ವಳಚ್ಚಿಲ್: ಅಕ್ರಮ ಮರಳುಗಾರಿಕೆ ಆರೋಪ; ಇಬ್ಬರ ಸೆರೆ
ಮಂಗಳೂರು: ನಗರ ಹೊರವಲಯದ ವಳಚ್ಚಿಲ್‌ನ ನೇತ್ರಾವತಿ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಸ್ಥಳಕ್ಕೆ ದಾಳಿ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಬಂಧಿತರನ್ನು ಶರೀಫ್ ಅಬ್ದುಲ್ ಖಾದರ್ ಮತ್ತು ಮುಹಮ್ಮದ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.
ನೇತ್ರಾವತಿ ನದಿ ತೀರದಲ್ಲಿ ಮರಳನ್ನು ಕಳವು ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ದಾಳಿ ನಡೆಸಿದ ಅಧಿಕಾರಿಗಳು ಪಾವೂರು ಉಳಿಯ ದ್ವೀಪದಿಂದ ಸುಮಾರು 1 ಕಿ.ಮಿ ಸಾಗಿ ಇಬ್ಬರನ್ನು ವಶಕ್ಕೆ ಪಡೆದರು. 2 ದೋಣಿಗಳಲ್ಲಿ ಸುಮಾರು 2800 ರೂ. ಮೌಲ್ಯದ 4 ಟನ್ ಮರಳನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದರು. ದಾಳಿ ವೇಳೆ ಕಬ್ಬಿಣ್ಣದ ದೋಣಿ 1, ಕೆಂಪು ಬಣ್ಣದ ಫೈಬರ್ ದೋಣಿ 1, ಎಲ್‌ಪಿಜಿ ಸಿಲಿಂಡರ್, ಮರಳು ತೆಗೆಯುವ ೩ ಜಲ್ಲಗಳ ಸಹಿತ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.