×
Ad

ಭದ್ರಾವತಿಯ ವಿಐಎಸ್‍ಎಲ್ ಕಾರ್ಖಾನೆ ಉಳಿಸಲು ಕ್ರಮ: ಸಿಎಂ ಬೊಮ್ಮಾಯಿ

Update: 2023-02-16 19:41 IST

ಬೆಂಗಳೂರು, ಫೆ. 16: ‘ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆ ದಕ್ಷಿಣ ಭಾರತದ ಪ್ರತಿಷ್ಠಿತ ಕಾರ್ಖಾನೆ. ಈ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲು ಅವಕಾಶ ನೀಡುವುದಿಲ್ಲ. ಕಾನೂನಾತ್ಮಕ ಕ್ರಮ ವಹಿಸಿ ಕಾರ್ಖಾನೆ ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಸಂಗಮೇಶ್ ಪ್ರಸ್ತಾಪಕ್ಕೆ ಉತ್ತರ ನೀಡಿದ ಅವರು, ‘ವಿಐಎಸ್‍ಎಲ್‍ನಲ್ಲಿ ಉತ್ಪಾದನೆಯಾಗುವ ಉಕ್ಕು ಉತ್ಕೃಷ್ಟ. ಇದಕ್ಕೆ ಮುಖ್ಯವಾದ ಕಾರಣ ಅದಿರು.  ಕುದುರೆಮುಖದ ಅದಿರಿನಿಂದ ಇಲ್ಲಿ ಕಬ್ಬಿಣ ತಯಾರು ಮಾಡಲಾಗುತ್ತಿತ್ತು. ವಿಐಎಸ್‍ಎಲ್ ಕಾರ್ಖಾನೆಯ ಹಿನ್ನೆಡೆ ವಿವರಗಳ ಅಗತ್ಯವಿಲ್ಲ. ಈ ಕಾರ್ಖಾನೆ ಮೊದಲು ರಾಜ್ಯ ಸರಕಾರದ ಅಧೀನದಲ್ಲಿದ್ದು, 1989ರಲ್ಲಿ ಸದರಿ ಕಾರ್ಖಾನೆಯನ್ನು ಕೇಂದ್ರಕ್ಕೆ ಹಸ್ತಾಂತರಿಸಲಾಯಿತು’ ಎಂದು ಹೇಳಿದರು.

ಕಾರ್ಖಾನೆ ದಕ್ಷಿಣ ಭಾರತದಲ್ಲಿ ಇರುವ ಹಳೆಯ ಉಕ್ಕಿನ ಕಾರ್ಖಾನೆ. ಅಲ್ಲಿ ಉತ್ಕೃಷ್ಟ ಗುಣಮಟ್ಟದ ಉಕ್ಕು   ತಯಾರಾಗುತ್ತಿತ್ತು. ಈ ಹಿಂದೆ ರಾಜ್ಯ ಸರಕಾರ ಸದರಿ ಕಾರ್ಖಾನೆ ಮುಂದುವರೆಸಲು ಸಾಧ್ಯವಿಲ್ಲವೆಂದು ಖಾಸಗಿಯವರಿಗೆ ನೀಡಲಾಯಿತು, ಖಾಸಗಿಯವರು ಕಾರ್ಖಾನೆ ಮಾರಾಟಕ್ಕೆ ಇಟ್ಟಿದ್ದಾರೆ. ನಾನು ಈಗಾಗಲೇ ಮಂತ್ರಿಗಳ ಜೊತೆ ಈ ವಿಷಯದ ಕುರಿತು ಚರ್ಚಿಸಿದ್ದೇನೆ. ಸೇಲ್ ಬೋರ್ಡ್ ಮೀಟಿಂಗ್  ಸದರಿ ಕಾರ್ಖಾನೆಯನ್ನು ಮುಚ್ಚಬೇಕು ಎಂದು ಅಭಿಪ್ರಾಯಿಸಿದೆ.

ಮೊದಲು ಕಾರ್ಖಾನೆಯನ್ನು ಮುಚ್ಚುವ ಅಥವಾ ಮಾರಾಟದ ಬಗ್ಗೆ ತಡೆಯಾಜ್ಞೆ ತಂದರೆ ಆತಂಕ ತಪ್ಪುತ್ತದೆ. ಕಾರ್ಖಾನೆಯನ್ನು ನಡೆಸಲು ಮೊದಲು ಎಕ್ಸ್ ಪ್ರೆಷನ್ ಆಫ್ ಇಂಟ್ರೆಸ್ಟ್ ಕಾಲ್ ಮಾಡಿ ಕಾರ್ಖಾನೆ ಮುಚ್ಚದಂತೆ ಸರಕಾರ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಚರ್ಚಿಸಲಾಗುವುದು. ಅಲ್ಲದೆ, ಯಾವುದೇ ಕಾರಣಕ್ಕೂ ಕಾರ್ಖಾನೆಯನ್ನು ಮುಚ್ಚುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಅಲ್ಲಿನ ನೌಕರರುಗಳಿಗೂ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಅವರು ವಿವರಣೆ ನೀಡಿದರು.

Similar News