ಬೆಂಗಳೂರು: ನಿಯಮಬಾಹಿರ ಶುಲ್ಕವನ್ನು ಹಿಂಪಡೆಯುವಂತೆ ಅಜೀಂ ಪ್ರೇಮ್‌ಜಿ ವಿವಿಯಲ್ಲಿ ಪ್ರತಿಭಟನೆ
ಬೆಂಗಳೂರು, ಫೆ.20: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯು ಹಾಸ್ಟೆಲ್‌ನಿಂದ ಕ್ಯಾಂಪಸ್‌ಗೆ ಬರುವ ಹಾಗೂ ಹೋಗುವ ನಿಯಮಬಾಹಿರ ಶುಲ್ಕವನ್ನು(ಶಟಲ್ ಶುಲ್ಕ) ರದ್ದುಗೊಳಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಎಂಟು ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಆಡಳಿತವು ಕ್ಯಾಂಪಸ್‌ನಿಂದ 3 ಕಿ.ಮೀ. ದೂರದಲ್ಲಿರುವ ಹಾಸ್ಟೆಲ್‌ನಲ್ಲಿ ವಾಸಿಸುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರತಿ ಸೆಮಿಸ್ಟರ್‌ಗೆ ಸುಮಾರು 8 ಸಾವಿರ ಶುಲ್ಕವನ್ನು ವಿಧಿಸಿದೆ. ಕಾಲೇಜು ವೆಬ್‌ಸೈಟ್ ಅಥವಾ ಪ್ರವೇಶ ಪ್ರಕ್ರಿಯೆಗಳಲ್ಲಿ ಶಟಲ್ ಶುಲ್ಕಗಳ ಬಗ್ಗೆ ಯಾವುದೇ ಉಲ್ಲೇಖ ಇರುವುದಿಲ್ಲ. ಆದರೆ ಶಟಲ್ ಶುಲ್ಕವನ್ನು ಪಾವತಿ ಮಾಡಬೇಕು ಎಂದು ವಿವಿಯ ಆಡಳಿತ ಮಂಡಳಿಯು ಒತ್ತಾಯಿಸುತ್ತಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.
ಆಡಳಿತ ಮಂಡಳಿಯ ಶುಲ್ಕ ವಸೂಲಿಯ ಒತ್ತಡದಿಂದಾಗಿ ವಿದ್ಯಾರ್ಥಿಗಳು ತೀವ್ರ ಮಾನಸಿಕ ಯಾತನೆಯನ್ನು ಅನುಭವಿಸುತ್ತಿದ್ದಾರೆ. ಶಟಲ್ ಸೇವೆಯನ್ನು ವಿದ್ಯಾರ್ಥಿಗಳು ಬಳಸುತ್ತಾರೆಯೇ ಇಲ್ಲವೇ ಎಂಬುದನ್ನು ಪರಿಗಣಿಸದೆ ಎಲ್ಲ ವಿದ್ಯಾರ್ಥಿಗಳು ಶುಲ್ಕ ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ವಿದ್ಯಾರ್ಥಿಗಳು ಸತತ ಎಂಟು ದಿನಗಳ ಕಾಲ ರಾತ್ರಿಯಿಡೀ ಪ್ರತಿಭಟನೆಯನ್ನು ನಡೆಸಿದರೂ, ಆಡಳಿತ ಮಂಡಳಿಯು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಶಟಲ್ ಶುಲ್ಕವನ್ನು ಪಾವತಿ ಮಾಡದಿದ್ದರೆ, ವಿದ್ಯಾರ್ಥಿಗಳ ಭದ್ರತಾ ಠೇವಣಿಯನ್ನು ಕಡಿತಗೊಳಿಸಲಾಗುತ್ತಿದೆ. ಬಾಕಿ ಉಳಿದಿರುವ ಶಟಲ್ ಹಣವನ್ನು ವಿದ್ಯಾರ್ಥಿಗಳಿಂದ ಸ್ಟೇ ಫಂಡ್‌ನಿಂದ ಕಡಿತಗೊಳಿಸಲಾಗುತ್ತಿದೆ ಎಂದು ಪ್ರತಿಭಟನಕಾರರು ತಮ್ಮ ಆಳಲನ್ನು ತೋಡಿಕೊಂಡರು.
ಆಡಳಿತ ಮಂಡಳಿಯು ಶಟಲ್ ಶುಲ್ಕದ ಸಂಪೂರ್ಣ ವಿನಾಯಿತಿಯನ್ನು ನೀಡಬೇಕು. ವಿದ್ಯಾರ್ಥಿಗಳೀಂದ ಪಡೆದ ಆಟಲ್ ಶುಲ್ಕವನ್ನು ಮರುಪಾವತಿ ಮಾಡಬೇಕು. ವಿವಿಗೆ ವಿದ್ಯಾರ್ಥಿಗಳು ಸಲ್ಲಿಸಿದ ಮನವಿ ಪತ್ರವನ್ನು ದೃಡೀಕರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.