×
Ad

ಮಂಗಳೂರು: ಮುಸ್ಲಿಂ ಬಾಂಧವ್ಯ ವೇದಿಕೆಯ ಆಶ್ರಯದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಮಾಹಿತಿ ಶಿಬಿರ

Update: 2023-02-21 20:31 IST

ಮಂಗಳೂರು: ಅಲ್ಪಸಂಖ್ಯಾತರ ಪ್ರಜಾಸತ್ತಾತ್ಮಕ ಮತ್ತು ರಾಜಕೀಯ ಬಲವರ್ಧನೆಯ ಬಗ್ಗೆ ಫೋರಮ್ ಫಾರ್ ಮೈನಾರಿಟಿ ರೈಟ್ಸ್, ಡೆಮಾಕ್ರಟಿಕ್ ಆ್ಯಂಡ್ ಪೊಲಿಟಿಕಲ್ ಎಂಪವರ್ ಮೆಂಟ್ ಬೆಂಗಳೂರು ಮತ್ತು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಇವರ ಆಶ್ರಯದಲ್ಲಿ ಮಂಗಳೂರಿನ ಹಂಪನಕಟ್ಟೆಯ ಆಶೀರ್ವಾದ್ ಹಾಲ್ ನಲ್ಲಿ ಅಲ್ಪಸಂಖ್ಯಾತರಿಗೆ ಮಾಹಿತಿ ಕಾರ್ಯಾಗಾರ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಫೋರಮ್ ಫಾರ್ ಮೈನಾರಿಟಿ ಇದರ ಅಧ್ಯಕ್ಷ ಮೆಹರೋಝ್ ಖಾನ್ "ಅಲ್ಪಸಂಖ್ಯಾತರು ದೇಶದ ರಾಜಕಾರಣದಲ್ಲಿ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಿಯಾಶೀಲ ಭೂಮಿಕೆ ನಿಭಾಯಿಸಬೇಕು. ರಾಜಕೀಯ ಕಾರಣದಿಂದ ಸಮಾಜದಲ್ಲಿ ಸೃಷ್ಟಿಯಾಗಿರುವ ಅನಗತ್ಯ ಅಂತರವನ್ನು ನಿವಾರಿಸಲು ಬಹುಸಂಖ್ಯಾತ ಸಮುದಾಯದೊಂದಿಗೆ ಸೌಹಾರ್ದ ಸ್ಥಾಪಿಸುವ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ರಾಜಕಾರಣಿಗಳ ಕೋಮು ಧ್ರುವೀಕರಣದ ರಾಜಕೀಯವನ್ನು ವಿಫಲಗೊಳಿಸಬೇಕು" ಎಂದು ಹೇಳಿದರು.

ಮುಸ್ಲಿಂ ಬಾಂಧವ್ಯ ವೇದಿಕೆಯ ಅಧ್ಯಕ್ಷ ಯಾಸೀನ್ ಶಿರೂರ್ ಮಾತನಾಡಿ "ನಾಡಿನ ಸಾಮರಸ್ಯ ಮತ್ತು ಶಾಂತಿಗಾಗಿ ವೇದಿಕೆ ನಿರಂತರ ಶ್ರಮಿಸಲಿದೆ. ಸಮುದಾಯಗಳ ನಡುವೆ ಕಾಲಕಾಲಕ್ಕೆ ಮೂಡುವ ಅಪನಂಬಿಕೆಯನ್ನು ಹೋಗಲಾಡಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ಮುಸ್ಲಿಂ ಬಾಂಧವ್ಯ ವೇದಿಕೆಯು ಲೇಖಕರು, ಚಿಂತಕರು, ಸಾಹಿತಿಗಳ ವೇದಿಕೆಯಾಗಿರುವುದು ಮಾತ್ರವಲ್ಲ ಕರ್ನಾಟಕದಲ್ಲಿ ಈ ಸ್ವರೂಪದ ಪ್ರಪ್ರಥಮ ವೇದಿಕೆಯಾಗಿದ್ದು ಮುಂಬರುವ ದಿನಗಳಲ್ಲಿ ಸಮಾಜದಲ್ಲಿ ಬಹಳ ಕ್ರಿಯಾಶೀಲ ಭೂಮಿಕೆ ನಿಭಾಯಿಸಲಿದೆ" ಎಂದು ಹೇಳಿದರು.

ಮಾಹಿತಿ ಶಿಬಿರದಲ್ಲಿ ಮಾಜಿ ಶಾಸಕ ಮೊಯ್ದಿನ್ ಬಾವ, ಮಾಜಿ ಮೇಯರ್ ಅಶ್ರಫ್, ಉಡುಪಿಯ ಅಲ್ ಇಬಾದ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅಬ್ದುಲ್ ಲತೀಫ್ ಮದನಿ, ಬಾಂಧವ್ಯ ವೇದಿಕೆಯ ಕಾರ್ಯದರ್ಶಿ ನಿಸಾರ್ ಅಹ್ಮದ್‌, ಅಬ್ದುಲ್‌ ನಾಸಿರ್‌ ಲಕ್ಕಿಸ್ಟಾರ್‌, ಎಸ್.ಎಂ. ರಶೀದ್‌ ಹಾಜಿ, ಮುಮ್ತಾಝ್‌ ಅಲಿ, ಕೆ. ಮುಹಮ್ಮದ್‌ ಹಾರಿಸ್‌, ಉಮರ್ ಕುಂಞಿ ಸಾಲೆತ್ತೂರ್, ಹಬೀಬ್ ಖಾದರ್, ಶರ್ಫುದ್ದೀನ್ ಕಾಪು, ಮುಬೀನ್ ಸುಳ್ಯ, ಶಬೀರ್ ಆಹ್ಮದ್, ಆರ್ ಎ ಲೋಹಾನಿ, ಎಕೆ ಕುಕ್ಕಿಲ, ಅಶ್ರಫ್ ಕುಂದಾಪುರ, ಇಕ್ಬಾಲ್ ಹಾಲಾಡಿ, ರಶೀದ್ ಉಬರ್, ಅಝೀಝ್ ಅಹ್ಮದ್ ಉಡುಪಿ, ಯುಟಿ ಇರ್ಷಾದ್, ಸೈಫ್ ಬಜ್ಪೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Similar News