‘ಮತದಾರರ ಪಟ್ಟಿ’ ಅಕ್ರಮ ಆರೋಪ: ಮುಖ್ಯ ಚುನಾವಣಾಧಿಕಾರಿಗೆ ಪ್ರಿಯಾಂಕ್ ಖರ್ಗೆ ದೂರು

Update: 2023-02-20 11:55 GMT

ಬೆಂಗಳೂರು, ಫೆ.20: ರಾಜ್ಯ ಸರಕಾರ ‘ಚಿಲುಮೆ’ ಸಂಸ್ಥೆ ಮೂಲಕ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ಮಾಡಿದ ಬಳಿಕ ಈಗ ರಾಜ್ಯದ ಬೇರೆ ಕ್ಷೇತ್ರಗಳಲ್ಲಿಯೂ ಅಕ್ರಮಕ್ಕೆ ಮುಂದಾಗಿದ್ದು, ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದೇವೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಸೋಮವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಆನ್‍ಲೈನ್ ಮೂಲಕ 6,670 ಮತದಾರರ ಹೆಸರನ್ನು ಅವರಿಗೆ ಗೊತ್ತಿಲ್ಲದೆ ಮತದಾರರ ಪಟ್ಟಿಯಿಂದ ಹೆಸರು ರದ್ದುಪಡಿಸುವಂತೆ ಅರ್ಜಿ ಹಾಕಲಾಗಿದೆ ಎಂದರು.

ಮತದಾರರ ಗಮನಕ್ಕೆ ಬಾರದೆ ಹೆಸರು ಕೈ ಬಿಡುವಂತೆ ಮತ್ತೊಬ್ಬರು ಅರ್ಜಿ ಹಾಕಿದ್ದಾರೆ. ಈ ವಿಚಾರವಾಗಿ ನಮ್ಮ ಪಕ್ಷದ ಬೂತ್ ಏಜೆಂಟರು ಪರಿಶೀಲಿಸಿದಾಗ, ಅರ್ಜಿಯಲ್ಲಿ ‘ನಾನು ಸ್ಥಳೀಯನಲ್ಲ, ನನ್ನ ನಿವಾಸ ಬೇರೆ ರಾಜ್ಯದಲ್ಲಿದೆ’ ಎಂದು ಹೇಳಿರುವುದು ಸ್ಪಷ್ಟವಾಗಿದೆ. ಆ ಮೂಲಕ ವ್ಯವಸ್ಥಿತವಾಗಿ, ಅಕ್ರಮವಾಗಿ ಮತದಾರರ ಹೆಸರು ಕೈ ಬಿಡಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಅವರು ದೂರಿದರು.

ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೂ ಈ ಬಗ್ಗೆ ದೂರುಗಳನ್ನು ನೀಡಲಾಗಿದೆ. ಕಾನೂನಿನ ಪ್ರಕಾರ ಒಂದು ಮೊಬೈಲ್ ಸಂಖ್ಯೆಯಿಂದ ಗರಿಷ್ಠ ಐದು ಮಂದಿಯ ಹೆಸರು ಕೈಬಿಡಲು ಅರ್ಜಿ ಹಾಕಬಹುದು. ಆದರೆ, ಆಳಂದದಲ್ಲಿ ಒಂದು ಬೂತ್‍ನಲ್ಲಿ ಒಂದು ಮೊಬೈಲ್ ಸಂಖ್ಯೆಯಲ್ಲಿ 70 ಮತದಾರರ ಹೆಸರು ರದ್ದುಪಡಿಸಲು ಅರ್ಜಿ ಹಾಕಲಾಗಿದೆ. ಒಬ್ಬೊಬ್ಬರು 50-70 ಮತದಾರರ ಹೆಸರು ರದ್ದು ಮಾಡಲು ಅರ್ಜಿ ಹಾಕಲು ಹೇಗೆ ಸಾಧ್ಯ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಅರ್ಜಿ ಹಾಕಿರುವವರಲ್ಲಿ ಬಹುತೇಕ ಕಾಂಗ್ರೆಸ್ ಮತದಾರರಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೇ ಯಾರು ಮತ ಹಾಕುತ್ತಾರೆ ಎಂದು ಬೇರೆ ರಾಜ್ಯದವರಿಗೆ ಮಾಹಿತಿ ನೀಡುವವರು ಯಾರು. ಈ ಮಾಹಿತಿ, ಆ ಸ್ಥಳೀಯ ಬೂತ್‍ನವರಿಗೆ ಗೊತ್ತಿರುತ್ತದೆಯೇ ಹೊರತು ಬೇರೆಯವರಿಂದ ಈ ಕೆಲಸ ಅಸಾಧ್ಯ. ಕಾಂಗ್ರೆಸ್ ಮತದಾರರ ಪಟ್ಟಿ ಕಲೆ ಹಾಕಲು ಬಿಜೆಪಿ ಕೆಲವರನ್ನು ನೇಮಿಸಿದಂತಿದೆ ಎಂದು ಶಂಕೆ ವ್ಯಕ್ತಪಡಿಸಿದರು.

ಶಿವಾಜಿ ನಗರದಲ್ಲಿ ಮತದಾರರ ಹೆಸರು ಕೈಬಿಟ್ಟಿರುವ ಬಗ್ಗೆ ಮಾಹಿತಿ ಇದ್ದು, ರಿಜ್ವಾನ್ ಅರ್ಷದ್ ದೂರು ನೀಡಿದ್ದಾರೆ. ಆದರೆ, ಆಳಂದಲ್ಲಿ ಬೇರೆ ಮಾದರಿಯಲ್ಲಿ ಅಕ್ರಮ ಮಾಡಲಾಗಿದೆ. ಇಷ್ಟು ವ್ಯವಸ್ಥಿತವಾಗಿ ಮಾಡುತ್ತಿರುವವರು ಯಾರು ಎಂಬುದನ್ನು ಆಯೋಗ ತನಿಖೆ ಮೂಲಕ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಆರು ಸಾವಿರಕ್ಕೂ ಹೆಚ್ಚು ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ರದ್ದು ಮಾಡುವಂತೆ ಮನವಿ ಬಂದಿದ್ದು, ಬಹುತೇಕ ಮತದಾರರು ತಾವುಗಳು ಅರ್ಜಿ ಹಾಕಿಲ್ಲ. ಅವರ ಬದಲಿಗೆ ಬೇರೆಯವರು ಹೆಸರು ರದ್ದು ಮಾಡುವಂತೆ ಅರ್ಜಿ ಹಾಕಿದ್ದಾರೆ ಎಂದರು.

ಈ ಬಗ್ಗೆ ಚುನಾವಣಾ ಆಯೋಗದ ಮುಖ್ಯಸ್ಥರಿಗೆ ದೂರು ನೀಡಿದ್ದೇವೆ. ಈ ಅರ್ಜಿ ಹಾಕಿರುವವರ ದೂರವಾಣಿ ಸಂಖ್ಯೆಯನ್ನು ಕರೆ ಮಾಡಿದರೆ ಆಂಧ್ರಪ್ರದೇಶ, ಉತ್ತರ ಪ್ರದೇಶ, ಬಿಹಾರ ಬೇರೆ ರಾಜ್ಯ ಹಾಗೂ ಮಂಡ್ಯ ಹಾಗೂ ಇತರ ಜಿಲ್ಲೆಯವರು ಮಾತನಾಡುತ್ತಾರೆ. ಈ ವಿಚಾರವನ್ನು ನಾವು ಚುನಾವಣಾ ಆಯೋಗದ ಗಮನಕ್ಕೆ ತಾರದೆ ಇದ್ದಿದ್ದರೆ ಈ ಮತದಾರರ ಹೆಸರು ಪಟ್ಟಿಯಿಂದ ಕೈ ಬಿಡಲಾಗುತ್ತಿತ್ತು. ಮತ ಚಲಾವಣೆ ಮೂಲಭೂತ ಹಕ್ಕು, ಇದನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

'ಬಿಜೆಪಿ ಹೇಳುವ ಯುಪಿ ಮಾದರಿ ಇದೇನಾ?':

‘ಮತದಾರರ ಹೆಸರನ್ನು ಕೈಬಿಡುವಂತೆ ಅರ್ಜಿ ಹಾಕಿರುವವರಲ್ಲಿ ಬಹುತೇಕರು ಯುಪಿ ಬಿಹಾರದವರಾಗಿದ್ದಾರೆ. ಬಿಜೆಪಿ ಹೇಳುವ ಯುಪಿ ಮಾದರಿ ಇದೇನಾ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ಎಷ್ಟೇ ತಿಪ್ಪರಲಾಗ ಹಾಕಿದರೂ ನೀವು ಮತ್ತೆ ಅಧಿಕಾರಕ್ಕೆ ಬರಲ್ಲ. ನೀವು ಅಮಿತ್ ಶಾ, ನಾಡ್ಡಾ ಅವರನ್ನು ಎಷ್ಟು ಸಾರಿ ಕರಿಸಿದರು, ಬಿಜೆಪಿ ಸೋಲಿಸಲು ಜನ ತೀರ್ಮಾನ ಮಾಡಿದ್ದಾರೆ’

-ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ

Similar News