ಟರ್ಕಿ ಭೂಕಂಪ: ಅವಶೇಷಗಳಡಿ 128 ಗಂಟೆಗಳ ಕಾಲ ಬದುಕುಳಿದ 2 ತಿಂಗಳ ಮಗು !

Update: 2023-02-13 08:01 GMT

ಹತಾಯ್: ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ 28 ಸಾವಿರ ಮಂದಿ ಜೀವ ಕಳೆದುಕೊಂಡಿದ್ದಾರೆ; ಆರು ಸಾವಿರ ಕಟ್ಟಡಗಳು ಧ್ವಂಸವಾಗಿವೆ. ಆದರೆ ಈ ವಿನಾಶಕಾರಿ ವಿಕೋಪದ ನಡುವೆಯೂ ಕೆಲ ಪವಾಡಸದೃಶ ಘಟನೆಗಳು ಬೆಳಕಿಗೆ ಬರುತ್ತಿವೆ.

ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದ ಎರಡು ತಿಂಗಳ ಮಗುವೊಂದನ್ನು ಟರ್ಕಿಯ ಹತಾಯ್ ನಗರದ ಧ್ವಂಸಗೊಂಡ ಕಟ್ಟಡದಿಂದ ಪರಿಹಾರ ತಂಡಗಳು ಯಶಸ್ವಿಯಾಗಿ ಹೊರ ತೆಗೆಯುತ್ತಿದ್ದಂತೆ ಭಾವನಾತ್ಮಕವಾಗಿ ಜನತೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. 128 ಗಂಟೆ ಕಾಲ ಈ ಮಗು ಅವಶೇಷಗಳಡಿ ಬದುಕಿತ್ತು.

ನಡುಗುವ ಚಳಿಯ ನಡುವೆಯೂ ಧ್ವಂಸಗೊಂಡ ಅವಶೇಷಗಳಡಿ ಸಾವಿರಾರು ಪರಿಹಾರ ಕಾರ್ಯಕರ್ತರು ಶೋಧ ಮತ್ತು ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಿಕೋಪಕ್ಕೆ ತುತ್ತಾದ ಲಕ್ಷಾಂತರ ಮಂದಿ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಘಟನೆ ನಡೆದ ಐದು ದಿನಗಳ ಬಳಿಕ ಅವಶೇಷಗಳಡಿಯಿಂದ ಎರಡು ವರ್ಷದ ಹೆಣ್ಣುಮಗು, ಆರು ತಿಂಗಳ ಗರ್ಭಿಣಿ ಮಹಿಳೆ ಹಾಗೂ 70 ವರ್ಷದ ವೃದ್ಧೆಯನ್ನು ರಕ್ಷಿಸಲಾಗಿದೆ ಎಂದು ಟರ್ಕಿ ಮಾಧ್ಯಮಗಳು ವರದಿ ಮಾಡಿವೆ.

7.8 ತೀವ್ರತೆಯ ಈ ಭೂಕಂಪ ಈ ಶತಮಾನದ ಏಳನೇ ಭೀಕರ ದುರಂತ ಎನಿಸಿದೆ. 2003ರಲ್ಲಿ ನೆರೆಯ ಇರಾನ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಸುಮಾರು 31 ಸಾವಿರ ಮಂದಿ ಜೀವ ಕಳೆದುಕೊಂಡಿದ್ದರು.

ಟರ್ಕಿಯಲ್ಲಿ 24617 ಮಂದಿ ಬಲಿಯಾಗಿದ್ದು, ದೇಶದಲ್ಲಿ 1939ರ ಬಳಿಕ ಭೀಕರ ದುರಂತ ಎನಿಸಿದೆ. ಸಿರಿಯಾದಲ್ಲಿ 3500 ಮಂದಿ ಮೃತಪಟ್ಟಿದ್ದು, ಶುಕ್ರವಾರದ ಬಳಿಕ ಸಾವಿನ ಸಂಖ್ಯೆಯನ್ನು ಪರಿಷ್ಕರಿಸಿಲ್ಲ.

Similar News