×
Ad

'ವಚನ ಭ್ರಷ್ಟ ಬಿಜೆಪಿ’ ಸೋಲಿಸುವುದೇ ಹೋರಾಟದ ಗುರಿ'; ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯ ಸಮಾವೇಶದಲ್ಲಿ ಮಹತ್ವದ ನಿರ್ಧಾರ

Update: 2023-02-14 21:38 IST

ಬೆಂಗಳೂರು, ಫೆ.14: ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಶಿಫಾರಸ್ಸಿಗೆ ಮೀನಾಮೇಷ ಎಣಿಸಿ ದಿನದೂಡುತ್ತಿರುವ ವಚನ ಭ್ರಷ್ಟ ಬಿಜೆಪಿಯನ್ನು ಮುಂಬರುವ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸಿ ಬುದ್ದಿ ಕಲಿಸುವುದೇ ಹೋರಾಟದ ಗುರಿ ಎಂದು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ನಿರ್ಧರಿಸಿದೆ.

ಮಂಗಳವಾರ ಫ್ರೀಡಂಪಾರ್ಕ್‍ನಲ್ಲಿ ಸತತ 65 ದಿನಗಳ ಧರಣಿಯ ಬಳಿಕ ಮಾದಿಗ, ಛಲವಾದಿ, ತ್ರಿಮತಸ್ಥ ಚರ್ಮಕಾರರು, ಅಲೆಮಾರಿ ಸೇರಿದಂತೆ 94 ಸಮುದಾಯಗಳ ಒಕ್ಕೂಟದಲ್ಲಿ ಸಮಾವೇಶ ನಡೆಸಿ ಪ್ರತಿಭಟನಾಕಾರರು, ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದಾರೆ. ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೂಡಲೇ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು ಮತ್ತು ಕೇಂದ್ರ ಸರಕಾರವು ಅನುಚ್ಛೇದ 341(3)ಕ್ಕೆ ಕೂಡಲೇ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಹಿಂದುಳಿದ ವರ್ಗಗಳ ಕಾಂತರಾಜ ವರದಿಯನ್ನು ಬಹಿರಂಗ ಮಾಡಿ ಯತಾವತ್ತಾಗಿ ಜಾರಿ ಮಾಡಬೇಕು. ಎಲ್ಲ ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಗಳಲ್ಲಿ ಬಹುಸಂಖ್ಯಾತ ರಾಗಿರುವ ಮಾದಿಗ ಮತ್ತು ಛಲವಾದಿಗಳ ಜನಸಂಖ್ಯೆಗೆ ತಕ್ಕಂತೆ ತಲಾ 15 ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು. ಕರ್ನಾಟಕ ರಾಜ್ಯದಲ್ಲಿರುವ 43ಸಾವಿರ ಪೌರ ಕಾರ್ಮಿಕರು ಮತ್ತು ವಾಹನ ಚಾಲಕರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ನ್ಯಾ.ಎ.ಜೆ.ಸದಾಶಿವ ಆಯೋಗದ ಪರ ಹೋರಾಟಗಾರರ ಮೇಲೆ ಹೂಡಿದ ರೌಡಿಶೀಟರ್ ಪ್ರಕರಣಗಳನ್ನು ರದ್ದುಪಡಿಸಬೇಕು. ಮತ್ತು ದಲಿತ ಸಂಘಟಕರ ಮೇಲೆ ದಾಖಲಾದ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ರದ್ದುಪಡಿಸಬೇಕು. ಪರಿಶಿಷ್ಟ ಜಾತಿಗಳ ಉಪ ಹಂಚಿಕೆ ಅನುದಾನವನ್ನು ಒಳಮೀಸಲಾತಿ 6+5+1+3 ಸೂತ್ರದಂತೆ ಹಂಚಿಕೆ ಮಾಡಬೇಕು. ಸರಕಾರ ಬಜೆಟ್ ಅಧಿವೇಶನ ಮುಗಿಯುವುದರೊಳಗೆ ಇವೆಲ್ಲವುಗಳನ್ನು ಈಡೇರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ದಲಿತ ಸಮುದಾಯಗಳು ಬಿಜೆಪಿ ಸೋಲಿಸಲು ಪಣ ತೊಡಲು ನಿರ್ಧರಿಸಿವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

Similar News