ಭೂಮಿ ಕಂಪಿಸುವ ವೇಳೆ‌ ಟರ್ಕಿ ಆಸ್ಪತ್ರೆಯಲ್ಲಿದ್ದ ನವಜಾತ ಶಿಶುಗಳನ್ನು ನರ್ಸ್‌ಗಳು ರಕ್ಷಿಸಿದ ವೀಡಿಯೊ ವೈರಲ್

ಸಾಮಾಜಿಕ ತಾಣದಲ್ಲಿ ವ್ಯಾಪಕ ಪ್ರಶಂಸೆ

Update: 2023-02-12 12:11 GMT

ಗಾಝಿಯಾಂಟೆಪ್: 7.7 ತೀವ್ರತೆಯ ಭೂಕಂಪದ ಸಂದರ್ಭದಲ್ಲಿ ಇಬ್ಬರು ಟರ್ಕಿಯ ನರ್ಸ್‌ಗಳು ಶಿಶುಗಳನ್ನು ರಕ್ಷಿಸಲು ಹೊರಟಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್‌ ಆಗಿದೆ. ಗಾಝಿಯಾಂಟೆಪ್‌ನ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಕ್ಲಿಪ್ ದಾಖಲಾಗಿದೆ.

ನರ್ಸ್‌ಗಳನ್ನು ಡೆವ್ಲೆಟ್ ನಿಝಾಮ್ ಮತ್ತು ಗಜ್ವಲ್ ಕ್ಯಾಲಿಸ್ಕನ್ ಎಂದು ಗುರುತಿಸಲಾಗಿದೆ. ಭೂಕಂಪದ ಕಂಪನದ ಅನುಭವವಾದಾಗ ಅಲ್ಲಿಂದ ಓಡಿ ತಪ್ಪಿಸಿಕೊಳ್ಳುವ ನಿರ್ಧಾರ ಕೈಗೊಳ್ಳುವ ಬದಲು ಅವರಿಬ್ಬರು ನವಜಾತ ತೀವ್ರ ನಿಗಾ ಘಟಕದಲ್ಲಿರುವ ಶಿಶುಗಳನ್ನು ರಕ್ಷಿಸಲು ನಿರ್ಧರಿಸಿದ ವೀಡಿಯೊಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕ್ಲಿಪ್‌ನಲ್ಲಿ, ಕಟ್ಟಡ ಅಲುಗಾಡಲು ಪ್ರಾರಂಭಿಸಿದ ತಕ್ಷಣ ದಾದಿಯರು ತೀವ್ರ ನಿಗಾ ಘಟಕವನ್ನು ಪ್ರವೇಶಿಸುತ್ತಾರೆ. ಇಬ್ಬರು ಬೇಬಿ ಇನ್ಕ್ಯುಬೇಟರ್‌ಗಳನ್ನು ಗಟ್ಟಿಯಾಗಿ ಹಿಡಿದಿರುವುದು ಕಂಡುಬರುತ್ತದೆ. ಅವರ ಪ್ರಯತ್ನಗಳು ಇನ್ಕ್ಯುಬೇಟರ್‌ಗಳು ಮುಗ್ಗರಿಸುವುದನ್ನು ತಡೆದಿದೆ. ಈ ಮೂಲಕ ಅವರು ಆಗ ತಾನೆ ಹುಟ್ಟಿದ್ದ ಮಕ್ಕಳನ್ನು ರಕ್ಷಿಸಿದ್ದಾರೆ

ಈ ವಿಡಿಯೋವನ್ನು ಟರ್ಕಿಯ ರಾಜಕಾರಣಿ ಫಾತ್ಮಾ ಸಾಹಿನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ

ಸೋಮವಾರದ 7.8 ತೀವ್ರತೆಯ ಭೂಕಂಪವು, ಟರ್ಕಿ ಮತ್ತು ಸಿರಿಯಾದಾದ್ಯಂತ ಹಲವಾರು ಜನರನ್ನು ಮತ್ತು ಆಸ್ತಿಗಳನ್ನು ಬಲಿ ತೆಗೆದುಕೊಂಡಿತು. ಇದು ಈ ಶತಮಾನದ ವಿಶ್ವದ ಏಳನೇ ಮಾರಣಾಂತಿಕ ನೈಸರ್ಗಿಕ ವಿಕೋಪವಾಗಿದೆ.

Similar News