ವಯಸ್ಸಾದ ಜಾನುವಾರುಗಳನ್ನು ಅರಣ್ಯದಲ್ಲಿ ಬಿಡಲಾಗುತ್ತಿದೆ: ಸಿದ್ದರಾಮಯ್ಯ ಕಳವಳ
''‘ಗೋಹತ್ಯೆ ನಿಷೇಧ ಕಾಯ್ದೆ’ಯಿಂದ ರೈತರಿಗೆ ಸಂಕಷ್ಟ''
ಬೆಂಗಳೂರು, ಫೆ.14: ‘ರಾಜ್ಯ ಸರಕಾರ ಕೋಮುವಾದಿ ಉದ್ದೇಶದಿಂದ ಜಾರಿಗೊಳಿಸಿರುವ ‘ಗೋಹತ್ಯೆ ನಿಷೇಧ ಕಾಯ್ದೆ’ಯಿಂದ ರಾಜ್ಯದೆಲ್ಲೆಡೆ ರೈತರು ಬಹುದೊಡ್ಡ ಸಂಕಷ್ಟ ಎದುರಿಸುತ್ತಿದ್ದು, ವಯಸ್ಸಾದ ಜಾನುವಾರುಗಳನ್ನು ರೈತರು ತೆಗೆದುಕೊಂಡು ಹೋಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರುತ್ತಿದ್ದಾರೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆ ಇರುವುದರಿಂದ ವಯಸಾಗಿರುವ, ರೋಗ ಬಂದಿರುವ ಉಳುಮೆ ಮಾಡಲು ಸಾಧ್ಯವಾಗದ ಜಾನುವಾರುಗಳನ್ನು ಯಾರು ಖರೀದಿಸದೆ ಇರುವುದು ರೈತರಿಗೆ ತಲೆ ನೋವಾಗಿದೆ. ಈ ಕಾಯ್ದೆಯನ್ನು ಮೊದಲು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ಮೊದಲೆಲ್ಲ ರೈತರು ಉಪಯುಕ್ತವಿಲ್ಲದ ಜಾನುವಾರುಗಳನ್ನು ಸಂತೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಈಗ ಅದನ್ನು ನಿಷೇಧ ಮಾಡಲಾಗಿದೆ. ಸರಕಾರವಾದರೂ ಈ ಜಾನುವಾರುಗಳನ್ನು ಖರೀದಿ ಮಾಡುವುದಾದರೆ ಅಡ್ಡಿಯಿಲ್ಲ, ಅದನ್ನೂ ಮಾಡುತ್ತಿಲ್ಲ ಎಂದ ಅವರು, 123 ಸರಕಾರಿ, 200 ಖಾಸಗಿ ಗೋಶಾಲೆಗಳಿವೆ. ಒಂದು ಹಸು ಸಾಕಲು ದಿನಕ್ಕೆ 17 ರೂ. ನಂತೆ ಸರಕಾರ ನೀಡುತ್ತದೆ, ಕನಿಷ್ಠ ಒಂದು ಹಸುವಿಗೆ ನಿತ್ಯ 60 ರೂ. ಮೇವು ಬೇಕು. ಹೀಗಾದರೆ ಹಸುವಿಗೆ ಹೊಟ್ಟೆತುಂಬ ಮೇವು ನೀಡೋಕೆ ಸಾಧ್ಯವೇ ಎಂದು ಸರಕಾರವನ್ನು ಪ್ರಶ್ನೆ ಮಾಡಿದರು.
ಪಶುಸಂಗೋಪನಾ ಇಲಾಖೆಯ ನಿರ್ದೇಶಕರು 2019ರಲ್ಲಿ 1 ಕೋಟಿ 29 ಲಕ್ಷ ಜಾನುವಾರುಗಳಿವೆ ಎಂದಿದ್ದರು. 2022ರಲ್ಲಿ 1 ಕೋಟಿ 14 ಲಕ್ಷ ಜಾನುವಾರು ಇವೆ ಎಂದೂ ಉಲ್ಲೇಖಿಸಿದ್ದರು. ಇದು ನೋಡಿದರೆ ಬರೀ ಮೂರೇ ವರ್ಷದಲ್ಲಿ 15 ಲಕ್ಷ ಜಾನುವಾರುಗಳು ಕಾಣೆಯಾಗಿವೆ ಎಂದರೆ ಇದನ್ನು ನಂಬಬಹುದೇ ಎಂದು ಪ್ರಶ್ನೆ ಮಾಡಿದ ಅವರು, ನಾವು ಗೋಹತ್ಯೆ ನಿಷೇದ ಮಾಡಿ, ಗೋಶಾಲೆ ತೆರೆದು ಗೋಸಂಪತ್ತು ಅಭಿವೃದ್ಧಿ ಆಗಿದೆ ಎನ್ನುವ ಸರಕಾರ, ಇದಕ್ಕೆ ಏಕೆ ಉತ್ತರಿಸಲು ಮುಂದಾಗುತ್ತಿಲ್ಲ ಎಂದರು.
6 ತಿಂಗಳ ಮೊದಲು 94 ಲಕ್ಷ ಲೀಟರ್ ಹಾಲು ನಿತ್ಯ ಉತ್ಪಾದನೆ ಆಗುತ್ತಿತ್ತು, ಇಂದು ಅದು 76 ಲಕ್ಷ ಲೀಟರ್ ಗೆ ಇಳಿಕೆಯಾಗಿದೆ. ಇದರಿಂದ 6 ಕೋಟಿ 66 ಲಕ್ಷ ರೂಪಾಯಿ ನಿತ್ಯ ರೈತರಿಗೆ ನಷ್ಟವಾಗುತ್ತಿದೆ. ಗೋರಕ್ಷಣೆ ಮಾಡಿದ್ದೇವೆ ಎಂದು ಬೆನ್ನುತಟ್ಟಿಕೊಂಡವರು ಇದಕ್ಕೆ ಜವಾಬ್ದಾರರಲ್ವಾ? ಸರಕಾರದ ತಪ್ಪು ನಿರ್ಧಾರ, ಬೇಜವಾಬ್ದಾರಿತನ, ಉಡಾಫೆತನದಿಂದ ನಾಡಿನ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಟೀಕಿಸಿದರು.