ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸಂಚು ಪ್ರಕರಣ: ಇಬ್ಬರ ಬಂಧನ
ಬೆಂಗಳೂರು, ಫೆ.15: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸಂಚು ನಡೆಸಿರುವ ಆರೋಪದಡಿ ಇಬ್ಬರನ್ನು ಬಂಧಿಸಿರುವ ಬೊಮ್ಮನಹಳ್ಳಿ ಠಾಣೆ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಆಪ್ತ ಸಹಾಯಕ ನೀಡಿದ ದೂರಿನನ್ವಯ ಎನ್‍ಸಿಆರ್ ದಾಖಲಿಸಿದ್ದ ಪೊಲೀಸರು, ಬಳಿಕ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಿ, ಬುಧವಾರ ಇಬ್ಬರನ್ನು ಬಂಧಿಸಿದ್ದಾರೆ.
ಇನ್ನೂ, ಫೆ.3ರಂದು ಶಾಸಕರ ಸಂಬಂಧಿಗೆ ಕರೆ ಮಾಡಿದ್ದ ಬೊಮ್ಮನಹಳ್ಳಿಯ ಚಂದ್ರು ಎಂಬಾತ, ಸತೀಶ್ ರೆಡ್ಡಿ ಹತ್ಯೆಗೆ ಸಂಚು ನಡೆದಿದ್ದು, ಚಿತ್ರದುರ್ಗದ ಹೊಳಲ್ಕೆರೆಯ ಆಕಾಶ್ ಎಂಬಾತ ತನಗೆ ತಿಳಿಸಿದ್ದಾನೆ. ಶಾಸಕರ ಹತ್ಯೆಗೆ 2 ಕೋಟಿ ಸುಪಾರಿ ಪಡೆಯಲಾಗಿದೆ ಎಂದೂ ಉಲ್ಲೇಖಿಸಿದ್ದಾನೆ ಎಂದು ತಿಳಿಸಿದ್ದ ಎನ್ನಲಾಗಿದೆ.
ಈ ಸಂಬಂಧ ಸತೀಶ್ ರೆಡ್ಡಿಯ ಆಪ್ತ ಸಹಾಯಕ ಹರೀಶ್ ಬಾಬು ನೀಡಿದ ದೂರಿನ್ವಯ ಕಳೆದ ಹದಿನೈದು ದಿನದಿಂದ ಶಾಸಕರ ಮನೆಯ ಬಳಿ ಅನುಮಾನಸ್ಪದ ವ್ಯಕ್ತಿಗಳು ಓಡಾಡುತ್ತಿದ್ದ ಆರೋಪದಡಿ ಇಬ್ಬರನ್ನು ಬಂಧಿಸಲಾಗಿದೆ. ಇನ್ನೂ, ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಸುಪಾರಿ ಪಡೆದಿರುವ ಆರೋಪವೂ ಕೇಳಿಬಂದಿದೆ.
ಸುಪಾರಿ ಹಿಂದೆ ರಾಜಕೀಯ: ಸತೀಶ್ ರೆಡ್ಡಿ
ಸುಪಾರಿ ಹಿಂದೆ ರಾಜಕೀಯ ದುರುದ್ದೇಶವೇ ಇದೆ. ಸುಪಾರಿ ಬಗ್ಗೆ ಮಾತಾಡಿರುವವರ ಆಡಿಯೊ ಪೊಲೀಸರಿಗೆ ಸಿಕ್ಕಿದೆ. ಅಲ್ಲದೇ, ನಾನು ಯಾರ ಮೇಲೆಯೂ ಆರೋಪ ಮಾಡುವುದಿಲ್ಲ. ಪಾರದರ್ಶಕ ತನಿಖೆ ಆಗಲಿ ಎಂದು ಎಂದು ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹೇಳಿದರು.
► "ಭದ್ರತೆ ಕೊಡುತ್ತೇವೆ'
'ನಮ್ಮ ಶಾಸಕರಿಗೆ ಯಾವುದೇ ಬೆದರಿಕೆ ಇದ್ದರೂ ಸಹ ಅವರಿಗೆ ರಕ್ಷಣೆ ಕೊಡುವ ಕೆಲಸವನ್ನು ನಮ್ಮ ಪೊಲೀಸರು ಮಾಡುತ್ತಾರೆ. ನಾನು ಈಗಾಗಲೇ ನಮ್ಮ ಹಿರಿಯ ಅಧಿಕಾರಿಗಳ ಜೊತೆ ಮಾತಾಡಿದ್ದೇನೆ. ಅವರಿಗೆ ಭದ್ರತೆ ಕೊಡುತ್ತಾರೆ'
-ಆರಗ ಜ್ಞಾನೇಂದ್ರ, ಗೃಹ ಸಚಿವ