ನಾಟಕದಲ್ಲಿ ಅಂಬೇಡ್ಕರ್ ಗೆ ಅವಮಾನ | ಜೈನ್ ವಿವಿ ರದ್ದುಪಡಿಸಲು ಪರಿಶೀಲಿಸಿ ಕ್ರಮ: ಸಚಿವ ಮಾಧುಸ್ವಾಮಿ
ಬೆಂಗಳೂರು, ಫೆ. 15: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ ಈ ಪ್ರಕರಣ ಸಂಬಂಧ ಕೆಲವರನ್ನು ಬಂಧಿಸಿದ್ದು, ಜೈನ್ ವಿವಿ ಮಾನ್ಯತೆ ರದ್ದುಪಡಿಸುವ ಸಂಬಂಧ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಮಾಧುಸ್ವಾಮಿ ಭರವಸೆ ನೀಡಿದ್ದಾರೆ.
ಬುಧವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಡಾ.ಅಂಬೇಡ್ಕರ್‍ಗೆ ಜೈನ್ ವಿಶ್ವ ವಿದ್ಯಾಲಯದಲ್ಲಿ ಅಪಮಾನ ಮಾಡಿರುವ ಘಟನೆ ಪ್ರತಿಧ್ವನಿಸಿತು. ಜೆಡಿಎಸ್ ಸದಸ್ಯ ಕೆ.ಅನ್ನದಾನಿ ವಿಷಯ ಪ್ರಸ್ತಾಪಿಸಿ, ‘ಜೈನ್ ವಿವಿ ಸ್ವಾಯತ್ತ (ಡೀಮ್ಡ್) ವಿವಿಯಾಗಿದ್ದು, ಆಡಳಿತ ಮಂಡಳಿ ಗಮನಕ್ಕೆ ಬಾರದೆ ಇಂತಹ ಘಟನೆ ನಡೆಯಲು ಸಾಧ್ಯವಿಲ್ಲ. ಉದ್ದೇಶಪೂರ್ವಕವಾಗಿಯೇ ಅವಮಾನ ಮಾಡಲಾಗಿದೆ’ ಎಂದು ದೂರಿದರು.
ಕೋಳಿಗೂಡಿನಂತಿರುವ ಜೈನ್ ವಿವಿಗೆ ಸ್ವಾಯತ್ತ ಸ್ಥಾನ ನೀಡಿದ್ದು ಯಾರು? ಸರಿಯಾಗಿ ಶಿಕ್ಷಣ ನೀಡುವ ಯೋಗ್ಯತೆ ಇಲ್ಲದ ಇಂತಹವರು ಸಂವಿಧಾನ ಶಿಲ್ಪಿ, ವಿಶ್ವ ನಾಯಕ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವುದು ಅಕ್ಷಮ್ಯ. ಈ ವಿಶ್ವ ವಿದ್ಯಾಲಯದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅನ್ನದಾನಿ ಏರಿದ ಧ್ವನಿಯಲ್ಲಿ ಆಗ್ರಹಿಸಿದರು.
ಬಳಿಕ ಸರಕಾರದ ಪರವಾಗಿ ಪ್ರತಿಕ್ರಿಯಿಸಿದ ಕಾನೂನು ಸಚಿವ ಮಾಧುಸ್ವಾಮಿ, ‘ಕೆಲವು ವಿದ್ಯಾರ್ಥಿಗಳು ಸಮಾರಂಭವೊಂದರಲ್ಲಿ ಡಾ.ಅಂಬೇಡ್ಕರ್ ಅವರನ್ನು ಅವಹೇಳನ ಮಾಡುವ ರೀತಿ ಕಿರು ನಾಟಕ ಮಾಡಿದ್ದಾರೆಂಬುದು ನೋಟಿಸ್‍ನಲ್ಲಿದೆ. ಅಂಬೇಡ್ಕರ್‍ಗೆ ಅವಮಾನ ಮಾಡುವುದನ್ನು ಯಾವುದೇ ಸಂದರ್ಭದಲ್ಲಿಯೂ ಸಹಿಸುವುದಿಲ್ಲ. ಈ ಬಗ್ಗೆ ಸಚಿವರ ಗಮನಕ್ಕೆ ತಂದು ಸೂಕ್ತ ಉತ್ತರ ಕೊಡಿಸಲಾಗುವುದು’ ಎಂದು ಸದನಕ್ಕೆ ಭರವಸೆ ನೀಡಿದರು.
ಸರಕಾರದ ಉತ್ತರಕ್ಕೆ ಆಕ್ಷೇಪಿಸಿದ ಅನ್ನದಾನಿ, ಜೈನ್ ವಿಶ್ವ ವಿದ್ಯಾಲಯಕ್ಕೆ ನೀಡಿರುವ ಅನುಮತಿ ರದ್ದುಪಡಿಸಬೇಕು. ವಿವಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕೈಗೊಳ್ಳಬೇಕೆಂದು ಆಗ್ರಹಿಸಿ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದರು. ಬಳಿಕ ಅನ್ನದಾನ ಸಮಾಧಾನಪಡಿಸಿದ ಸ್ಪೀಕರ್ ಕಾಗೇರಿ, ಧರಣಿ ಹಿಂಪಡೆದರು.
ಅನಂತರ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ‘ಈಗಾಗಲೇ ಸರಕಾರ ಕೆಲವರನ್ನು ಬಂಧಿಸಿದೆ. ಸಂವಿಧಾನ ಶಿಲ್ಪಿಗೆ ಅಪಮಾನ ಮಾಡುವುದನ್ನು ಸರಕಾರ ಸಹಿಸುವುದಿಲ್ಲ. ಈ ಘಟನೆಯಲ್ಲಿ ವಿಶ್ವ ವಿದ್ಯಾಲಯದ ಪಾತ್ರವಿದ್ದರೆ ತನಿಖೆ ನಡೆಸಿ, ವರದಿ ಪಡೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.