×
Ad

ಬೆಂಗಳೂರು: 14ನೇ ಏರ್ ಶೋ 'ಏರೋ ಇಂಡಿಯಾ-2023'ಗೆ ಪ್ರಧಾನಿ ಮೋದಿ ಚಾಲನೆ

Update: 2023-02-13 11:03 IST

ಬೆಂಗಳೂರು, ಫೆ.13: ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾದ 14ನೆ ಆವೃತ್ತಿಗೆ ಯಲಹಂಕದ ವಾಯು ಸೇನಾ ನೆಲೆಯಲ್ಲಿ ಸೋಮವಾರ ಚಾಲನೆ ನೀಡಿದ ಪ್ರಧಾನಿ ಮೋದಿ, ‘ಏರೋ ಇಂಡಿಯಾ ವೈಮಾನಿಕ ಪ್ರದರ್ಶನವು ಭಾರತದ ಅಭಿವೃದ್ಧಿಯ ಸಂಕೇತವಾಗಿದೆ. ವಿಶ್ವದ 100 ರಾಷ್ಟ್ರಗಳು ಈ ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಂಡಿರುವುದು ಭಾರತದ ಮೇಲಿನ ವಿಶ್ವಾಸ ಎಷ್ಟು ಬೆಳೆದಿದೆ’ ಎಂದು ಗೊತ್ತಾಗುತ್ತದೆ ಎಂದು ಹೇಳಿದರು.

21ನೆ ಶತಮಾನದ ಭಾರತವು ಹೊಸ ಅವಕಾಶಗಳನ್ನು ಕಳೆದುಕೊಳ್ಳುವುದಿಲ್ಲ. ಸುಧಾರಣೆಯ ಕ್ಷೇತ್ರಗಳಲ್ಲಿ ಕ್ರಾಂತಿಯನ್ನು ತರುತ್ತಿದ್ದೇವೆ. ದಶಕಗಳ ಹಿಂದೆ ಅತಿದೊಡ್ಡ ರಕ್ಷಣಾ ಉತ್ಪನ್ನಗಳ ಆಮದು ರಾಷ್ಟ್ರವಾಗಿದ್ದ ಭಾರತವು, ಈಗ 75 ದೇಶಗಳಿಗೆ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. 2021-22ರಲ್ಲಿ ಭಾರತವು ದಾಖಲೆಯ 1.5 ಬಿಲಿಯನ್ ಡಾಲರ್‍ಗಿಂತ ಹೆಚ್ಚಿನ ಮೊತ್ತದ ರಫ್ತು ಮಾಡಿದೆ ಎಂದು ಮೋದಿ ತಿಳಿಸಿದರು.

2024-25ರ ವೇಳೆಗೆ ರಕ್ಷಣಾ ಉತ್ಪನ್ನಗಳ ರಫ್ತಿನ ಪ್ರಮಾಣವನ್ನು ಐದು ಬಿಲಿಯನ್ ಡಾಲರ್‍ಗೆ ಹೆಚ್ಚಿಸುವುದು ನಮ್ಮ ಗುರಿಯಾಗಿದೆ. ಭಾರತವು ಇಡೀ ವಿಶ್ವದ ಅತಿದೊಡ್ಡ ರಕ್ಷಣಾ ಉತ್ಪನ್ನಗಳ ಉತ್ಪಾದಕ ರಾಷ್ಟ್ರಗಳ ಸಾಲಿನಲ್ಲಿ ಸೇರಲು ವೇಗವಾಗಿ ಮುಂದುವರೆಯುತ್ತಿದೆ. ಹೂಡಿಕೆದಾರರುದೇಶದ ರಕ್ಷಣಾ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಬೇಕು ಎಂದು ನರೇಂದ್ರ ಮೋದಿ ಕರೆ ನೀಡಿದರು.

ಈ ವೈಮಾನಿಕ ಪ್ರದರ್ಶನದಲ್ಲಿ ದೇಶ, ವಿದೇಶದ 700ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ್ದಾರೆ. ಇದರಲ್ಲಿ ದೇಶದ ಎಂಎಸ್‍ಎಂಇ, ಸ್ವದೇಶಿ ನವೋದ್ಯಮಗಳು ಸೇರಿದಂತೆ ಜಾಗತಿಕವಾಗಿ ಖ್ಯಾತಿಗಳಿಸಿರುವ ದೊಡ್ಡ ದೊಡ್ಡ ಕಂಪೆನಿಗಳು ಸೇರಿವೆ. ಏರೋ ಇಂಡಿಯಾ ಜೊತೆಯಲ್ಲೆ ರಕ್ಷಣಾ ಸಚಿವರ ಸಮಾವೇಶ ಹಾಗೂ ಸಿಇಒಗಳೊಂದಿಗೆ ದುಂಡುಮೇಜಿನ ಸಭೆಯನ್ನು ಆಯೋಜಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಕರ್ನಾಟಕವು ತಂತ್ರಜ್ಞಾನ ಕ್ಷೇತ್ರದಲ್ಲಿ ಸದಾ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ಇಲ್ಲಿ ವೈಮಾನಿಕ ಪ್ರದರ್ಶನ ನಡೆಯುತ್ತಿರುವುದರಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಕರ್ನಾಟಕದ ಯುವಕರು ತಂತ್ರಜ್ಞಾನ ಕ್ಷೇತ್ರದಲ್ಲಿನ ತಮ್ಮ ಕೌಶಲ್ಯಗಳನ್ನು ರಕ್ಷಣಾ ಕ್ಷೇತ್ರದಲ್ಲಿ ಬಳಸಿ ದೇಶವನ್ನು ಮತ್ತಷ್ಟು ಸಶಕ್ತಗೊಳಿಸಲಿ ಎಂದು ಅವರು ಕರೆ ನೀಡಿದರು.

ವಿಶ್ವದ ಪ್ರಮುಖ ರಕ್ಷಣಾ ಉತ್ಪಾದನಾ ಕಂಪೆನಿಗಳಿಗೆ ಭಾರತವು ಈಗ ಕೇವಲ ಒಂದು ಮಾರುಕಟ್ಟೆಯಾಗಿ ಉಳಿದಿಲ್ಲ. ಇವತ್ತು ಭಾರತವು ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ತೇಜಸ್ ಯುದ್ಧ ವಿಮಾನ, ಐಎನ್‍ಎಸ್ ವಿಕ್ರಾಂತ್ ಮೇಕ್ ಇನ್ ಇಂಡಿಯಾದ ಸಾಮಥ್ರ್ಯದ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಆಯೋಜನೆಯೂ ನವ ಭಾರತದ ನವ ಅನುಸಂಧಾನವನ್ನು ಪ್ರದರ್ಶಿಸುತ್ತದೆ. ಈ ಹಿಂದೆ ವೈಮಾನಿಕ ಪ್ರದರ್ಶನವನ್ನು ಕೇವಲ ಒಂದು ಕಾರ್ಯಕ್ರಮದ ರೀತಿ ನೋಡಲಾಗುತ್ತಿತ್ತು. ಆದರೆ, ಇಂದು ವೈಮಾನಿಕ ಪ್ರದರ್ಶನ ಕೇವಲ ಒಂದು ಕಾರ್ಯಕ್ರಮವಾಗಿ ಉಳಿದಿಲ್ಲ. ಬದಲಾಗಿ, ಭಾರತದ ಸಾಮಥ್ರ್ಯವನ್ನು ಅನಾವರಣಗೊಳಿಸುವ ವೇದಿಕೆಯಾಗಿ ಮಾರ್ಪಟ್ಟಿದೆ ಎಂದು ನರೇಂದ್ರ ಮೋದಿ ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್, ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ, ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು.

Similar News