ಸ್ಲಂ ಜನರನ್ನು ತಾರತಮ್ಯದಿಂದ ನೋಡುವ ಬಜೆಟ್: ಎ.ನರಸಿಂಹಮೂರ್ತಿ
ಇದು ಚುನಾವಣಾ ಪೂರಕ ಮತ್ತು ಬಡವ-ಶ್ರೀಮಂತರ ಅಂತರ ಸೃಷ್ಠಿಸುವ, ಸ್ಲಂ ಜನರನ್ನು ತಾರತಮ್ಯದಿಂದ ನೋಡುವ ಮುಂಗಡ ಪತ್ರ ಎಂದು ಸ್ಲಂ ಜನಾಂದೋಲನ ಕರ್ನಾಟಕ ಇದರ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಪ್ರತಿಕ್ರಿಯಿಸಿದ್ದಾರೆ.
ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಕೈಗೆಟುಕುವ ದರದಲ್ಲಿ ಸಾರ್ವಜನಿಕರಿಗೆ ದೊರಕಿಸಿಲ್ಲ. ಅಲ್ಲದೆ ಜಾಗತಿಕ ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸುವ ಮೂಲಕ ಕಾರ್ಪೊರೇಟ್ ವ್ಯವಸ್ಥೆಯನ್ನು ನವಕರ್ನಾಟಕಕ್ಕೆ ಪರಿಚಯಿಸಿರುವುದು ಈ ಬಜೆಟ್‍ನಲ್ಲಿ ಸ್ಪಷ್ಟವಾಗಿದೆ’ ಎಂದು ತಿಳಿಸಿದ್ದಾರೆ.
'ಎಲ್ಲರಿಗೂ ಸೂರು ಒದಗಿಸಲು ವಿಶೇಷ ಆದ್ಯತೆ ನೀಡಿ ಪ್ರಸಕ್ತ ವರ್ಷದಲ್ಲಿ 5 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು 5 ಸಾವಿರ ಕೋಟಿ ಅನುಧಾನ ನೀಡಲಾಗಿದೆ. ಎಂದು ಈ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ, ಆದರೆ ಅಧಿಕೃತ ಮಾಹಿತಿ ಪ್ರಕಾರ ವಸತಿ ಇಲಾಖೆಗೆ 3,709 ಕೋಟಿ ರೂಗಳನ್ನು ಮಾತ್ರ ಒದಗಿಸಲಾಗಿದೆ. ಸ್ಲಂ ಜನಾಂದೋಲನ ಕರ್ನಾಟಕ ಮುಖ್ಯಮಂತ್ರಿಗಳು ಮತ್ತು ವಸತಿ ಸಚಿವರಿಗೆ ಮನವಿ ನೀಡಿ ಪ್ರಸಕ್ತ ಬಜೆಟ್ ನಲ್ಲಿ ಸ್ಲಂ ಜನರ ಸಮಗ್ರ ಅಭಿವೃದ್ಧಿಗೆ 2 ಸಾವಿರ ಕೋಟಿ, ವಸತಿ ಸಬ್ಸಿಡಿಯನ್ನು 4 ಲಕ್ಷಕ್ಕೆ ಏರಿಕೆ, ಸ್ಲಂ ಜನರ ಅಭಿವೃದ್ಧಿ ನಿಗಮ, ನಿವೇಶನ ರಹಿತರಿಗೆ ನಸು ಹಕ್ಕನ್ನು ಮತ್ತು ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಸ್ಲಂ ಜನರಿಗೆ ಘೋಷಿಸುವಂತೆ ಒತ್ತಾಯಿಸಲಾಗಿತ್ತು, ವಸತಿ ಸಚಿವರೊಂದಿಗೆ ಸಮಾಲೋಚನೆ ನಡೆಸಿದಾಗ ಈ ಬಜೆಟ್‌ನಲ್ಲಿ ಮಂಡಳಿಗೆ 150 ಕೋಟಿ ಅನುದಾನ ಮತ್ತು ಸ್ಲಂ ಜನರ ವಾಸಿ ಸಬ್ಸಿಡಿಯನ್ನು 4 ಲಕ್ಷಕ್ಕೆ ಹೆಚ್ಚಿಸುವ ಭರವಸೆ ನೀಡಿದ್ದರು. ಆದರೆ ಇದು ಹುಸಿಯಾಗಿದೆ' ಎಂದು ಹೇಳಿದ್ದಾರೆ.
ಈ ಬಜೆಟ್, ಸ್ಲಂ ನಿವಾಸಿಗಳನ್ನು ಅಭಿವೃದ್ಧಿಯಿಂದ ವಂಚಿಸಿ ತಾರತಮ್ಯವನ್ನು ದ್ವಿಗುಣಗೊಳಿಸುವ ಬಜೆಟ್ ಆಗಿದೆ, ಈ ಎಲ್ಲಾ ತಾರತಮ್ಯಗಳು ಮತ್ತು ಅಸಮಾನತೆಗಳನ್ನು ಗಮನದಲ್ಲಿಟ್ಟುಕೊಂಡು ಸ್ಲಂ ನಿವಾಸಿಗಳು ಎದುರಾಗುವ ಚುನಾವಣೆಯಲ್ಲಿ ಮತ ಚಲಾಯಿಸಬೇಕಿದೆ, ಮತ್ತು ನಮ್ಮ ವಿಮೋಚನೆಗೆ ಸಂವಿಧಾನದಲ್ಲಿ ಪ್ರಾಪ್ತವಾಗಿರುವ 9ನೇ ಶೆಡ್ಯೂಲ್ ಅನ್ವಯ ಕೊಳಗೇರಿಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರಗಳು ಆಧ್ಯತೆ ನೀಡಲು ಸ್ಲಂ ನಿವಾಸಿಗಳು ಜಾಗೃತರಾಗಿ ಒತ್ತಾಯಿಸಬೇಕಿದೆ ಎಂದು ಸ್ಲಂ ಜನಾಂದೋಲನ ಕರ್ನಾಟಕ ಮನವಿ ಮಾಡಿದೆ.