ಚೆಂಬು ಬಿಟ್ಟು ಚಿಪ್ಪು ಕೂಡ ಇಲ್ಲ, ಜನಸಾಮಾನ್ಯರ ಕಿವಿಗೆ ಹೂ ಮುಡಿಸೋ ಬಜೆಟ್: ಯು.ಟಿ ಖಾದರ್ ವ್ಯಂಗ್ಯ
Update: 2023-02-17 15:13 IST
ಬೆಂಗಳೂರು: 'ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಜಾತ್ರೆಯಲ್ಲಿ ಜನಾಕರ್ಷಣೆಗೆ ನಾಸಿಕ್ ಬ್ಯಾಂಡ್ ಹೊಡೆಯುವಂಥ ಬಜೆಟ್ ಮಂಡನೆ ಮಾಡಿದ್ದಾರೆ' ಎಂದು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಯು.ಟಿ ಖಾದರ್ ವ್ಯಂಗ್ಯವಾಡಿದ್ದಾರೆ.
ಶುಕ್ರವಾರ ವಿಧಾನಸೌಧ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಈ ಬಜೆಟ್ ನಿಂದ ಬರೀ ಶಬ್ಧ ಅಲ್ಲದೇ ಬೇರೆ ಯಾವುದೇ ಪ್ರಯೋಜನ ಜನ ಸಾಮಾನ್ಯರಿಗೆ ಇಲ್ಲ. ಈ ರಾಜ್ಯದ ಜನರಿಗೆ ಚೆಂಬು ಕೊಡುತ್ತಾರೆಂದು ಭಾವಿಸಿದರೆ, ಈಗ ಚೆಂಬು ಬಿಟ್ಟು ಚಿಪ್ಪು ಕೂಡ ಇಲ್ಲ' ಎಂದು ಟೀಕಿಸಿದರು.
'ಕಳೆದ ಬಜೆಟ್ನಲ್ಲಿ 206 ಕಾರ್ಯಕ್ರಮ ಘೋಷಣೆ ಮಾಡಿದ್ದರು. ಅದರಲ್ಲಿ ಹಲವು ಕಾರ್ಯಕ್ರಮ ಜಾರಿ ಮಾಡಿಲ್ಲ. ಚುನಾವಣೆ ವೇಳೆ ಘೋಷಿಸಿದ್ದ ಶೇ.92ರಷ್ಟು ಅಶ್ವಾಸನೆ ಈಡೇರಿಸಿಲ್ಲ. ಇದೊಂದು ನಿರಾಶಾದಾಯಕ ಬಜೆಟ್ ಆಗಿದ್ದು, ಜನಸಾಮಾನ್ಯರ ಕಿವಿಗೆ ಹೂ ಮುಡಿಸೋ ಬಜೆಟ್' ಎಂದು ಹೇಳಿದರು.