ರೂಪಾ-ರೋಹಿಣಿ ಸಿಂಧೂರಿ ಜಟಾಪಟಿ | ಮುಖ್ಯ ಕಾರ್ಯದರ್ಶಿಗೆ ಅಧಿಕಾರಿಗಳಿಬ್ಬರ ದೂರು, ನೋಟಿಸ್ ನೀಡಲು ಸಿಎಂ ಸೂಚನೆ

ಇನ್ನೂ ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ ಕಾನೂನು ಸಚಿವ

Update: 2023-02-20 13:44 GMT

ಬೆಂಗಳೂರು, ಫೆ. 20: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ನಡುವಿನ ಜಟಾಪಟಿ ಇದೀಗ ಬೀದಿಗೆ ಬಂದಿದ್ದು, ಇಬ್ಬರು ಅಧಿಕಾರಿಗಳು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪ್ರತ್ಯೇಕವಾಗಿ ದೂರು ನೀಡಿದ್ದಾರೆ.

ಅಧಿಕಾರಿಗಳಿಬ್ಬರ ಬಹಿರಂಗ ಜಗಳದಿಂದ ತೀವ್ರ ಮುಜುಗರಕ್ಕೆ ಸಿಲುಕಿರುವ ರಾಜ್ಯ ಸರಕಾರ, ಇಬ್ಬರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಈ ಮಧ್ಯೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಇಬ್ಬರು ಅಧಿಕಾರಿಗಳಿಗೆ ಕೂಡಲೇ ಕಾರಣ ಕೇಳಿ ಕೂಡಲೇ ನೋಟಿಸ್’ ನೀಡುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಭ್ರಷ್ಟಾಚಾರದ ಆರೋಪ: ‘ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಮಾಧ್ಯಮಗಳ ಮುಂದೆ ಮಾತಾಡಬಾರದು ಎಂದುಕೊಂಡಿದ್ದೆ. ಆದರೆ, ಅವರು ನನ್ನ ವಿರುದ್ಧ ಸಿಎಸ್‍ಗೆ ದೂರು ನೀಡಿದ್ದಾರೆ. ಹೀಗಾಗಿ ಸರಕಾರಕ್ಕೆ ಮಾಹಿತಿ ನೀಡಿದ್ದು, ರೋಹಿಣಿ ಅವರ ಫೋಟೋಗಳು ವೈಯಕ್ತಿಕ ಆಗುವುದಿಲ್ಲ. ಯಾರು ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಅದು ಹೊರಗೆ ಬರಬೇಕು’ ಎಂದು ಡಿ.ರೂಪಾ ಅವರು ಸಿ.ಎಸ್.ಗೆ ದೂರು ನೀಡಿದ ಬಳಿಕ ಪ್ರತಿಕ್ರಿಯೆ ನೀಡಿದರು.

‘ಈ ಹಿಂದೆ ರೋಹಿಣಿ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಅದನ್ನು ಮರು ತನಿಖೆಗೆ ಅನುಮತಿ ಕೊಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಈ ಮಧ್ಯೆ ಜಾಲಹಳ್ಳಿಯ ಮನೆ ಬಗ್ಗೆ ರೋಹಿಣಿ ಆಸ್ತಿ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿಲ್ಲ. ಅದರ ತನಿಖೆಗೂ ಮನವಿ ಮಾಡುತ್ತೇನೆ. ರೋಹಿಣಿಗೆ ಯಾವ ಶಕ್ತಿ ತಡೆಯುತ್ತಿದೆಯೋ ಗೊತ್ತಿಲ್ಲ. ನಮ್ಮಿಬ್ಬರ ಮಧ್ಯೆ ಯಾವುದೇ ರೀತಿಯಲ್ಲಿಯೂ ವೈಯಕ್ತಿಕ ವಿಚಾರ ಇಲ್ಲ’ ಎಂದು ರೂಪಾ ಸ್ಪಷ್ಟಣೆ ನೀಡಿದರು.

ನಾಲ್ಕು ಪುಟಗಳ ದೂರು: ಮತ್ತೊಂದೆಡೆ ರೂಪಾ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ನಾಲ್ಕು ಪುಟಗಳ ದೂರು ನೀಡಿದ್ದಾರೆ. ರೂಪಾ ಮಾಡಿರುವ ಆರೋಪಗಳಿಗೆ ಸ್ಪಷ್ಟಣೆ ನೀಡಿದ್ದಾರೆ ಎಂದು ಹೇಳಲಾಗಿದೆ. 

‘ಯಾವುದೇ ಸರಕಾರಿ ಅಧಿಕಾರಿ, ನೌಕರರು ಮಾಧ್ಯಮಗಳ ಮುಂದೆ ಹೋಗಬಾರದು’ ಎಂಬ ನಿಯಮ ಇದೆ. ರೂಪಾ ತಮ್ಮ ಕಾರ್ಯವ್ಯಾಪ್ತಿ ಮೀರಿ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ನಾನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ. ವೈಯಕ್ತಿಕ ಆರೋಪದ ಬಗ್ಗೆ ನನ್ನ ಪತಿ ಮಾತನಾಡಿದ್ದಾರೆ. ಎಲ್ಲ ವಿವರಗಳನ್ನು ಸಿಎಸ್‍ಗೆ ನೀಡಿದ್ದೇನೆ’ ಎಂದು ರೋಹಿಣಿ ಸಿಂಧೂರಿ ಸ್ಪಷ್ಟಪಡಿಸಿದರು.

ರೋಹಿಣಿ ಪತಿಯ ಪ್ರವೇಶ: ಈ ಮಧ್ಯೆ ಐಎಎಸ್ ಅಧಿಕಾರಿ ರೋಹಿಣಿ ಅವರ ವೈಯಕ್ತಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಮೂಲಕ ತಮ್ಮ ಪತ್ನಿಯ ಘನತೆ ಚ್ಯುತಿ ತಂದಿದ್ದಾರೆಂದು ಆರೋಪಿಸಿ ಐಪಿಎಸ್ ಡಿ.ರೂಪಾ ವಿರುದ್ಧ ರೋಹಿಣಿ ಪತಿ ಸುಧೀರ್ ರೆಡ್ಡಿ, ನಗರದ ಬಾಗಲಗುಂಟೆ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.

‘ವೈಯಕ್ತಿಕ ಉದ್ದೇಶದಿಂದ ಆರೋಪಿಸಿರುವ ಡಿ.ರೂಪಾಗೆ ಮಾನಸಿಕ ತೊಂದರೆಯಿದೆ. ನಾನು ಎಲ್ಲಿಯೂ ನನ್ನ ಪತ್ನಿಯ ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ನಮ್ಮ ವಿರುದ್ಧ ಮಾತನಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ. ನಾನು ಯಾವತ್ತೂ ಮಾಧ್ಯಮಗಳ ಮುಂದೆ ಬಂದವನಲ್ಲ. ಆದರೆ, ಈ ವಿಚಾರ ತೀರಾ ವೈಯಕ್ತಿಕವಾಗಿರುವುದರಿಂದ ಮಾತನಾಡುತ್ತಿದ್ದೇನೆ. ರೂಪಾಗೆ ಅಸೂಯೆ. ಹೀಗಾಗಿ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಅವರಿಗೆ ಪ್ರಚಾರ ಗೀಳು ಇದೆ ಎಂದು ಸುಧೀರ್ ರೆಡ್ಡಿ ದೂರಿದ್ದಾರೆ. 

‘ಇಬ್ಬರು ಅಧಿಕಾರಿಗಳು ತಮ್ಮ ಇತಿ-ಮಿತಿಯಲ್ಲಿ ಇರಬೇಕು. ಅವರವರ ಮನೆ ವಿಚಾರಗಳನ್ನು ಸಾರ್ವಜನಿಕವಾಗಿ ಮಾತನಾಡುವ ಮುನ್ನ ತಾವು ಯಾವ ಸ್ಥಾನದಲ್ಲಿದ್ದೇವೆಂಬುದನ್ನು ಆಲೋಚಿಸಬೇಕು. ಇದು ಅವರ ವೈಯಕ್ತಿಕ ಆಟ ಎಂದು ಸುಮ್ಮನಿದ್ದೆವು. ಹೀಗೆ ಮುಂದುವರೆದರೆ ಕ್ರಮ ಕೈಗೊಳ್ಳುವುದು ಅನಿವಾರ್ಯ. ವಿಧಾನಸೌಧದ ವರೆಗೆ ಬಂದರೆ ಇನ್ನೂ ಸುಮ್ಮನಿರಲು ಸಾಧ್ಯವಿಲ್ಲ. ಸಿಎಂ ಜತೆ ಚರ್ಚಿಸಿ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ’

-ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ 

Similar News