯಾಟಿಕನ್‌ನಲ್ಲಿ ‘ಅಂತರ್ಯುದ್ಧ’ ಎದುರಿಸುತ್ತಿದ್ದಾರೆ. ಫ್ರಾನ್ಸಿಸ್ ವಿರುದ್ಧದ ಟೀಕಾಪ್ರಹಾರ ಮತ್ತು ಅಸಮಾಧಾನ ತೀವ್ರಗೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಪೋಪ್ ಫ್ರಾನ್ಸಿಸ್ ಅವರ ಸುಧಾರಣಾ ಕ್ರಮಗಳು, ಅವರ ವಿದೇಶಿ ಸಂಬಂಧಗಳ ನೀತಿಯನ್ನು ಟೀಕಿಸುತ್ತಿರುವವರ ಸಂಖ್ಯೆ ಈಗ ಹೆಚ್ಚಿದೆ. 8 ವರ್ಷ ಪೋಪ್ ಹುದ್ದೆಯಲ್ಲಿದ್ದು 2013ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದ ಬೆನೆಡಿಕ್ಟ್ 96ನೇ ವಯಸ್ಸಿನಲ್ಲಿ ಕಳೆದ ಡಿಸೆಂಬರ್ 31ರಂದು ಮೃತಪಟ್ಟಿದ್ದರು. ತಮ್ಮ ಉತ್ತರಾಧಿಕಾರಿಯಾದ ಪೋಪ್ ಫ್ರಾನ್ಸಿಸ್ ಕೈಗೊಂಡ ಹಲವು ನಿರ್ಧಾರಗಳ ಬಗ್ಗೆ ಬೆನೆಡಿಕ್ಟ್‌ಗೆ ಆತಂಕವಿತ್ತು ಎಂದು ಬೆನೆಡಿಕ್ಟ್ ಅವರ ನಿಕಟವರ್ತಿ ಜಾರ್ಜ್ ಗೇನ್ಸ್‌ವೆನ್ ಹೇಳಿದ್ದಾರೆ.

ಫ್ರಾನ್ಸಿಸ್ ಅವರ ವಿರುದ್ಧದ ಟೀಕೆಗಳು ಹೊಸದೇನೂ ಅಲ್ಲ. ಫ್ರಾನ್ಸಿಸ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಮತ್ತು ವೈಯಕ್ತಿಕ ವಿಷಯಗಳಿಗೆ ಆದ್ಯತೆ ನೀಡಿ ಧರ್ಮಶಾಸ್ತ್ರದ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಟೀಕೆ ವ್ಯಾಪಕವಾಗಿದೆ. ಈ ಮಧ್ಯೆ, ಆಸ್ಟ್ರೇಲಿಯಾದ ಕಾರ್ಡಿನಲ್ ಬಿಷಪ್ ಜಾರ್ಜ್ ಪೆಲ್ ಗುಪ್ತಹೆಸರಿನಿಂದ ಕಳೆದ ವರ್ಷ ಪ್ರಕಟಿಸಿರುವ ಹಲವು ಲೇಖನಗಳಲ್ಲಿ ಫ್ರಾನ್ಸಿಸ್ ವಿರುದ್ಧ ನೇರ ಆರೋಪ ಮಾಡಲಾಗಿದೆ. ಜರ್ಮನಿಯ ಕಾರ್ಡಿನಲ್ ಗೆರ್ಹಾರ್ಡ್ ಮುಲ್ಲರ್ ಪ್ರಕಟಿಸಿದ ಪುಸ್ತಕದಲ್ಲಿ ಫ್ರಾನ್ಸಿಸ್ ವಿರುದ್ಧ ಮತ್ತಷ್ಟು ಆರೋಪ, ಟೀಕೆ ವ್ಯಕ್ತವಾಗಿದೆ. ಈಗಿನ ಪೋಪ್ ಅವರ ಆಡಳಿತ ಒಂದು ದುರಂತವಾಗಿದೆ ಮತ್ತು ಅವರ ಕಾರ್ಯಾವಧಿಯಲ್ಲಿ ವ್ಯಾಟಿಕನ್‌ನ ರಾಜತಾಂತ್ರಿಕತೆ ಭಾರೀ ವೈಫಲ್ಯ ಕಂಡಿದೆ. ಫ್ರಾನ್ಸಿಸ್ ಅವರು ಸಿದ್ಧಾಂತದ ಗೊಂದಲದಲ್ಲಿದ್ದಾರೆ ಮತ್ತು ತಮ್ಮ ಸುತ್ತಲಿನ ‘ಮ್ಯಾಜಿಕ್ ಸರ್ಕಲ್’ನ ಪ್ರಭಾವದಲ್ಲಿದ್ದಾರೆ ಎಂದು ಮುಲ್ಲರ್ ಟೀಕಿಸಿದ್ದಾರೆ. ಆದರೆ ಮುಲ್ಲರ್ ಅವರ ಹೇಳಿಕೆಯನ್ನು ವ್ಯಾಟಿಕನ್‌ನ ಒಳಗಿರುವ ಕೆಲವರು ವಿರೋಧಿಸಿದ್ದಾರೆ. ‘ನೀವು ಕಾರ್ಡಿನಲ್ ಹುದ್ದೆ ಒಪ್ಪಿಕೊಂಡರೆ ಪೋಪ್‌ರನ್ನು ಬೆಂಬಲಿಸಲು ಮತ್ತು ಅವರಿಗೆ ನೆರವಾಗಲು ಒಪ್ಪಿಕೊಂಡಂತೆ ಆಗುತ್ತದೆ. ಭಿನ್ನಾಭಿಪ್ರಾಯ ಸಹಜ. ಆದರೆ ಟೀಕೆಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದು ಸರಿಯಲ್ಲ ಎಂದು ವ್ಯಾಟಿಕನ್‌ನ ಹಿರಿಯ ಅಧಿಕಾರಿಯೊಬ್ಬರು ಖಂಡಿಸಿದ್ದಾರೆ. ‘ತನ್ನನ್ನು ಟೀಕಿಸುವವರು ಬೆನೆಡಿಕ್ಟ್ ಅವರ ಮರಣದ ಸಂದರ್ಭವನ್ನು ವೈಯಕ್ತಿಕ ಸ್ವಾರ್ಥ ಸಾಧನೆಗೆ ಬಳಸಿಕೊಂಡಿದ್ದಾರೆ. ಅವರು ಚರ್ಚ್‌ಗೆ ಸಂಬಂಧಿಸಿದ ವ್ಯಕ್ತಿಗಳಲ್ಲ,ಲ ಪಕ್ಷಕ್ಕೆ ಸಂಬಂಧಿಸಿದವರು’ ಎಂದು ಪೋಪ್ ಫ್ರಾನ್ಸಿಸ್ ಪ್ರತಿಕ್ರಿಯಿಸಿದ್ದಾರೆ.

ಮುಲ್ಲರ್ ಅವರ ಪುಸ್ತಕವು ಪೋಪ್ ಅವರ ವಿರೋಧಿಗಳ ತಡೆಯಲಾಗದ ಉಲ್ಬಣದಲ್ಲಿ ಹೊಸ ಹಂತವಾಗಿದೆ. ಚರ್ಚ್‌ನ ಹೃದಯಭಾಗದಲ್ಲಿ ಅಂತರ್ಯುದ್ಧವಿದೆ ಮತ್ತು ಅದು ಪೋಪ್ ಅಧಿಕಾರದ ಕೊನೆಯ ದಿನದವರೆಗೆ ಮುಂದುವರಿಯುತ್ತದೆ ಎಂದು ವ್ಯಾಟಿಕನ್ ವಿಷಯದ ತಜ್ಞ ಮಾರ್ಕೊ ಪೊಲಿಟಿ ಹೇಳಿದ್ದಾರೆ.

Similar News