ಕುವೈತ್‍ನಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿ ನಾಪತ್ತೆ
ಬೆಂಗಳೂರು: ಕುವೈತ್ ದೇಶದಿಂದ ಬೆಂಗಳೂರಿಗೆ ಆಗಮಿಸಿ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ಮಾಡಲು ಯಾತ್ರೆ ಕೈಗೊಂಡಿದ್ದ ವ್ಯಕ್ತಿಯೊರ್ವ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ ನಸ್ರೀನ್ ತಾಜ್ ಅವರ ಪತಿ ನೂರ್ ಮುಹಮ್ಮದ್ ಶೇಖ್ ನಾಪತ್ತೆಯಾಗಿದ್ದು, ಈ ಸಂಬಂಧ ಗೋವಾದ ಕಲಂಗುಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಮಾತನಾಡಿದ ನಸ್ರೀನ್ ತಾಜ್, 19 ವರ್ಷಗಳಿಂದ ಪತಿ ನೂರ್ ಮುಹಮ್ಮದ್ ಶೇಖ್ ಅವರೊಂದಿಗೆ ಜೀವನ ಸಾಗಿಸುತ್ತಿದ್ದು, ಹಲವು ವರ್ಷಗಳಿಂದ ಕುವೈತ್ ನಗರದಲ್ಲಿ ನಾವು ವಾಸವಾಗಿದ್ದೇವೆ ಎಂದು ತಿಳಿಸಿದರು.
ಜನವರಿಯಲ್ಲಿ ಪತಿ ನೂರ್ ಮುಹಮ್ಮದ್ ಶೇಖ್ ಅವರು ಭಾರತಕ್ಕೆ ವಾಪಸ್ಸಾಗಿ ಗಣರಾಜ್ಯೋತ್ಸವ ಅಂಗವಾಗಿ ಸ್ಕೂಟರ್ ನಲ್ಲಿ ಯಾತ್ರೆ ಕೈಗೊಳ್ಳುತ್ತಿದ್ದರು. ಇಲ್ಲಿನ ವಿಧಾನಸೌಧ ಮುಂಭಾಗದಿಂದ ಯಾತ್ರೆ ಆರಂಭಿಸಿ ಕಲಬುರ್ಗಿಗೆ ಹೋಗಿದ್ದರು. ಅಲ್ಲಿಂದ, ಗೋವಾ ತೆರಳಿರುವ ಮಾಹಿತಿ ಇದ್ದು, ಆದರೆ ಇದುವರೆಗೂ ಸಂಪರ್ಕ ಸಿಕ್ಕಿಲ್ಲ ಎಂದು ತಿಳಿಸಿದರು.
ಸ್ಕೂಟರ್ ನಲ್ಲಿ ರಾಷ್ಟ್ರದ ಬಾವುಟ, ಲ್ಯಾಪ್‍ಟಾಪ್, ಬಟ್ಟೆ ಸೇರಿದಂತೆ ಇನ್ನಿತರ ವಸ್ತುಗಳನ್ನು ತೆಗೆದುಕೊಂಡು ಪಯಣ ಬೆಳೆಸಿದ್ದರು. ಗೋವಾ ಪೊಲೀಸರಿಗೆ ಈಗಾಗಲೇ ಮನವಿ ಮಾಡಿ, ಹುಡುಕಾಟ ನಡೆಸಲು ಕೋರಿದ್ದೇವೆ. ಜೊತೆಗೆ ಕುಟುಂಬಸ್ಥರು ಶೋಧ ಕಾರ್ಯ ಕೈಗೊಂಡಿದ್ದು, ಪೊಲೀಸರು ತನಿಖೆಗೆ ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.