ಮ್ಯಾನ್ಮಾರ್: `ನಿಷ್ಟಾವಂತ' ನಾಗರಿಕರು ಶಸ್ತ್ರಾಸ್ತ್ರ ಹೊಂದಲು ಅವಕಾಶ

Update: 2023-02-12 18:34 GMT

ಯಾಂಗಾನ್, ಫೆ.12: ಸೇನೆಯ ಆಡಳಿತ ಇರುವ ಮ್ಯಾನ್ಮಾರ್ನಲ್ಲಿ `ಸರಕಾರಕ್ಕೆ ನಿಷ್ಟರಾಗಿರುವ' ನಾಗರಿಕರು ಪರವಾನಿಗೆ ಇರುವ ಶಸ್ತ್ರಾಸ್ತ್ರಗಳನ್ನು ಹೊಂದಿರಲು ಅವಕಾಶ ನೀಡಲಾಗಿದೆ ಎಂದು  ಗೃಹ ಸಚಿವಾಲಯದಿಂದ ಸೋರಿಕೆಯಾಗಿರುವ ಮಾಹಿತಿಯನ್ನು  ಉಲ್ಲೇಖಿಸಿ `ರಾಯ್ಟರ್ಸ್' ಹಾಗೂ ಇತರ ಮಾಧ್ಯಮಗಳು ವರದಿ ಮಾಡಿವೆ.

ಗನ್ ಲೈಸೆನ್ಸ್ ಪಡೆಯಬೇಕಿದ್ದರೆ ಕೆಲವೊಂದು ಮಾನದಂಡವನ್ನು ಸೂಚಿಸಲಾಗಿದ್ದು ಇದರಲ್ಲಿ `ಸರಕಾರಕ್ಕೆ ನಿಷ್ಟರಾಗಿರಬೇಕು' ಎಂಬ ಅಂಶ ಪ್ರಮುಖವಾಗಿದೆ. ಸರಕಾರಕ್ಕೆ ನಿಷ್ಟರಾಗಿರುವ, 18 ವರ್ಷ ಮೀರಿದ ಎಲ್ಲರೂ ಶಸ್ತ್ರಾಸ್ತ್ರ ಪರವಾನಿಗೆ ಪಡೆಯಬಹುದು ಎಂದು ಸೂಚಿಸಲಾಗಿದೆ. ದಂಗೆ-ನಿರೋಧಕ ಸಂಸ್ಥೆಗಳ ಸದಸ್ಯರು, ಅಧಿಕೃತವಾಗಿ ರೂಪುಗೊಂಡ ಹೋರಾಟ ಪಡೆಗಳು ಮತ್ತು ಮಿಲಿಟರಿಯಿಂದ ನಿವೃತ್ತರಾದವರು ಪಿಸ್ತೂಲುಗಳು, ರೈಫಲ್ಗಳು ಮತ್ತು ಮೆಷಿನ್ಗನ್ಗಳನ್ನು ಕೊಂಡೊಯ್ಯಲು ಅವಕಾಶ ನೀಡಲಾಗಿದೆ. 

ಈ ಅಂಶವು ಸೇನಾಡಳಿತದ  ಪರ ಇರುವವರನ್ನು ಸಬಲಗೊಳಿಸಲಿದೆ ಮತ್ತು ಹಿಂಸಾಚಾರ ಉಲ್ಬಣಕ್ಕೆ ಮೂಲವಾಗಲಿದೆ. ಜತೆಗೆ ಸೇನೆ ಮತ್ತು ಸಶಸ್ತ್ರ ಪ್ರತಿರೋಧ ಪಡೆಯ ಮಧ್ಯೆ ದೈನಂದಿನ ಘರ್ಷಣೆ ಉಲ್ಬಣಗೊಳ್ಳಲಿದೆ ಎಂದು ರಾಜಕೀಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

2021ರಲ್ಲಿ ಆಂಗ್ಸಾನ್ ಸೂಕಿ ನೇತೃತ್ವದ ಸರಕಾರವನ್ನು ಪದಚ್ಯುತಗೊಳಿಸಿ ಸೇನೆಯು ಅಧಿಕಾರ ವಶಪಡಿಸಿಕೊಂಡ ಬಳಿಕ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಘರ್ಷಣೆ, ಹಿಂಸಾಚಾರದಿಂದ ಸುಮಾರು 19 ಸಾವಿರ ಮಂದಿ ಮೃತಪಟ್ಟಿದ್ದಾರೆ ಮತ್ತು 70,000ಕ್ಕೂ ಅಧಿಕ ಜನರು ದೇಶ ತ್ಯಜಿಸಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. 

Similar News