ವಿಧಾನ ಮಂಡಲದಲ್ಲಿ ಮಂಡಿಸದ, ಜನರಿಂದ ಮುಚ್ಚಿಟ್ಟ ಅಸಲಿ ಬಜೆಟ್

Update: 2023-02-18 14:19 GMT

ಆಯಾ ವರ್ಷದಲ್ಲಿ ಮಂಡಿಸಲಾಗುವ ಬಜೆಟ್ಟು ಎಂದರೆ ಒಂದು ಅಂದಾಜು ಅಷ್ಟೆ (Budget Estimate). ಈ ವರ್ಷದ ಆಯವ್ಯಯದ ಅಸಲೀ ಲೆಕ್ಕ ಮುಂದಿನ ವರ್ಷದ ಪುನರ್‌ವಿಮರ್ಶಿತ (Revised Estimate- RE)ನಲ್ಲಿಒಂದಷ್ಟು ಸಿಕ್ಕರೆ, ಕರಾರುವಾಕ್ಕಾದ ಲೆಕ್ಕ (Actuals) ಗೊತ್ತಾಗುವುದು ಎರಡು ವರ್ಷಗಳ ನಂತರದ ಬಜೆಟ್ ದಾಖಲೆಗಳಲ್ಲಿ.

ಈ ವರ್ಷದ Budget Estimate ಗಿಂತ ಎರಡು ವರ್ಷಗಳ ನಂತರ ಸಿಗುವ ಈ ವರ್ಷದ Actuals ಅಂಕಿ ಅಂಶಗಳು ಬಜೆಟ್‌ ಅಂದಾಜಿಗಿಂತ ಸರಾಸರಿ ಶೇ. 20 ರಷ್ಟಾದರೂ ಕಡಿಮೆ ಇರುತ್ತೆ. ಆದ್ದರಿಂದ ಈ ವರ್ಷ ಬಜೆಟ್ ಭಾಷಣದಲ್ಲಿ ಬೊಮ್ಮಾಯಿ ಹೇಳಿರುವ ಲೆಕ್ಕಗಳಿಗೆಲ್ಲಾ ಶೇ.20 ರಷ್ಟು ರಿಯಾಯಿತಿ ಕೊಡೋಣ.

ಇದಲ್ಲದೆ 2022 ರಿಂದ ಎಲ್ಲಾ ಸರಕಾರಗಳು ಜನರಿಂದ ಮುಚ್ಚಿಟ್ಟಿರುವ ಮಹಾಸತ್ಯವೊಂದಿದೆ. 2003ರಲ್ಲಿ ಜಾರಿಯಾದ Fiscal Responsibility and Budget Management Act  (FRBM) ಪ್ರಕಾರ ಎಲ್ಲಾ ಸರಕಾರಗಳು ಬಜೆಟ್ ಮಂಡನೆಯ ಜೊತೆಗೆ Medium Term Fiscal Plan (MTFP) ಅನ್ನು ಮಂಡಿಸಬೇಕು.

ವಾಸ್ತವದಲ್ಲಿ ಅಸಲೀ ಬಜೆಟ್ ಬೊಮ್ಮಾಯಿಯವರು ವಿಧಾನ ಮಂಡಲದಲ್ಲಿ ಮಾಡಿದ ಭಾಷಣವಲ್ಲ. ಈ MTFP ಅಸಲೀ ಬಜೆಟ್ಟು. ಇದನ್ನು ಅವರು ಸರಕಾರಕ್ಕೆ ಸಾಲ ಕೊಡುವ ಸಂಸ್ಥೆಗಳಿಗೆ, ಅಂತರ್‌ ರಾಷ್ಟ್ರೀಯ ಕ್ರೆಡಿಟ್ ಏಜೆನ್ಸಿಗಳಿಗೆ, ಐಎಂಫ್ ಮತ್ತು ವಿಶ್ವ ಬ್ಯಾಂಕುಗಳಿಗೆ ಸಲ್ಲಿಸಬೇಕು. ಹೀಗಾಗಿ MTFP ಯಲ್ಲಿ ಬೊಗಳೆಗಳು ಇರುವುದಿಲ್ಲ. ಆಸಕ್ತರು ಈ ವರ್ಷದ MTFP ಯನ್ನು ಈ ವಿಳಾಸದಲ್ಲಿ ಓದಬಹುದು: https://finance.karnataka.gov.in/storage/pdf-files/5_MTFP-2023-27.pdf

ಈ FRBM  ದಾಖಲೆಯಲ್ಲಿ ಸರಕಾರಗಳು ಮುಂದಿನ ಐದು ವರ್ಷಗಳಲ್ಲಿ ಹೇಗೆ ಸರಕಾರದ ಆದಾಯವನ್ನು ಜಾಸ್ತಿ ಮಾಡಿಕೊಂಡು, ವೆಚ್ಚವನ್ನು ಕುಗ್ಗಿಸಿಕೊಳ್ಳುತ್ತವೆ ಎಂಬುದರ ಬ್ಲೂ ಪ್ರಿಂಟ್‌ ಕೊಟ್ಟಿರಬೇಕು.

ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಪ್ರಕಾರ ದೇಶದ ಅಭಿವೃದ್ಧಿ ಎಂದರೆ ಆಯಾ ದೇಶದ ಉದ್ಯಮಿಗಳ ಅಭಿವೃದ್ಧಿ. ಹೀಗಾಗಿ ಸರಕಾರವು ಪ್ರಧಾನವಾಗಿ ಉದ್ಯಮಿಗಳಿಗೆ ಬೇಕಾದ ಸೌಕರ್ಯಗಳಿಗೆ ವೆಚ್ಚ ಮಾಡಬೇಕು. ಅದಕ್ಕಾಗಿ ಜನರಿಗೆ ಮತ್ತು ಆಡಳಿತಕ್ಕೆ ಮಾಡುತ್ತಿರುವ ವೆಚ್ಚ ಕಡಿಮೆ ಮಾಡಿಕೊಳ್ಳಬೇಕು ಹಾಗೂ ಜನರಿಗೆ ರಿಯಾಯಿತಿ ಅಥವಾ ಉಚಿತ ದರದಲ್ಲಿ ಕೊಡುತ್ತಿರುವ ಸೇವೆ ಮತ್ತು ಸರಕುಗಳಿಗೆ ಶುಲ್ಕ ವಿಧಿಸಬೇಕು. ಸಬ್ಸಿಡಿಗಳನ್ನು, ಸಂಬಳ, ಸಾರಿಗೆಗಳನ್ನು ಕಡಿತಗೊಳಿಸಬೇಕು. ಹಾಗೂ ಇವೆಲ್ಲವನ್ನು ಮುಂದಿನ ಐದು ವರ್ಷಗಳಲ್ಲಿ ಹೇಗೆ ಮಾಡಲಿದ್ದೇವೆ ಎಂಬುದನ್ನು ಬಜೆಟ್ ನ ಜೊತೆಗೆ ಸದನದಲ್ಲಿ MTFP ದಾಖಲೆಯಲ್ಲಿ ಮಂಡಿಸಬೇಕು.

ಬೊಮ್ಮಾಯವರು ಬಜೆಟ್ ಭಾಷಣದಲ್ಲಿ ಹೇಳದ ಆದರೆ MTFP ಯಲ್ಲಿ ಮಂಡಿಸಿರುವ ಕೆಲವು ಬಚ್ಚಿಟ್ಟ ಗುಟ್ಟುಗಳು ಹೀಗಿವೆ:

1. FRBM ಆ ಅನುಷ್ಠಾನಕ್ಕೆ ರಚಿಸಲಾಗಿರುವ ಸಮಿತಿಯ ಪ್ರಕಾರ ತೆರಿಗೆಯೇತರ ಆದಾಯ ರಾಜ್ಯದಲ್ಲಿ ಸುಧಾರಿಸಿಲ್ಲ. ಹೀಗಾಗಿ ಕಳೆದ ಕೆಲವಾರು ವರ್ಷಗಳಿಂದ ಯಾವ್ಯಾವ ಸರಕಾರಿ ಸೇವೆಗಳಿಗೆ ಶುಲ್ಕವನ್ನು ಏರಿಸಿಲ್ಲವೋ ಅವೆಲ್ಲವನ್ನು ಏರಿಸಲು ಕ್ರಮತೆಗೆದುಕೊಳ್ಳಲಾಗುವುದು (ಪ್ಯಾರಾ 27. MTFP- 2023 - 27)

2. ಸಂಬಳ, ಪಿಂಚಣಿ ಮತ್ತು ಬಡ್ಡಿಗಳು ಸರಕಾರದ ಕಡ್ಡಾಯ ವೆಚ್ಚದ (Committed Expenditure)  ಭಾಗವಾಗಿವೆ. ಇದನ್ನು ತ್ವರಿತವಾಗಿ ಕಡಿಮೆ ಮಾಡಿಕೊಳ್ಳುವ ಅಗತ್ಯವಿದೆ. ಹೀಗಾಗಿ ಸಂಬಳ ಮತ್ತು ಪಿಂಚಣಿಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡಲು ತಂತ್ರಜ್ಞಾನವನ್ನು ಬಳಸುವ ಮೂಲಕ ಸರಕಾರಿ ಸಿಬ್ಬಂದಿಯ ಸ್ವರೂಪ ಮತ್ತು ಸಿಬ್ಬಂದಿಯ ಗಾತ್ರವನ್ನು ಕಡಿಮೆ ಮಾಡಲಾಗುವುದು ಮತ್ತು ಎಲ್ಲಾ ಸಬ್ಸಿಡಿಗಳನ್ನು ಕಡಿತಗೊಳಿಸಲಾಗುವುದು (ಪ್ಯಾರಾ14. MTFP& 2023-27)

ಅರ್ಥಾತ್ ಸರಕಾರಿ ನೇಮಕಕ್ಕೆ ಕಡಿತ ಮತ್ತು ಪಿಂಚಣಿರಹಿತ ನೇಮಕಾತಿ. ಆದರೆ ಬಜೆಟ್‌ನಲ್ಲಿ ಮಾತ್ರ ನಿರುದ್ಯೋಗಿ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಲು 2000 ಸ್ಟೈಫಂಡ್‌ ಘೋಷಣೆ! ಸೋಗಲಾಡಿತನಕ್ಕೆ ಮಿತಿಯೇ ಇಲ್ಲ ..

ಅದಕ್ಕೆ ತಕ್ಕಂತೆ MTFP- 2023-27ರಲ್ಲಿ ಕೊಟ್ಟಿರುವ ಅಂಕಿ ಅಂಶಗಳಂತೆ 2021-22 ರಲ್ಲಿ ರಾಜ್ಯದ ರೈತರಿಗೆ ವಿದ್ಯುತ್, ಇಂಧನ ಇತ್ಯಾದಿಗಳಿಗೆ 36,306 ಕೋಟಿ ರೂ. ಸಬ್ಸಿಡಿಯನ್ನು ಕೊಡುತ್ತಿದ್ದರೆ 2023-24ರ ಸಾಲಿಗೆ ಅದನ್ನು 31,367 ಕೋಟಿಗೆ ಇಳಿಸಲಾಗಿದೆ. (ಟೇಬಲ್ 12, MTFP&- 2023-27).

ಅಷ್ಟು ಮಾತ್ರವಲ್ಲ. ಈಗ ಈ ಸಬ್ಸಿಡಿಗಳ ಗಾತ್ರರಾಜ್ಯದ ಒಟ್ಟಾರೆ ಉತ್ಪನ್ನ (GSDP) ಯ ಶೇ. 2.4 ರಷ್ಟಿದ್ದರೆ ಅದನ್ನು ವರ್ಷಾನು ವರ್ಷಕಡಿಮೆ ಮಾಡುತ್ತಾ ಮಾಡುತ್ತಾ 2027ರ ವೇಳೆಗೆ GSDPಯ ಶೇ.1.2ಕ್ಕೆ ಇಳಿಸುವುದಾಗಿ ಬೊಮ್ಮಾಯಿ ಸರಕಾರ MTFPಯಲ್ಲಿ ಘೋಷಿಸಿದೆ.

ಅಂದರೆ ಇನ್ನು ಐದು ವರ್ಷಗಳಲ್ಲಿ ರೈತರಿಗೆ ಕೊಡುತ್ತಿದ್ದ ವಿದ್ಯುತ್ ಸಬ್ಸಿಡಿ, ಮನೆ ಕಟ್ಟಿಕೊಳ್ಳಲು ಕೊಡುತ್ತಿದ್ದ ಸಬ್ಸಿಡಿ, ಮೀನುಗಾರರಿಗೆ ಕೊಡುತ್ತಿದ್ದ ಇಂಧನ ಸಬ್ಸಿಡಿಗಳೆಲ್ಲಾ ಅರ್ಧಕ್ಕರ್ಧದಷ್ಟು ಕಡಿಮೆಯಾಗಲಿವೆ. (ಟೇಬಲ್ 15, MTFP&- 2023-27)

3. ಬೊಮ್ಮಾಯಿ ಸರಕಾರದ ಪ್ರಕಾರ ಸರಕಾರ ಈ ಸಾಲಿನಲ್ಲಿ 31,367 ಕೋಟಿ ರೂ. ಗಳನ್ನು ಸಬ್ಸಿಡಿಗಳಿಗಾಗಿ ವೆಚ್ಚ ಮಾಡುತ್ತಿದೆ. ಅದರಲ್ಲಿ 13,163 ಕೋಟಿ ರೂ.ಗಳು ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಸರಬರಾಜಿಗೆ ಕೊಡುತ್ತಿರುವ ಸಬ್ಸಿಡಿಯಾಗಿದೆ.

ಇದನ್ನು ಕಡಿತಗೊಳಿಸದೆ ಸರಕಾರದ ಆದಾಯಗಳು ಸುಧಾರಣೆಯಾಗುವುದಿಲ್ಲ ಎಂದೂ, ಹಲವಾರು ವಿದ್ಯುತ್ ಕ್ಷೇತ್ರ ಸುಧಾರಣೆಗಳನ್ನು ತರುವುದಾಗಿ ಘೋಷಿಸಿದೆ. ಅರ್ಥಾತ್ ಹೇಗೆ ಉಚಿತ ವಿದ್ಯುತ್ತನ್ನು ಹಿಂದೆೆಗೆಯಲಾಗುವುದು ಎಂಬ ಯೋಜನೆ ಜಾರಿಯಾಗಲಿದೆ.

4. ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ವಿದ್ಯುತ್ ಸರಬರಾಜು ನಿಗಮಗಳು (ESCOM) ಮತ್ತು ಕೆಪಿಸಿಲ್ ಎದುರಿಸುತ್ತಿರುವ ನಷ್ಟವನ್ನು ಹಾಗೂ ಅದಕ್ಕೆ ಪರಿಹಾರ ಮಾರ್ಗವನ್ನು ಬೊಮ್ಮಾಯಿ ಸರಕಾರ MTFPಯಲ್ಲಿ ಪ್ರಸ್ತಾಪಿಸಿರುವುದನ್ನು ಬಜೆಟ್ ಭಾಷಣದಲ್ಲಿ ಬಚ್ಚಿಟ್ಟಿದೆ. ನಾಡಿನ ರೈತಾಪಿ ಇದನ್ನು ವಿಶೇಷವಾಗಿ ಗಮನಿಸಬೇಕಿದೆ.

ಸರಕಾರದ ಪ್ರಕಾರ ರಾಜ್ಯದ ESCಗಳು ಮತ್ತು ಕೆಪಿಸಿಲ್‌ಗಳು ಮಾಡಿರುವ ಸಾಲ ಮತ್ತು ಬಾಕಿ ಎಲ್ಲಾ ಸೇರಿ 31, 258 ಕೋಟಿ ರೂ.ಗಳಾಗಿದೆಯಂತೆ. ಈ ಅಗಾಧ ಹೊರೆಗೆ ಕಾರಣ ಬಳಕೆದಾರರಿಂದ ವಿದ್ಯುತ್ ಪರಿಕರಗಳ ಫಿಕ್ಸೆಡ್ ವೆಚ್ಚವನ್ನು ವಸೂಲಿ ಮಾಡದಿರುವುದು, ಉಚಿತವಾಗಿ ಮತ್ತು ರಿಯಾಯಿತಿ ದರದಲ್ಲಿ ಬಡವರಿಗೆ ವಿದ್ಯುತ್‌ ಕೊಡಲು ಉಳ್ಳವರಿಗೆ ಹಾಕುತ್ತಿರುವ ಹೆಚ್ಚಿನದರ (ಕ್ರಾಸ್ ಸಬ್ಸಿಡಿ ) ಇತ್ಯಾದಿಗಳು. ಇವನ್ನು ಹೇಗೆ ಕಡಿಮೆ ಮಾಡಬಹುದು ಎಂಬ ಬಗ್ಗೆ ಶಿಫಾರಸು ಮಡಲು ಏಕವ್ಯಕ್ತಿ ಸಮಿತಿಯನ್ನು ನೇಮಕ ಮಾಡಿದ್ದು ಅದು ಕೊಟ್ಟ ವರದಿಯನ್ನು ಮುಂದಿನ ವರ್ಷದಿಂದ ಜಾರಿ ಮಾಡಲಾಗುವುದು ಎಂದು ಬೊಮ್ಮಾಯಿ ಸರಕಾರ MTFPಯಲ್ಲಿ ಘೋಷಿಸಿದೆ. ಆದರೆ ಬಜೆಟ್‌ನಲ್ಲಿ ಹೇಳಿಲ್ಲ! (ಪ್ಯಾರಾ 19, ಪು. 23, MTFP- 2023-27)

ಈ ಏಕವ್ಯಕ್ತಿ ಸಮಿತಿಯ ಹೆಸರು ಗುರುಚರಣ್ ಸಮಿತಿ. ಇವರು ನಿವೃತ್ತ ಸರಕಾರಿ ಅಧಿಕಾರಿ. ಅವರು 2022ರ ಜೂನ್ ನಲ್ಲಿತಮ್ಮ ವರದಿಯನ್ನು ಕೊಟ್ಟಿದ್ದಾರೆ. ಅದರ ಪತ್ರಿಕಾ ವರದಿಯನ್ನು ಆಸಕ್ತರು ಈ ವಿಳಾಸದಲ್ಲಿ ಗಮನಿಸಬಹುದು :

https://www.thehindu.com/news/national/karnataka/renegotiate-high-cost-power-purchase-agreements-says-power-reforms-committee/article65573241.ece

ಈ ಗುರುಚರನ್ ಸಮಿತಿಯು ಬಡವರಿಗೆ ಮತ್ತುರೈತರಿಗೆ ಉಚಿತವಾಗಿ ಅಥವಾ ರಿಯಯಿತಿ ದರದಲ್ಲಿ ವಿದ್ಯುತ್‌ ಕೊಡಲು ಉಳ್ಳವರಿಗೆ ವಿಧಿಸುತ್ತಿರುವ ಹೆಚ್ಚುವರಿದರವನ್ನು ಕಡಿತಗೊಳಿಸಲು ಅರ್ಥಾತ್‌ಕ್ರಾಸ್ ಸಬ್ಸೀಡಿಯನ್ನು ಕಡಿತಗೊಳಿಸಲು ಸಲಹೆ ಮಾಡಿದೆ ಹಾಗೂ ವಿದ್ಯುತ್‌ ದರವನ್ನು ವೆಚ್ಚಕ್ಕೆ ತಕ್ಕಂತೆ ಹೆಚ್ಚಿಸಬೇಕೆಂದೂ, ಎಲ್ಲಾ ಬಳಕೆದಾರರಿಂದ ಕಡ್ಡಾಯವಾಗಿ ವಿದ್ಯುತ್ ಪರಿಕರಗಳ ಸ್ಥಿರ ದರವನ್ನು ಸಂಪೂರ್ಣವಾಗಿ ಪಾವತಿ ಪಡೆದುಕೊಳ್ಳಲು ಸಲಹೆ ಮಾಡಿದೆ.

ಈ ಶಿಫಾರಸುಗಳನ್ನು ಜಾರಿ ಮಾಡಲು ಸರಕಾರಕ್ಕೆ ಸಹಕರಿಸಲು ಗುರುಚರಣ್ ಸಮಿತಿಯ ಅವಧಿಯನ್ನು ಬೊಮ್ಮಾಯಿ ಸರಕಾರ ಹೆಚ್ಚಿಸಿದೆ.

ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಬೊಮ್ಮಾಯಿ ಸರಕಾರ ಮತ್ತೆ ಅಧಿಕಾರಕ್ಕೆ ಬಂದರೆ ರೈತರಿಗೆ ಉಚಿತ ವಿದ್ಯುತ್ ಕಡಿತವಾಗುವುದು ಮಾತ್ರವಲ್ಲದೆ, ಎಲ್ಲಾ ಬಗೆಯ ಬಡ-ಮಧ್ಯಮ ವರ್ಗದವರ ವಿದ್ಯುತ್ ಬಿಲ್ಲು ಎರಡು ಪಟ್ಟು ಹೆಚ್ಚಾಗಲಿದೆ. ಅಂದ ಹಾಗೆ ಇದೇ MTFP 2023-27ರಲ್ಲಿ ಬೊಮ್ಮಾಯಿ ಸರಕಾರ ಟೋಯೋಟಾ ಇನ್ನಿತರ ಬೃಹತ್ ಬಹುರಾಷ್ಟ್ರೀಯ ಮತ್ತು ಕರ್ನಾಟಕದ ದೊಡ್ದ ದೊಡ್ದ ಉದ್ಯಮಿಗಳಿಗೆ 2022ರಲ್ಲಿ 1600 ಕೋಟಿ ರೂ. ಮತ್ತು 2023ರಲ್ಲಿ 800 ಕೋಟಿ ತೆರಿಗೆ ರಿಯಾಯತಿ ಮತ್ತು ಬಡ್ಡಿ ರಿಯಾಯಿತಿಯನ್ನು ಕೊಟ್ಟಿದೆೆ ಎಂಬ ವಿವರಗಳೂ ಇವೆ.. !

Similar News