ಬಿಜೆಪಿಯವರಿಗೆ ಅನುಕೂಲವಿದ್ದಾಗ ಮಾತ್ರ ಬಿಬಿಸಿಯನ್ನು ಕೊಂಡಾಡುತ್ತಾರೆ: ಉವೈಸಿ ವಾಗ್ದಾಳಿ

Update: 2023-02-16 06:38 GMT

ಹೈದರಾಬಾದ್: ಬಿಬಿಸಿ ಮೇಲಿನ ಐಟಿ ದಾಳಿ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಉವೈಸಿ, 1975-77ರ ನಡುವೆ ತುರ್ತುಪರಿಸ್ಥಿತಿ ಜಾರಿಗೊಳಿಸಿದಾಗ ಇದೇ ಬಿಜೆಪಿ ನಾಯಕರು ವಿದೇಶಿ ಮಾಧ್ಯಮ ಸಂಸ್ಥೆಯಾದ ಬಿಬಿಸಿಯನ್ನು ಕೊಂಡಾಡಿದ್ದರು ಎಂದು ಕಿಡಿ ಕಾರಿದ್ದಾರೆ ಎಂದು siasat.com ವರದಿ ಮಾಡಿದೆ.

ಭಾರತೀಯ ಸಂಪಾದಕರ ಒಕ್ಕೂಟ ಬಿಡುಗಡೆ ಮಾಡಿರುವ ಖಂಡನಾ ನಿರ್ಣಯವನ್ನು ಸಮರ್ಥಿಸಿರುವ ಅವರು, ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಗೆ ಪತ್ರಿಕಾ ಸ್ವಾತಂತ್ರ್ಯ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ.

ಬಿಬಿಸಿಯು ಒತ್ತಡಕ್ಕೆ ಒಳಗಾಗುವುದಿಲ್ಲ ಹಾಗೂ ಸತ್ಯ ಹೇಳುವುದನ್ನು ಮುಂದುವರಿಸಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.

"ಈ ದಾಳಿಯ ಸಮಯ ಸಂಪೂರ್ಣವಾಗಿ ತಪ್ಪಾಗಿದ್ದು, ಅದೇ ಕಾರಣಕ್ಕೆ ಸಂಪಾದಕರ ಒಕ್ಕೂಟವು ಖಂಡನಾ ನಿರ್ಣಯ ಬಿಡುಗಡೆ ಮಾಡಿದೆ" ಎಂದು ಹೈದರಾಬಾದ್ ಸಂಸದರೂ ಆಗಿರುವ ಅಸಾದುದ್ದೀನ್ ಉವೈಸಿ ಅಭಿಪ್ರಾಯ ಪಟ್ಟಿದ್ದಾರೆ.

ಬಿಬಿಸಿ ಇಂಡಿಯಾ ಪರಿಶೀಲನೆಯನ್ನು ಬುಧವಾರ ಕೂಡಾ ಮುಂದುವರಿಸಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ಆರ್ಥಿಕ ದತ್ತಾಂಶಗಳ ವಿದ್ಯುನ್ಮಾನ ಹಾಗೂ ಕಾಗದದ ನಕಲನ್ನು ಸಂಗ್ರಹಿಸಿದರು ಎಂದು ತಿಳಿದು ಬಂದಿದೆ.

Similar News