ವಾಣಿಜ್ಯ ಮತ್ತು ತೆರಿಗೆ ಇಲಾಖೆಗೆ 92 ಸಾವಿರ ಕೋಟಿ ರೂ. ಸಂಗ್ರಹಣೆಯ ಗುರಿ ನಿಗದಿ: ಸಿಎಂ ಬೊಮ್ಮಾಯಿ
ಬೆಂಗಳೂರು, ಫೆ.17: 2023-24ನೆ ಸಾಲಿಗೆ ವಾಣಿಜ್ಯ ತೆರಿಗೆಗಳ ಇಲಾಖೆಗೆ 92 ಸಾವಿರ ಕೋಟಿ ರೂ.ಗಳ (ಜಿ.ಎಸ್.ಟಿ ಪರಿಹಾರ ಹೊರತುಪಡಿಸಿ)ತೆರಿಗೆ ಸಂಗ್ರಹಣೆಯ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಮಾಡಿದ ಅವರು, ‘ಕಡಿಮೆ ವರಮಾನದ ವರ್ಗಕ್ಕೆ ಪರಿಹಾರ ನೀಡಲು ಸಂಬಳ ಅಥವಾ ಮಜೂರಿಯನ್ನು ಪಡೆವ ನೌಕರರಿಗೆ ತೆರಿಗೆ ವಿನಾಯಿತಿ ಮಿತಿಯನ್ನು ಮಾಸಿಕ 15 ಸಾವಿರ ರೂ.ಗಳಿಂದ 25ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗುವುದು ಎಂದು ಹೇಳಿದರು.
ಜಿ.ಎಸ್.ಟಿ. ಪೂರ್ವ ತೆರಿಗೆ ವಿವಾದಗಳನ್ನು ತ್ವರಿತಗತಿಯಲ್ಲಿ ಪರಿಹರಿಸುವ ಸಲುವಾಗಿ ಮತ್ತು ತೆರಿಗೆ ಬಾಕಿಗಳನ್ನು ಯಾವುದೇ ದಾವೆಯಿಲ್ಲದೆ ಕ್ಷಿಪ್ರವಾಗಿ ಸಂಗ್ರಹಿಸುವುದಕ್ಕಾಗಿ, ಕರಸಮಾಧಾನ ಯೋಜನೆಯಡಿ ಎಲ್ಲ ಜಿ.ಎಸ್.ಟಿ-ಪೂರ್ವ ಅಧಿನಿಯಮಗಳ ಅಡಿಯಲ್ಲಿ ಬಾಕಿಯಿರುವ ಪೂರ್ಣ ತೆರಿಗೆಯನ್ನು 2023ರ ಅ.30ರೊಳಗೆ ಪಾವತಿಸುವವರಿಗೆ ಬಡ್ಡಿ ಮತ್ತು ದಂಡಬಡ್ಡಿ ಪಾವತಿಯಲ್ಲಿ ಪರಿಹಾರ.
2022-23ನೆ ಸಾಲಿಗೆ ವಾಣಿಜ್ಯ ತೆರಿಗೆ ಇಲಾಖೆಗೆ ಆಯವ್ಯಯದಲ್ಲಿ, ಜಿ.ಎಸ್.ಟಿ ಪರಿಹಾರ ಹೊರತುಪಡಿಸಿ, 72,010 ಕೋಟಿ ರೂ.ಗಳ ಗುರಿ ನೀಡಲಾಗಿದ್ದು, ವರ್ಷಾಂತ್ಯಕ್ಕೆ 83,010 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಮಾಡಲಾಗುವುದು. ಇದು ಆಯವ್ಯಯ ಅಂದಾಜಿಗಿಂತ ಶೇ.15ರಷ್ಟು ಹೆಚ್ಚಾಗಿದೆ.
ರಾಜ್ಯಕ್ಕೆ ಜಿ.ಎಸ್.ಟಿ ಪರಿಹಾರವಾಗಿ 10,548 ಕೋಟಿ ರೂ. ಸ್ವೀಕೃತವಾಗಿದ್ದು, ಜಿ.ಎಸ್.ಟಿ. ಪರಿಹಾರ ಒಳಗೊಂಡಂತೆ ವರ್ಷಾಂತ್ಯಕ್ಕೆ ಒಟ್ಟು ವಾಣಿಜ್ಯ ತೆರಿಗೆ ಸಂಗ್ರಹಣೆಯು 93,558 ಕೋಟಿ ರೂ.ಗಳಾಗುತ್ತದೆ.
ರಾಜಸ್ವ ಸಂಗ್ರಹಣೆ ಗುರಿ: 2023-24ನೆ ಸಾಲಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 19 ಸಾವಿರ ಕೋಟಿ ರೂ., ಅಬಕಾರಿ ಇಲಾಖೆಗೆ 35 ಸಾವಿರ ಕೋಟಿ ರೂ., ಸಾರಿಗೆ ಇಲಾಖೆಗೆ 10,500 ಕೋಟಿ ರೂ., ಗಣಿ ಮತ್ತು ಭೂ ವಿಜ್ಞಾನಗಳ ಇಲಾಖೆಗೆ 7,500 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ.
ಆಯವ್ಯಯ ಅಂದಾಜು 2023-24: 2023-24ನೆ ಸಾಲಿನಲ್ಲಿ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವವು 1,64,653 ಕೋಟಿ ರೂ.ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ 11 ಸಾವಿರ ಕೋಟಿ ರೂ. ಸಂಗ್ರಹಿಸಬಹುದೆಂದು ನಿರೀಕ್ಷಿಸಲಾಗಿದೆ. ಕೇಂದ್ರ ತೆರಿಗೆಯ ಪಾಲಿನ ರೂಪದಲ್ಲಿ 37,252 ಕೋಟಿ ರೂ.ಗಳನ್ನು ಹಾಗೂ 13,005 ಕೋಟಿ ರೂ. ಕೇಂದ್ರ ಸರಕಾರದಿಂದ ಸಹಾಯಾನುದಾನ ರೂಪದಲ್ಲಿ ರಾಜ್ಯ ಸರಕಾರ ನಿರೀಕ್ಷಿಸಿದೆ.
ಈ ರಾಜಸ್ವ ಜಮೆಗಳಿಗೆ ಪೂರಕವಾಗಿ 77,750 ಕೋಟಿ ರೂ.ಗಳ ಒಟ್ಟು ಸಾಲಗಳು, 23 ಕೋಟಿ ರೂ.ಗಳ ಋಣೇತರ ಸ್ವೀಕೃತಿಗಳು ಮತ್ತು 228 ಕೋಟಿ ರೂ.ಗಳ ಸಾಲಗಳ ವಸೂಲು ಮೊತ್ತವನ್ನು ಅಂದಾಜಿಸಲಾಗಿದೆ. 2023-24ನೆ ಸಾಲಿನಲ್ಲಿ ಒಟ್ಟು ಜಮೆಗಳು 3,03,910 ಕೋಟಿ ರೂ.ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ.
2,25,507 ಕೋಟಿ ರೂ.ಗಳ ರಾಜಸ್ವ ವೆಚ್ಚ, 61,234 ಕೋಟಿ ರೂ.ಗಳ ಬಂಡವಾಳ ವೆಚ್ಚ ಹಾಗೂ ಸಾಲದ ಮರುಪಾವತಿ 22,441 ಕೋಟಿ ರೂ.ಗಳ ವೆಚ್ಚವನ್ನು ಒಳಗೊಂಡು, ಒಟ್ಟು ವೆಚ್ಚವು 3,09,182 ಕೋಟಿ ರೂ.ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ.
ಕೋವಿಡ್ ಸಾಂಕ್ರಾಮಿಕದ ನಂತರ ಮೊದಲ ಬಾರಿಗೆ ರಾಜಸ್ವ ಸ್ವೀಕೃತಿಯು ರಾಜಸ್ವ ವೆಚ್ಚಕ್ಕಿಂತ 402 ಕೋಟಿ ರೂ. ಗಳ ಹೆಚ್ಚುವರಿಯನ್ನು ಅಂದಾಜು ಮಾಡಲಾಗಿದ್ದು, ಇದು ರಾಜಸ್ವ ಹೆಚ್ಚುವರಿ (Revenue Surplus) ಆಯವ್ಯಯವಾಗಿದೆ. ವಿತ್ತೀಯ ಕೊರತೆ 60,581 ಕೋಟಿ ರೂ.ಗಳಾಗುತ್ತದೆಂದು ನಿರೀಕ್ಷಿಸಲಾಗಿದ್ದು, ಅದು ಜಿಎಸ್‍ಡಿಪಿಯ ಶೇ.2.60ರಷ್ಟಾಗಿರುತ್ತದೆ. 2023-24ರ ಕೊನೆಯಲ್ಲಿ 5,64,896 ಕೋಟಿ ರೂ.ಗಳ ಒಟ್ಟು ಹೊಣೆಗಾರಿಕೆಗಳು ಜಿಎಸ್‍ಡಿಪಿಯ ಶೇ.24.20 ರಷ್ಟಾಗುತ್ತದೆಂದು ಅಂದಾಜು ಮಾಡಲಾಗಿದೆ.