×
Ad

ಫೆ.16ರಂದು ರೈತ-ಕಾರ್ಮಿಕರಿಂದ ‘ಬೆಂಗಳೂರು ಚಲೋ’

Update: 2023-02-14 23:37 IST

ಬೆಂಗಳೂರು, ಫೆ.14: ಕೇಂದ್ರ ಸರಕಾರದ ಬಜೆಟ್‍ನಲ್ಲಿ ಕೃಷಿ ಹಾಗೂ ಮನರೇಗಾ ಅನುದಾನ ಕಡಿತ ಮಾಡಿರುವುದನ್ನು ಖಂಡಿಸಿ ಹಾಗೂ ರೈತ, ಕಾರ್ಮಿಕ ಹಾಗೂ ಜನವಿರೋಧಿ ಕಾಯ್ದೆಗಳನ್ನು ಕೂಡಲೇ ರದ್ದು ಮಾಡಬೇಕೆಂದು ಆಗ್ರಹಿಸಿ ಫೆ.16ರಂದು ‘ಬೆಂಗಳೂರು ಚಲೋ’ ಜನಾಗ್ರಹ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ವೇದಿಕೆ ತಿಳಿಸಿದೆ.

ಮಂಗಳವಾರ ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ, ಪ್ರಧಾನಿ ಮೋದಿ ನೇತೃತ್ವದ ಆಡಳಿತದಲ್ಲಿ ಬಡವರ ಬದುಕು ಮತ್ತಷ್ಟು ದುಸ್ತರವಾಗುತ್ತಿದೆ. ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳು ದೇಶಕ್ಕೆ ಶಾಪವಾಗಿ ಪರಿಣಮಿಸಿದ್ದು, ದೇಶದ ಜನ ಸಾಮಾನ್ಯರ ಉಳಿವಿಗಾಗಿ ಜನಾಗ್ರಹ ರ್ಯಾಲಿಯನ್ನು ನಡೆಸಲಾಗುವುದು ಎಂದರು.

ಬಿಜೆಪಿ ಸರಕಾರ ಎಪಿಎಂಸಿ ಕಾಯ್ದೆಯನ್ನು ದುರ್ಬಲಗೊಳಿಸಿ, ಕೃಷಿ ಬೆಲೆ ಆಯೋಗದ ವರದಿಯನ್ನು ಮೂಲೆಗೆ ಎಸೆಯಲಾಗಿದೆ. ಕನಿಷ್ಟ ಬೆಂಬಲ ಬೆಲೆಯೂ ಅನ್ನದಾತರಿಗೆ ಸಿಗದಂತೆ ಮಾಡಿ, ಸಾಲದ ಶೂಲಕ್ಕೆ ಸಿಲುಕಿರುವ ರೈತರನ್ನು ಮತ್ತಷ್ಟು ಸಂಕಟಕ್ಕೆ ನೂಕುತ್ತಿದೆ. ರೈತರು ತಮ್ಮ ಶ್ರಮದ ಪಾಲನ್ನು ಪಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರವನ್ನು ಆಗ್ರಹಿಸಲು ರಾಜ್ಯದ ಎಲ್ಲ ಭಾಗಗಳಿಂದ ಫೆ.16ರಂದು ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಅವರು ತಿಳಿಸಿದರು.

ಹಕ್ಕೋತ್ತಾಯಗಳು: ಶಿಕ್ಷಣದ ಖಾಸಗಿಕರಣ ನಿಲ್ಲಿಸಿ ಸಮಾನ ಶಿಕ್ಷಣ ಜಾರಿ ಮಾಡಬೇಕು. ಕೃಷಿ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುವಂತೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ 2.5ಲಕ್ಷ ಉದ್ಯೋಗಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಬೇಕು. ಬಡವರಿಗೆ ಭೂಮಿ ಮತ್ತು ವಸತಿ ಹಕ್ಕು ದೊರೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ವಾತಾವರಣ ನಿರ್ಮಿಸುವ ಸಲುವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು.

Similar News