ಬಿಡಿಎ ಪರಿಹಾರ ತನಿಖೆಗೆ ಪಟ್ಟು: ಸದನದ ಬಾವಿಗಿಳಿದು ಧರಣಿ ನಡೆಸಿದ ವಿಪಕ್ಷ
ಬೆಂಗಳೂರು,ಫೆ.21: ಬಿಡಿಎ ವ್ಯಾಪ್ತಿಯ ನಾಗವಾರದಲ್ಲಿ ಭೂಸ್ವಾದೀನಪಡಿಸಿಕೊಂಡ 38ಗುಂಟೆ ಪೈಕಿ 12 ಗುಂಟೆಗೆ 22 ಕೋಟಿ ರೂ. ಪರಿಹಾರ ನೀಡಿದ ವಿಷಯವನ್ನು ತನಿಖೆ ನಡೆಸುವಂತೆ ಕಾಂಗ್ರೆಸ್ ಸದಸ್ಯರು ಮತ್ತು ಜೆಡಿಎಸ್‍ನ ಮರಿತಿಬ್ಬೇಗೌಡ ಅವರು ಸದನದ ಬಾವಿಗಿಳಿದು ಧರಣಿ ನಡೆಸಿದರು.
ಮಂಗಳವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪ ವೇಳೆ ಬಿಡಿಎ ಜಾಗಕ್ಕೆ ಬಿಎಂಆರ್‍ಸಿಎಲ್‍ನಿಂದ 22 ಕೋಟಿ ರೂ. ಪರಿಹಾರ ಪಡೆದು ಖಾಸಗಿಯವರಿಗೆ ನೀಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರು ಕೈಗಾರಿಕಾ ಸಚಿವ ಮುರುಗೇಶ್‍ನಿರಾಣಿ ಅವರನ್ನು ಆಗ್ರಹಿಸಿದರು.
ಇದಕ್ಕೆ ಮುರುಗೇಶ್‍ನಿರಾಣಿ ಪ್ರತಿಕ್ರಿಯಿಸಿ, ನಾಗವಾರದಲ್ಲಿ 2003-04ನೆ ಸಾಲಿನಲ್ಲಿ 32 ಗುಂಟೆ ಜಮೀನನ್ನು ಭೂಸ್ವಾದೀನ ಮಾಡಿಕೊಳ್ಳಲಾಗಿತ್ತು. ಅದರಲ್ಲಿ 12 ಗುಂಟೆ ಜಮೀನಿಗೆ 2004-2018ರ ತನಕ ಭೂಮಾಲಕರಿಗೆ ಪರಿಹಾರ ಸಿಕ್ಕಿರಲಿಲ್ಲ. ಈ ಸಂಬಂಧ ಕಾನೂನು ಅಭಿಪ್ರಾಯ ಪಡೆದು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ನಿರ್ಧರಿಸಲಾಯಿತು. ಕಾನೂನು ಪ್ರಕಾರವೇ ಪರಿಹಾರ ನೀಡಲಾಗಿದೆ. ಯಾವುದೇ ಲೋಪವಾಗಿಲ್ಲ. ಈ ಸಂಬಂಧ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಪ್ರಮೇಯವೂ ಬರುವುದಿಲ್ಲ ಎಂದು ಉತ್ತರಿಸಿದರು.
ಬಳಿಕ ಮರಿತಿಬ್ಬೇಗೌಡ ಪ್ರಸ್ತಾಪಿಸಿ, ಬಿಡಿಎಕೈಗೊಂಡ ನಿಯಮದ ಪ್ರಕಾರ ಮುಂದುವರೆಯುತ್ತಿರೋ ಅಥವಾ ಕಾನೂನು ಸಲಹೆ ಮೇರೆಗೆ ಮುಂದುವರೆಯುತ್ತೀರೋ ಎಂಬುದನ್ನು ಸ್ಪಷ್ಟಪಡಿಸಿ, ಇಲ್ಲದಿದ್ದರೆ ನಿಮಗೆ ಯೋಗ್ಯತೆ ಇದೆಯೇ ಎಂದು ಸಚಿವರನ್ನು ಖಾರವಾಗಿ ಪ್ರಶ್ನೆ ಮಾಡಿದರು.
ಮರಿತಿಬ್ಬೇಗೌಡರು ಬಳಸಿದ ಪದದಿಂದ ಕೋಪಗೊಂಡ ಸಚಿವ ಮುರುಗೇಶ್ ನಿರಾಣಿ, ಯೋಗ್ಯತೆ ಪದ ಬಳಸಬೇಡಿ ಎಂದು ತಿರುಗೇಟು ನೀಡಿದರು. ಇದರಿಂದ ಕೆಲಕಾಲ ಆರೋಪ ಪ್ರತ್ಯಾರೋಪ ನಡೆಯಿತು. ಈ ಸಂದರ್ಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಮತ್ತೊಂದು ಪ್ರಶ್ನೆ ಕೇಳಲು ಮುಂದಾಗುತ್ತಿದ್ದಂತೆಯೇ ಮರಿತಿಬ್ಬೇಗೌಡ ಅವರು ನನ್ನ ಪ್ರಶ್ನೆಗೆ ಉತ್ತರ ಕೊಡಲು ಸಚಿವರಿಗೆ ಸೂಚಿಸಿ ಎಂದು ಪಟ್ಟುಹಿಡಿದರು.
ಬಳಿಕ ಆಡಳಿತ ಪಕ್ಷದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ, ಮರಿತಿಬ್ಬೇಗೌಡರು ಹೇಳಿದಂತೆ ಕೇಳಬೇಡಿ ಎಂದು ಸಭಾಪತಿಗಳಿಗೆ ಸಲಹೆ ನೀಡಿದರು. ಈ ಹಂತದಲ್ಲಿ ಎದ್ದು ನಿಂತ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ವೈ.ಎ.ನಾರಾಯಣಸ್ವಾಮಿ ಅವರು ಸಭಾಪತಿ ನಿರ್ದೇಶನ ನೀಡುತ್ತಿದ್ದಾರೆ. ಅವರ ಮಾತು ಕೇಳದೆ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಸಚಿವರಿಂದ ಉತ್ತರ ಕೊಡಿಸಿ ಎಂದು ಬಿ.ಕೆ. ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ಸದಸ್ಯರು ಬೆಂಬಲಕ್ಕೆ ನಿಂತರು.
ಈ ಹಂತದಲ್ಲಿ ಕಾಂಗ್ರೆಸ್ ಸದಸ್ಯರು ಮತ್ತು ವೈ.ಎ.ನಾರಾಯಣಸ್ವಾಮಿ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ವೈ.ಎ.ನಾರಾಯಣಸ್ವಾಮಿ ಅವರು, ನೀವೇನೂ ಮಾಡಲು ಆಗುವುದಿಲ್ಲ ಎನ್ನುತ್ತಿದ್ದಂತೆಯೇ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಮತ್ತಿತರ ಕಾಂಗ್ರೆಸ್ ಸದಸ್ಯರು, ಈ ರೀತಿ ಅಂದರೇ ಏನು ಎಂದು ಆಕ್ರೋಶ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಧರಣಿ ನಡೆಸಿ, ಉತ್ತರ ನೀಡುವಂತೆ ಆಗ್ರಹಿಸಿದರು.
ಮಧ್ಯ ಪ್ರವೇಶಿಸಿದ ಆಡಳಿತ ಪಕ್ಷದ ಸದಸ್ಯ ಪುಟ್ಟಣ್ಣ ಅವರು, ಮರಿತಿಬ್ಬೇಗೌಡ ಅವರು ಕೇಳಿದ ಪ್ರಶ್ನೆ ಸಂಬಂಧ ತನಿಖೆ ನಡೆಸಲು ಸರ್ಕಾರಕ್ಕೆ ಸೂಚಿಸಿ ಎಂದು ಸಲಹೆ ನೀಡಿದರು. ಇದರ ನಡುವೆ ಆಡಳಿತ ಮತ್ತು ಪ್ರತಿಪಕ್ಷ ಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಸಭಾಪತಿ ಬಸವರಾಜಹೊರಟ್ಟಿ ಅವರು, ಯಾವುದೇ ವಿಷಯ ಕಡತಕ್ಕೆ ಹೋಗದಂತೆ ಆದೇಶಿಸಿದರು.
ತದನಂತರ ಸಭಾಪತಿ, ಈ ಸಂಬಂಧ ನಾನು ರೂಲಿಂಗ್ ನೀಡಿದ್ದೇನೆ. ಮರಿತಿಬ್ಬೇಗೌಡ ಅವರು ಈ ವಿಷಯದ ಬಗ್ಗೆ ಚರ್ಚೆ ನಡೆಸಬೇಕು ಎಂದರೆ ಬೇರೆ ನಿಯಮದಡಿ ನೋಟಿಸ್ ಕೊಡಿ. ನಾಳೆ ಅಥವಾ ನಾಡಿದ್ದು ಕೈಗೆತ್ತಿಕೊಳ್ಳುತ್ತೇನೆ ಎಂದು ಭರವಸೆ ನೀಡಿದಾಗ ಧರಣಿಯನ್ನು ಹಿಂಪಡೆದರು.