ರಾಜ್ಯ ಬಜೆಟ್ 2023: ದ.ಕ. ಜಿಲ್ಲೆಯಲ್ಲಿ ಯಾರು ಏನು ಹೇಳಿದರು ?

Update: 2023-02-17 16:36 GMT

"ರಾಜ್ಯ ಬಜೆಟ್ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಅದರಲ್ಲೂ ಕೃಷಿಕರು, ಮಹಿಳೆಯರು ಮತ್ತು ಯುವಕರ ಪರವಾದ ಬಜೆಟ್ ಆಗಿದೆ. 3 ಲಕ್ಷ ಕೋಟಿಗೂ ಅಧಿಕ ಮೊತ್ತದ ಬಜೆಟ್ ಮಂಡಿಸಿರುವುದು ಶ್ಲಾಘನೀಯ. ಕೃಷಿಕರ ಕನಸಿನ ಬಜೆಟ್ ಆಗಿದ್ದು, 5ಲಕ್ಷ ರೂ.ವರೆಗೆ ರೈತರಿಗೆ ಬಡ್ಡಿ ರಹಿತ ಸಾಲ ಘೋಷಣೆ ಯಾಗಿದೆ. ಅಡಕೆ ಹಳದಿ, ಚುಕ್ಕಿ ರೋಗ ಸಂಶೋಧನೆಗೆ 10 ಕೋ.ರೂ. ಬಿಡುಗಡೆ ಮಾಡಲಾಗಿದೆ. ಕುಮ್ಕಿ, ಕಾನ, ಬಾಣೆ ಸಮಸ್ಯೆಗಳನ್ನು ಉಪ ಸಮಿತಿಗೆ ಒಪ್ಪಿಸಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ವ್ಯವಸ್ಥೆ, ಪದವೀಧರರಿಗೆ 2 ಸಾವಿರ ರೂ. ನೀಡುವ ಯೋಜನೆಯನ್ನು ಘೋಷಿಸಲಾಗಿದೆ. ಹಳ್ಳಿಯ ಯುವಕರಿಗೆ ವಿವೇಕಾನಂದರ ಹೆಸರಿನಲ್ಲಿ ಸಾಲ ಯೋಜನೆ, ಸ್ವಯಂ ಉದ್ಯೋಗಕ್ಕೆ ಅವಕಾಶ ನೀಡಲಾಗಿದೆ. ಭೂ ರಹಿತ ಮಹಿಳೆಯರಿಗೆ 500 ರೂ., ಸ್ವಸಹಾಯ ಸಂಘಕ್ಕೆ ಸಾಲ ಯೋಜನೆ, ಸ್ತ್ರೀ ಸಬಲೀಕರಣಕ್ಕೆ ಶಕ್ತಿ ತುಂಬುವ ಕಾರ್ಯ ಬಜೆಟ್‌ನಲ್ಲಿ ಆಗಿದೆ.

-ನಳಿನ್ ಕುಮಾರ್ ಕಟೀಲ್ ಸಂಸದರು, ದ.ಕ.ಲೋಕಸಭಾ ಕ್ಷೇತ್ರ
ರಾಜ್ಯಾಧ್ಯಕ್ಷರು, ಬಿಜೆಪಿ ಕರ್ನಾಟಕ

 
*ಈ ಬಜೆಟ್‌ನಲ್ಲಿ ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಐಟಿ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಉತ್ತೇಜನ ನೀಡಲಾಗಿದೆ. ಸ್ಟಾರ್ಟ್ ಆ್ಯಪ್ ನೀತಿ ಜಾರಿಗೆ ತರಲಾಗಿದೆ.
‘ಕರ್ ಸಮಾಧಾನ್’ ಎಂಬ ಯೋಜನೆಯನ್ನು ಪರಿಚಯಿಸುವ ಮೂಲಕ ಉದ್ಯಮಿ ಮತ್ತು ಕೈಗಾರಿಕೆಗಳಿಗೆ ಉಪಯುಕ್ತವಾಗಿದೆ. ಮತ್ಸ್ಯ ಸಂಪದ ಯೋಜನೆಯಡಿ  ಆಳ ಸಮುದ್ರ ಮೀನುಗಾರಿಕೆ, ಕರಾವಳಿ ಭಾಗದ ಮೀನುಗಾರರಿಗೂ ಬಜೆಟ್‌ನಲ್ಲಿ ಉತ್ತೇಜನ  ನೀಡಲಾಗಿದೆ. ಮಂಗಳೂರು-ಕಾರವಾರ-ಮುಂಬೈ ಜಲಮಾರ್ಗ ಪ್ರಸ್ತಾವನೆ ಮಾಡಿರುವುದು ಸ್ವಾಗತಾರ್ಹ.
- ಎಂ. ಗಣೇಶ್ ಕಾಮತ್ ಅಧ್ಯಕ್ಷರು, ಕೆನರಾ ಚೇಂಬರ್ ಆಫ್ ಕಾಮರ್ಸ್, ಮಂಗಳೂರು
 
*ರಾಜ್ಯ ಬಜೆಟ್‌ನಲ್ಲಿ ಕರಾವಳಿಗೆ ವಿಶೇಷ ಪ್ರಾಧ್ಯಾನತೆ ನೀಡಲಾಗಿದೆ. ಮೀನುಗಾರಿಕೆ, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗಿದೆ. ಅಂಗನವಾಡಿ ಕಾರ್ಯಕರ್ತರಿಗೆ ಮಾಸಾಶನ ಹೆಚ್ಚಳ, ಎಸ್‌ಸಿ/ಎಸ್‌ಟಿ ಬಡ ಕುಟುಂಬಗಳಿಗೆ 75 ಯೂನಿಟ್ ಉಚಿತ ವಿದ್ಯುತ್, ಅರ್ಹರಿಗೆ ಮನೆ ನಿರ್ಮಾಣಕ್ಕೆ ನೆರವು, ಅಯಾ ಭಾಗದ ಸಂಸ್ಕ್ರತಿ ಉಳಿಸಲು ಥೀಮ್ ಪಾರ್ಕ್ ಉತ್ತಮ ಯೋಜನೆಯಾಗಿದೆ. ನಮ್ಮ ನಿರೀಕ್ಷೆಯಂತೆ ಬಜೆಟ್  ಮೂಡಿ ಬಂದಿದೆ.
- ಡಾ.ಭರತ್ ಶೆಟ್ಟಿ ಶಾಸಕರು, ಮಂಗಳೂರು ಉತ್ತರ
 
*ರಾಜ್ಯ ಬಜೆಟ್ ಯುವಜನರ ಬದುಕಿನ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಉದ್ಯೋಗಕ್ಕಾಗಿ ಹಂಬಲಿಸುತ್ತಿರುವ ನಿರುದ್ಯೋಗಿ ಯುವಕರಿಗೆ ಈ ಬಜೆಟ್ ನಿರಾಸೆ ಮೂಡಿಸಿದೆ. ಯುವಜನರ ಬದುಕಿಗೆ ಭದ್ರತೆ ನೀಡಲಿಲ್ಲ. ನಿರುದ್ಯೋಗಿ ಯುವತಿ/ಯುವಕರಿಗೆ ಕೌಶಲ ತರಭೇತಿ ಕುರಿತು ಪ್ರಸ್ತಾಪವಿದೆ. ಈಗಾಗಲೇ ಲಕ್ಷಾಂತರ ಸಂಖ್ಯೆಯಲ್ಲಿ ಕೌಶಲ ತರಭೇತಿ ಪಡೆದಿರುವವರಿಗೆ ಉದ್ಯೋಗದ ಭರವಸೆ ಮೂಡಿಸುವಲ್ಲಿ ವಿಫಲವಾಗಿದೆ. ಶಿಕ್ಷಣ, ಉದ್ಯೋಗ, ಆರೋಗ್ಯ, ವಸತಿಯಂತಹ ಅಗತ್ಯತೆಗಳನ್ನು ಪೂರೈಸಲಾಗದ ಜನ ವಿರೋಧಿ ಸರಕಾರದ ಈ ಬಜೆಟ್‌ನಲ್ಲಿ ಮಠಗಳಿಗೆ ಅನುದಾನ ನೀಡುತ್ತಿರುವುದು ಖಂಡನೀಯ.
- ಮುನೀರ್ ಕಾಟಿಪಳ್ಳ ರಾಜ್ಯಾಧ್ಯಕ್ಷರು, ಡಿವೈಎಫ್‌ಐ

*ಕೋವಿಡ್ ನಂತರದ ದಿನಗಳಲ್ಲಿ ರಾಜ್ಯದ ಹಣಕಾಸು ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಹಿಡಿದಿಡುವ ಮೂಲಕ ಸುಮಾರು 402 ಕೋ. ರೂ.ರಾಜಸ್ವ ಹೆಚ್ಚಳದ ಬಜೆಟ್ ಮಂಡನೆ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಆಯವ್ಯಯ ಮಂಡಿಸಿದ್ದಾರೆ. ರಾಜ್ಯದ ರೈತ ಸಮುದಾಯಕ್ಕೆ ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಕೊಡುಗೆ ನೀಡಲಾಗಿದೆ.  ಸಹಕಾರ ಬ್ಯಾಂಕ್‌ಗಳ ಮೂಲಕ ನೀಡಲಾಗುತ್ತಿದ್ದ ಶೂನ್ಯ ಬಡ್ಡಿ ಸಾಲ ಪ್ರಮಾಣವನ್ನು 3ರಿಂದ 5 ಲಕ್ಷ ರೂಗೆ ಹೆಚ್ಚಳ ಮಾಡಲಾಗಿದೆ. ಇದರಿಂದ 30 ಲಕ್ಷ ರೈತರಿಗೆ ಅನುಕೂಲವಾಗಲಿದೆ. 56 ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತ ಕುಟುಂಬಗಳಿಗೆ ವಿಮಾ ಯೋಜನೆ ಕಲ್ಪಿಸಿರುವುದು ಶ್ಲಾಘನೀಯ.
- ವಿ. ಸುನೀಲ್ ಕುಮಾರ್ ದ.ಕ.ಜಿಲ್ಲಾ ಉಸ್ತುವಾರಿ ಸಚಿವರು
 
*ಇದು ಜನ ಹಿತಕ್ಕಾಗಿ ಮಂಡಿಸಿದ ಬಜೆಟ್ ಅಲ್ಲ. ಚುನಾವಣಾ ದೃಷ್ಟಿಯಿಂದ ಘೋಷಿಸಿದ ಭರವಸೆಗಳಾಗಿವೆ. ಜನರ ಮೇಲೆ ತೆರಿಗೆ ವಿಧಿಸಿ ಸುಲಿಗೆ ಮಾಡಲು ಮುಂದಾಗಿರುವ ಈ ಬಜೆಟ್ ಯಾವ ಕಾರಣಕ್ಕೂ ಅನಷ್ಠಾನಗೊಳ್ಳುವುದಿಲ್ಲ. ಯಾಕೆಂದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಮತ್ತು ಹೊಸ ಬಜೆಟ್ ಮಂಡಿಸಲಿದೆ.
- ಯು.ಟಿ.ಖಾದರ್ ವಿಪಕ್ಷ ಉಪನಾಯಕರು, ರಾಜ್ಯ ವಿಧಾನಸಭೆ
 
*ಇದು ಬಜೆಟ್ ಅಲ್ಲ, ಬಿಜೆಪಿಯ ವಿದಾಯ ಭಾಷಣ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಪತ್ರವಾಗಿದೆ. ರಾಜ್ಯದ ಒಟ್ಟು ಸಾಲ 3 ಲಕ್ಷ 22 ಸಾವಿರ ಕೋ.ರೂ. ದಾಟಿದೆ. ಗ್ರಾಮೀಣ ಭಾಗದ ಬಡಜನತೆಗೆ ಇದರಿಂದ ಏನೇನೂ ಪ್ರಯೋಜನವಿಲ್ಲ. ಕರಾವಳಿ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ರಾಜ್ಯದ ಜನತೆಯ ಕಿವಿಗೆ ಹೂ ಮುಡಿಸಲಾಗಿದೆ.
- ಕೆ. ಹರೀಶ್ ಕುಮಾರ್ ಅಧ್ಯಕ್ಷರು, ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ
 
*ಇದು ಕೇವಲ ಕೊಂಡುಕೊಳ್ಳಲು ಮತ್ತು ಹಂಚಿಕೆ ಮಾಡಲು ತಯಾರಿಸಿದ ದಾಖಲೆ ಪತ್ರವೇ ಹೊರತು ಬಜೆಟ್ ಅಲ್ಲ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಕಳೆದ ಬಾರಿಯ ಯೋಜನೆಗಳೇ ಅನುಷ್ಠಾನ ಆಗದಿರು ವುದರಿಂದ ಈ ಬಜೆಟಿನ ಯೋಜನೆಗಳು ಜಾರಿಯಾಗಲು ಸಾಧ್ಯವಿಲ್ಲ. ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕ್ರೈಸ್ತ ಅಭಿವೃದ್ಧಿಯ ನಿಗಮ ಸ್ಥಾಪನೆಯ ನಿರೀಕ್ಷೆಯೂ ಹುಸಿಯಾಗಿದೆ.
- ಐವನ್ ಡಿಸೋಜ ಮಾಜಿ ಸದಸ್ಯರು, ವಿಧಾನ ಪರಿಷತ್                                                         
 
*ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ, ದೇಶದ ಬೆನ್ನೆಲುಬಾಗಿರುವ ರೈತ ಸಮುದಾಯಕ್ಕೆ, ವಿವಿಧ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ವೇತನದಲ್ಲಿ ದುಡಿಯುವ ಕಾರ್ಮಿಕರಿಗೆ, ವಿದ್ಯಾವಂತ ನಿರುದ್ಯೋಗಿಗೆ, ಯುವ ಸಮುದಾಯಕ್ಕೆ ಈ ಬಜೆಟ್‌ನಿಂದ ಯಾವುದೇ ಸ್ಪಷ್ಟವಾದ ಭರವಸೆ ಇಲ್ಲ. ಭತ್ತ, ತೆಂಗು, ಕರಿಮೆಣಸು, ರಬ್ಬರ್, ಅಡಿಕೆ ಬೆಳೆಗಾರರಿಗೆ ಕೇರಳದ ಮಾದರಿಯಲ್ಲಿ ಪರಿಹಾರ ಕೊಡುತ್ತಿದ್ದರೆ ಈ ಬಜೆಟ್ ಒಪ್ಪಬಹುದಿತ್ತು. ಆದರೆ ಅದು ಮಾಡಲಿಲ್ಲ. ಶೂನ್ಯ ಬಡ್ಡಿ ಸಾಲ 5 ಲಕ್ಷ ರೂ. ಆಕರ್ಷಕ ಘೋಷಣೆಯಾಗಿದೆ.
- ಕೆ.ಯಾದವ ಶೆಟ್ಟಿ ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ
 
*ಈ ಬಜೆಟ್ ಅವಿಶ್ವಸನೀಯ ಮತ್ತು ಅಂಕಿ ಅಂಶಗಳ ಕಂತೆ ಮಾತ್ರ. ಹಿಂದಿನ ಬಜೆಟ್ಟಿನ ಶೇ.50 ಯೋಜನೆ ಪೂರ್ಣಗೊಳಿಸಲಾಗದ ಸರಕಾರ ಮುಂದಿನ ಚುನಾವಣೆಯು ದೃಷ್ಟಿಯಿಂದ ಅಂಗೈಯಲ್ಲಿ ಅರಮನೆ ತೋರಿಸುವ ಆಮಿಷ ತೋರಿಸಿದ್ದಾರೆ.
- ನಝೀರ್ ಉಳ್ಳಾಲ್ ಕಾರ್ಯಾಧ್ಯಕ್ಷ, ದ.ಕ.ಜಿಲ್ಲಾ ಜಾತ್ಯತೀತ ಜನತಾದಳ
 
*ರಾಜ್ಯ ಬಜೆಟ್‌ನಲ್ಲಿ ಮೀನುಗಾರಿಕಾ ಹಾಗೂ ಪ್ರವಾಸೋದ್ಯಮ ವಲಯ ಕರಾವಳಿಯ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯ ಘೋಷಣೆ ಮಾಡಲಾಗಿದೆ. ಅಭಿವೃದ್ಧಿ ನಿಟ್ಟಿನಲ್ಲಿ ಇದು ಅತ್ಯುತ್ತಮ ಬಜೆಟ್ ಆಗಿದೆ. ಮೀನುಗಾರಿಕೆ ವಲಯಕ್ಕೆ ಸಂಬಂಧಿಸಿದಂತೆ 1.50 ಲಕ್ಷ ಕಿ.ಲೀ. ಡೀಸೆಲ್ ಸಬ್ಸಿಡಿಯನ್ನು 2 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಮೀನುಗಾರಿಕೆ ಉತ್ತಮ ಯೋಜನೆಯನ್ನು ಪ್ರಕಟಿಸಲಾಗಿದೆ. ಸೀಮೆಎಣ್ಣೆ ಇಂಜಿನ್ ಹೊಂದಿರುವ ಬೋಟ್‌ಗಳಿಗೆ ಡೀಸೆಲ್ ಅಥವಾ ಪೆಟ್ರೋಲ್ ಇಂಜಿನ್ ಅಳವಡಿಕೆಗೆ 50,000 ರೂ. ಪ್ರೋತ್ಸಾಹ ಧನ ನೀಡುವ ಮೂಲಕ ಬಡ ಮೀನುಗಾರರ ಹಿತ ಕಾಪಾಡುವ ಕೆಲಸವನ್ನು ಮಾಡಲಾಗಿದೆ. ವಸತಿ ರಹಿತ ಮೀನುಗಾರರಿಗೆ 5 ಸಾವಿರದ ಬದಲು 10 ಸಾವಿರ ಮನೆಗಳನ್ನು ನಿರ್ಮಾಣ ಮಾಡಲು ಯೋಜನೆ ವಿಸ್ತರಣೆಯು ಉತ್ತಮ ಯೋಜನೆಯಾಗಿದೆ.
- ವೇದವ್ಯಾಸ ಕಾಮತ್ ಶಾಸಕರು, ಮಂಗಳೂರು ದಕ್ಷಿಣ
 
*ಬಜೆಟ್‌ನಲ್ಲಿ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನಕ್ಕೆ ಅನುದಾನ ಘೋಷಿಸಬೇಕೆಂಬ ಅಪೇಕ್ಷೆಯನ್ನು ಕ್ಯಾಂಪ್ಕೊ ಹೊಂದಿತ್ತು. ಹಳದಿ ಎಲೆ ಮತ್ತು ಎಲೆ ಚುಕ್ಕಿರೋಗದ ಬಗ್ಗೆ ಸಂಶೋಧನೆ ನಡೆಸಲು ಬಜೆಟ್‌ನಲ್ಲಿ 10 ಕೋ.ರೂ. ಅನುದಾನ ಘೋಷಣೆ ಮಾಡಿರುವುದನ್ನು ಕ್ಯಾಂಪ್ಕೊ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತದೆ. ಕೃಷಿಯಲ್ಲಿ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪದ್ಧತಿಗಳ ಅಳವಡಿಕೆಗೆ ಉತ್ತೇಜನ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ರಫ್ತಿಗೆ ಒತ್ತು ನೀಡುವ ಮೂಲಕ ಸಮಗ್ರ ಕೃಷಿ ಪದ್ಧತಿಯ ಉತ್ತೇಜನಕ್ಕೆ ಬಜೆಟ್‌ನಲ್ಲಿ ಪ್ರೋತ್ಸಾಹ 3 ಲಕ್ಷದಿಂದ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ, ಉತ್ತರ ಕರ್ನಾಟಕದ ರೈತರಿಗೆ ಸಹಾಯಧನ, ನೀರಾವರಿಗೆ ಅತೀ ಹೆಚ್ಚಿನ ಹಣ ಮಂಜೂರು, ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ಮುಂತಾದ ಯೋಜನೆಗಳ ಮೂಲಕ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಪಶುಸಂಗೋಪನೆಗೆ ಅನುದಾನದಲ್ಲಿ ಹೆಚ್ಚಳ, ಶಿಕ್ಷಣ, ವೈದ್ಯಕೀಯ ಮತ್ತು ಆಡಳಿತ ಸುಧಾರಣೆಗೆ ಒತ್ತು ನೀಡಿ ಸಾಮಾನ್ಯ ಜನರ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ಮಂಡನೆ ಮಾಡಲಾಗಿದೆ. ಒಟ್ಟಾರೆ ನೇಗಿಲ ಯೋಗಿಯ ನೆರವಿಗೆ ಒತ್ತು ನೀಡಲಾಗಿದೆ. ಕೃಷಿ ಮತ್ತು ಉಳಿದ ಎಲ್ಲಾ ರಂಗಗಳಿಗೂ ಅನುದಾನ ನೀಡುವ ಮೂಲಕ ಸಮತೋಲನ ಹೊಂದಿರುವ ಅತ್ಯುತ್ತಮ ಬಜೆಟ್ ಆಗಿದೆ.
- ಎ.ಕಿಶೋರ್ ಕುಮಾರ್ ಕೊಡ್ಗಿ 
ಅಧ್ಯಕ್ಷರು, ಕ್ಯಾಂಪ್ಕೊ ನಿ.ಮಂಗಳೂರು.

Similar News