ಈ ಬಜೆಟ್ ಕಣ್ಣಿಗೆ ಕಾಣುತ್ತದೆ, ಆದರೆ ಕೈಗೆ ಸಿಗಲ್ಲ: ಡಿ.ಕೆ.ಶಿವಕುಮಾರ್ ಟೀಕೆ
''ಜಾತ್ರೆಯಲ್ಲಿ ಸಿಗುವ ಬಣ್ಣದ ಕನ್ನಡಕದಂತೆ...''
ಬೆಂಗಳೂರು, ಫೆ. 17: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಇದೊಂದು ಬಿಸಿಲು ಕುದುರೆ ಬಜೆಟ್, ಕೈಗೆ ಏನೂ ಸಿಗಲ್ಲ. ಈ ಬಜೆಟ್, ಜಾತ್ರೆಯಲ್ಲಿ ಸಿಗುವ ಬಣ್ಣದ ಕನ್ನಡಕದಂತೆ, ಅದರಲ್ಲಿ ನೋಡಿದರೆ ಏನೂ ಕಾಣುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಛೇಡಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಮೊಗಸಾಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬೊಮ್ಮಾಯಿ ಸರಕಾರದ 2023-24ರ ಬಜೆಟ್‍ನಲ್ಲಿ ರೈತರು, ಕಾರ್ಮಿಕರು, ಯುವಕರು, ವರ್ತಕರು ಯಾರಿಗೂ ಲಾಭವಿಲ್ಲ. ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆಯೂ ಮಾತನಾಡಿಲ್ಲ. ಸ್ವಯಂ ಉದ್ಯೋಗ ಯೋಜನೆಗಳೂ ಇಲ್ಲ. ಹೀಗಾಗಿ ಈ ಬಜೆಟ್‍ನಿಂದ ಯಾವುದೇ ವರ್ಗಕ್ಕೂ ಪ್ರಯೋಜನ ಆಗುವುದಿಲ್ಲ ಎಂದು ಟೀಕಿಸಿದರು.
ಕಳೆದ ಬಜೆಟ್‍ನಲ್ಲಿ ಶೇ.50ರಷ್ಟು ಅನುದಾನ ಖರ್ಚು ಮಾಡಿಲ್ಲ. ಕಳೆದ ಚುನಾವಣೆ ಸಂದರ್ಭದಲ್ಲಿ ಅವರು ಕೊಟ್ಟ 600 ಭರವಸೆಗಳ ಪೈಕಿ 550 ಭರವಸೆ ಈಡೇರಿಸಿಲ್ಲ. ಆ ಮೂಲಕ ಶೇ.90ರಷ್ಟು ವಿಫಲವಾಗಿದ್ದಾರೆ. ಬಿಜೆಪಿ ಸರಕಾರ ಜನರ ಕಿವಿಗೆ ಹೂ ಇಡುವ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ನಾಯಕರು ಕಿವಿ ಮೇಲೆ ಚೆಂಡುವ್ವ ಇಟ್ಟುಕೊಂಡು ಪ್ರತಿಭಟನೆ ಮಾಡಿದ್ದೇವೆ. ಇದೊಂದು ಗೊತ್ತು ಗುರಿ ಇಲ್ಲದ ಬಜೆಟ್ ಆಗಿದೆ ಎಂದು ದೂರಿದರು.
ಮೇಕೆದಾಟು, ಮಹದಾಯಿ, ಕೃಷ್ಣ ಯೋಜನೆ ವಿಚಾರವಾಗಿ ಕಳೆದ ಬಜೆಟ್‍ನಲ್ಲಿ ಹಣ ಮೀಸಲಿಟ್ಟ ಸರಕಾರ ಒಂದು ನಯಾ ಪೈಸೆ ಖರ್ಚು ಮಾಡಿಲ್ಲ. ಮಾತೆತ್ತಿದರೆ ಡಬಲ್ ಇಂಜಿನ್ ಸರಕಾರ ಎನ್ನುತ್ತಾರೆ. ಆದರೆ, ಈ ಸರಕಾರದ ಇಂಜಿನ್ ಆಪ್ ಆಗಿದೆ. ಕೇವಲ ಹೊಗೆ ಮಾತ್ರ ಬರುತ್ತಿದೆ ಎಂದ ಅವರು, ಈಗ ರಾಮನಗರದಲ್ಲಿ ರಾಮಮಂದಿರ ಕಟ್ಟಲು ಮುಂದಾಗಿದ್ದಾರೆ. ಅವರು ರಾಮನ, ಸೀತೆ, ಅಶ್ವತ್ಥ್ ನಾರಾಯಣ, ಬೊಮ್ಮಾಯಿ, ಯಡಿಯೂರಪ್ಪನವರ ಮಂದಿರವಾದರೂ ಕಟ್ಟಲಿ. ನನಗೆ ನಮ್ಮ ಪಕ್ಷದ ಕಚೇರಿಯೇ ದೇವಾಲಯ ಎಂದು ತಿರುಗೇಟು ನೀಡಿದರು.